
ಧಾರವಾಡ : ಗುಂಡಾ ಕಾಯ್ದೆ ಅಡಿಯಲ್ಲಿ ರೌಡಿಶೀಟರ್ ಹ್ಯಾರೀಸ್ ಪಠಾಣ್ ಬಂಧನ.!
news.ashwasurya.in
ಅಶ್ವಸೂರ್ಯ/ಧಾರವಾಡ : ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕುಖ್ಯಾತ ರೌಡಿಶೀಟರ್ ಆಗಿದ್ದ ಹ್ಯಾರೀಸ್ ಪಠಾಣ್ ನನ್ನು ಕೊನೆಗೂ ಧಾರವಾಡದ ವಿದ್ಯಾಗಿರಿ ಠಾಣೆ ಪೊಲೀಸರು ಹೆಡಿಮುರಿ ಕಟ್ಟಿದ್ದು, ಆತನನ್ನು ರೌಡಿಶೀಟರ್ ಕಾಯ್ದೆ ಅಡಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಮಂಗಳವಾರ ಆತನನ್ನು ಬಂಧಿಸಿದ ಪೊಲೀಸರು ಅವಳಿ ನಗರದ ಕಾನೂನು ಸುವ್ಯವಸ್ಥೆ ಮತ್ತು ವಿಶೇಷವಾಗಿ ನಗರದಲ್ಲಿ ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ಆತನನ್ನು ಮೈಸೂರು ಕೇಂದ್ರ ಕಾರಾಗೃಹಕ್ಕೆ ಎರಡು ವರ್ಷಗಳ ಅವಧಿಗೆ ರವಾನಿಸಿದ್ದಾರೆ.
ಹ್ಯಾರೀಸ್ ಪಠಾಣ್ ವಿರುದ್ಧ ಧಾರವಾಡದ ಉಪನಗರ, ಶಹರ ಠಾಣೆ ಹಾಗೂ ವಿದ್ಯಾಗಿರಿ ಠಾಣೆಯಲ್ಲಿ ಒಟ್ಟು ವಿವಿಧ 11 ಪ್ರಕರಣಗಳು ದಾಖಲಾಗಿದ್ದವು.
ಆತ ಈ ಹಿಂದೆ ಕುಖ್ಯಾತ ರೌಡಿಶೀಟರ್ ಆಗಿದ್ದ ದಿವಂಗತ ಫ್ರುಟ್ ಇರ್ಫಾನ್ ಬಲಗೈ ಬಂಟನಾಗಿದ್ದ. ಆತನ ಮೇಲೆ ಕ್ರಿಕೆಟ್ ಬೆಟ್ಟಿಂಗ್, ಮಾರಣಾಂತಿಕ ಹಲ್ಲೆ, ಜೀವ ಬೆದರಿಕೆ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಗುಂಪು ಕಟ್ಟಿಕೊಂಡು ಓಡಾಡುವುದು ಬೆದರಿಕೆ ಒಡ್ಡುವುದು ಮತ್ತು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವ ಕೃತ್ಯ ಎಸಗಿದ್ದ ಎಂದು ಪೊಲೀಸ್ ದಾಖಲೆಗಳು ಹೇಳುತ್ತಿವೆ.

ಈ ಹಿನ್ನಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಅವಳಿ ನಗರದ ರೌಡಿಶೀಟರ್ಗಳ ವಿರುದ್ದ ಸಮರ ಮುಂದುವರೆಸಿದ್ದು ಇದರ ಭಾಗವಾಗಿ ಗೂಂಡಾ ಕಾಯ್ದೆಯಡಿ ಆತನನ್ನು ಬಂಧಿಸಿ, ಮೈಸೂರು ಜೈಲಿಗೆ ಎರಡು ವರ್ಷಗಳ ಅವಧಿಗಾಗಿ ಕಳುಹಿಸಿದ್ದಾರೆ.
ಇದರಿಂದಾಗಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವ ಗೂಂಡಾಗಳಿಗೆ ದೊಡ್ಡ ಮೇಸೆಜ್ ರವಾನೆಯಾದಂತಾಗಿದೆ. ಇನ್ನೂ ಬರುವ ದಿನಗಳಲ್ಲಿ ಬಾಲ ಬಿಚ್ಚುವ ಕ್ರಿಮಿನಲ್ ಗಳಿಗೆ ತಕ್ಕ ಪಾಠವಾಗಲಿದೆ…


