
ಬೆಂಗಳೂರು : ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣ, ಪತಿಯ ಫೋನ್ ಪೇ ಮೆಸೇಜ್ ನಲ್ಲಿ ಬಯಲಾಯ್ತು ಸ್ಪೋಟಕ ಮಾಹಿತಿ.!

news.ashwasurya.in
ಅಶ್ವಸೂರ್ಯ/ಬೆಂಗಳೂರು : ರಾಜಧಾನಿಯ ಮಾರತ್ತಹಳ್ಳಿಯಲ್ಲಿ ನಡೆದಿದ್ದ ಚರ್ಮರೋಗ ತಜ್ಞೆ ಡಾ. ಕೃತಿಕಾ ರೆಡ್ಡಿ ಅವರ ಹತ್ಯೆಗೆ ಸಂಬಂಧಿಸಿದಂತೆ ತಾಂತ್ರಿಕ ಸಾಕ್ಷ್ಯಗಳು ಲಭ್ಯವಾಗಿದ್ದು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಆರಂಭದಲ್ಲಿ ಇದನ್ನು ಸಹಜ ಸಾವು ಎಂದು ಬಿಂಬಿಸಲು ಆರೋಪಿ ಪತಿ ಮಹೇಂದ್ರ ರೆಡ್ಡಿ ಹರಸಾಹಸ ಪಟ್ಟಿದ್ದರೂ, ವಿಧಿ ವಿಜ್ಞಾನ ಪ್ರಯೋಗಾಲಯ ರಿಟ್ರೀವ್ ಮಾಡಿರುವ ಡಿಜಿಟಲ್ ಮಾಹಿತಿಗಳು ಆತನ ಕೊಲೆ ಕೃತ್ಯವನ್ನು ಎಳೆಎಳೆಯಾಗಿ ಬಯಲುಮಾಡಿದೆ.
ವಿಶೇಷವೆಂದರೆ, ಪೊಲೀಸರ ಕಣ್ಣು ತಪ್ಪಿಸಲು ಆರೋಪಿಯು ಹಣ ವರ್ಗಾವಣೆಯ ‘ಫೋನ್ ಪೇ’ ಆ್ಯಪ್ ಅನ್ನು ಸಂವಹನಕ್ಕೆ ಬಳಸಿಕೊಂಡಿದ್ದು, ಅಲ್ಲಿಯೇ ತನ್ನ ಪೈಶಾಚಿಕ ಕೃತ್ಯದ ಬಗ್ಗೆ ಪ್ರಿಯತಮೆಯ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಮಾರತ್ತಹಳ್ಳಿಯಲ್ಲಿ ಡರ್ಮಟಾಲಜಿಸ್ಟ್ ಆಗಿದ್ದ ಕೃತಿಕಾ ರೆಡ್ಡಿ ಅವರನ್ನು ಪತಿ ಮಹೇಂದ್ರ ರೆಡ್ಡಿಯೇ ಐವಿ ಫ್ಲ್ಯೂಯೆಡ್ ಮೂಲಕ ಅನಸ್ತೇಶಿಯಾ ನೀಡಿ ಕೊಲೆ ಮಾಡಿದ್ದನು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೇಹದೊಳಗೆ ಲಭ್ಯವಾದ ರಾಸಾಯನಿಕ ಅಂಶಗಳು ಇದು ವ್ಯವಸ್ಥಿತ ಕೊಲೆ ಎಂಬುದನ್ನು ಸಾಬೀತುಪಡಿಸಿದ್ದವು.
ಈ ಬಗ್ಗೆ ತನಿಖೆ ಮುಂದುವರಿಸಿದ ಪೊಲೀಸರಿಗೆ ಮಹೇಂದ್ರ ರೆಡ್ಡಿಯ ಅಕ್ರಮ ಸಂಬಂಧ ಮತ್ತು ಹಣದಾಸೆಯ ವಿಷಯಗಳು ತಿಳಿದುಬಂದಿದ್ದವು. 2022ರಿಂದಲೇ ಪ್ರೀತಿಯಲ್ಲಿದ್ದ ಯುವತಿಯೊಂದಿಗೆ ಜೀವನ ನಡೆಸಲು ಅಡ್ಡಿಯಾಗಿದ್ದ ಪತ್ನಿಯನ್ನು, ವೈದ್ಯಕೀಯ ಜ್ಞಾನವನ್ನೇ ಅಸ್ತ್ರವಾಗಿ ಬಳಸಿಕೊಂಡು ಆತ ಸಂಚು ಹೂಡಿ ಪತ್ನಿಯನ್ನು ಕೊಂದು ಮುಗಿಸಿದ್ದ.!

ಪ್ರಕರಣದಲ್ಲಿ ಅತ್ಯಂತ ಸ್ಫೋಟಕ ತಿರುವು ಎಂದರೆ ಆರೋಪಿ ಮಹೇಂದ್ರ ರೆಡ್ಡಿ ತನ್ನ ಪ್ರಿಯತಮೆಗೆ ಕಳುಹಿಸಿದ್ದ ಸಂದೇಶಗಳು. ಪೊಲೀಸರು ಆರೋಪಿಯ ಮೊಬೈಲ್ ಅನ್ನು ಎಫ್ಎಸ್ಎಲ್ಗೆ ಕಳುಹಿಸಿದಾಗ, ಅದರಲ್ಲಿ ಬರೋಬ್ಬರಿ 10.34 ಲಕ್ಷ ಡಿಜಿಟಲ್ ಫೈಲ್ಗಳನ್ನು ರಿಟ್ರೀವ್ ಮಾಡಲಾಗಿದೆ. ಈ ಪೈಕಿ 485ಕ್ಕೂ ಹೆಚ್ಚು ಫೋನ್ ಪೇ ಚಾಟ್ಗಳು ಪತ್ತೆಯಾಗಿದ್ದು, ಅದರಲ್ಲಿ ಆತ “ನಾನೇ ಕೃತಿಕಾಳನ್ನು ಕೊಂದಿದ್ದೇನೆ, ಆದರೆ ನನ್ನ ಬಳಿ ಯಾವುದೇ ಪುರಾವೆ ಇಲ್ಲ; ನಾನು ಜೈಲಿಗೆ ಹೋಗುತ್ತೇನೆ, ನೀವೆಲ್ಲರೂ ಸಂತೋಷವಾಗಿರಿ” ಎಂದು ಬರೆದುಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಪೊಲೀಸರು ವಿಚಾರಣೆಗೆ ಕರೆದರೆ ಕೇವಲ ಸ್ನೇಹಿತರು ಎಂದು ಹೇಳುವಂತೆ ಹಾಗೂ ಆಸ್ಪತ್ರೆಯ ಕೆಲಸದ ನಿಮಿತ್ತ ಕರೆ ಮಾಡುತ್ತಿದ್ದೆ ಎಂದು ಸುಳ್ಳು ಹೇಳುವಂತೆ ಪ್ರಿಯತಮೆಗೆ ಸೂಚನೆ ನೀಡಿರುವುದು ಈಗ ತಾಂತ್ರಿಕವಾಗಿ ಸಾಬೀತಾಗಿದೆ.
ಈಗಾಗಲೇ ಜೈಲಿನಲ್ಲಿರುವ ಮಹೇಂದ್ರ ರೆಡ್ಡಿಯ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯವು ವಜಾಗೊಳಿಸಿದೆ. ಇಷ್ಟೊಂದು ಬಲಿಷ್ಠವಾದ ಡಿಜಿಟಲ್ ಪುರಾವೆಗಳು ಲಭ್ಯವಾಗಿರುವುದರಿಂದ, ಪೊಲೀಸರು ಈ ಎಲ್ಲಾ ಸಾಕ್ಷ್ಯಗಳನ್ನು ಒಳಗೊಂಡ ಹೆಚ್ಚುವರಿ ದೋಷಾರೋಪಣ ಪಟ್ಟಿಯನ್ನು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಕೊಲೆಗಾರ ಎಷ್ಟೇ ಜಾಣನಾಗಿದ್ದರೂ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ಈ ಪ್ರಕರಣದ ತಾಂತ್ರಿಕ ತನಿಖೆಯೇ ಬಲವಾದ ಸಾಕ್ಷಿಯಾಗಿದೆ.


