ಸುಳ್ಯ: ಹೆಚ್ಚು ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಯುವಕನಿಗೆ “ವಿಶಿಷ್ಟ ಶಿಕ್ಷೆ” ನೀಡಿದ ನ್ಯಾಯಲಯ.
news.ashwasurya.in
ಅಶ್ವಸೂರ್ಯ/ಸುಳ್ಯ: ಸಂಚಾರ ನಿಯಮಗಳನ್ನು ಪದೆ ಪದೇ ಉಲ್ಲಂಘಿಸುವವರಿಗೆ ದಂಡ ಪಾವತಿಸುವುದು ಸುಲಭದ ಕೆಲಸವಾಗಿಬಿಟ್ಟಿದೆ. ಆದರೆ, ಸುಳ್ಯದ ನ್ಯಾಯಾಲಯವು ಸಂಚಾರ ನಿಯಮ ಪದೇ ಪದೇ ಉಲ್ಲಂಘಿಸಿದ ಯುವಕನಿಗೆ ದಂಡದ ಜೊತೆ ಸಮುದಾಯ ಸೇವೆ ಮಾಡುವಂತೆ ಅಪರೂಪದ ಶಿಕ್ಷೆ ವಿಧಿಸಿ ಆದೇಶಿಸಿದೆ.
ಸುಳ್ಯ ನಿವಾಸಿ ರಕ್ಷಿತ್ ಎಂಬಾತ ಹಲವು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದ. ಈತನ ವಿರುದ್ಧ ಸುಳ್ಯ ಪೊಲೀಸ್ ಉಪ ನಿರೀಕ್ಷಕ ಸಂತೋಷ್ ಬಿ.ಪಿ. ಅವರು ಐಎಂವಿ ಕಾಯ್ದೆಯಡಿ ಮೂರು ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಳ್ಯದ ಜೆಎಂಎಫ್ಸಿ ನ್ಯಾಯಾಲಯವು ಈಗ ಕಠಿಣ ಮತ್ತು ಅರ್ಥಪೂರ್ಣ ಶಿಕ್ಷೆ ನೀಡಿದೆ.

ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಎರಡು ಪ್ರಕರಣಗಳಲ್ಲಿ ಒಟ್ಟು 3,000 ರೂ. ದಂಡ ವಿಧಿಸಿದೆ. ಅಲ್ಲದೇ, ನ್ಯಾಯಾಲಯವು ಆರೋಪಿಗೆ ಮೂರೂ ಪ್ರಕರಣಗಳಲ್ಲಿಯೂ ತಲಾ ಐದು ದಿನಗಳಂತೆ ಒಟ್ಟು 15 ದಿನಗಳ ಕಾಲ ಸಮುದಾಯ ಸೇವೆ ಸಲ್ಲಿಸುವಂತೆ ಆದೇಶಿಸಿದೆ. ಮಾರ್ಚ್ 15 ರಿಂದ ಮಾರ್ಚ್ 29 ರವರೆಗೆ ಒಟ್ಟು 15 ದಿನಗಳ ಕಾಲ ಸುಳ್ಯ ಪೇಟೆಯ ಜಂಕ್ಷನ್ಗಳಲ್ಲಿ ಸಂಚಾರ ನಿಯಮಗಳ ಫಲಕ ಹಿಡಿದು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಅಲ್ಲದೆ ಆರೋಪಿಯ ಚಾಲನಾ ಪರವಾನಿಗೆಯನ್ನು (DL) 3 ತಿಂಗಳ ಕಾಲ ಅಮಾನತಿನಲ್ಲಿಡಲು ಆದೇಶಿಸಲಾಗಿದೆ.
ನ್ಯಾಯಾಲಯದ ಆದೇಶದಂತೆ ರಕ್ಷಿತ್ ಈಗ ಸುಳ್ಯ ಪೇಟೆಯಲ್ಲಿ ಸಂಚಾರ ಸುಗಮಗೊಳಿಸುವ ಕೆಲಸದಲ್ಲಿ ಪೊಲೀಸರಿಗೆ ಸಾಥ್ ನೀಡುತ್ತಿದ್ದಾರೆ. ತಪ್ಪು ಮಾಡಿದವರಿಗೆ ಕೇವಲ ಹಣದ ದಂಡ ಹಾಕುವ ಬದಲು, ಈ ರೀತಿ ಸಾರ್ವಜನಿಕ ಸೇವೆಯ ಶಿಕ್ಷೆ ನೀಡುವುದರಿಂದ ಇತರರಿಗೂ ಕಾನೂನು ಪಾಲನೆಯ ಪಾಠ ಅಗಲಿದೆ ಎಂದು ಸಾರ್ವಜನಿಕರು ಶ್ಲಾಘಿಸಿದ್ದಾರೆ.


