
ಬಂಟ್ವಾಳ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಭೀಕರ ಹತ್ಯೆ.!! ಯುವತಿಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ ಹಂತಕ.!
ಲಾವಣ್ಯ ಅವರು ಕೆಲಸ ಮುಗಿಸಿ ಕಕ್ಕೆಪದವಿಗೆ ಹೋಗುವ ಬಸ್ ಹತ್ತಿ ಕುಳಿತಾಗ ಚೇತನ್ ಆಕೆಯ ಪಕ್ಕದಲ್ಲೇ ಬಂದು ಕುಳಿತಿದ್ದ. ಇದರಿಂದ ಗಾಬರಿಗೊಂಡ ಲಾವಣ್ಯ ತನ್ನ ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಕೆಳಗಿಳಿದಿದ್ದಾರೆ. ಆಕೆಯನ್ನು ಬೆನ್ನಟ್ಟಿದ ಆರೋಪಿ, ತನ್ನ ಬ್ಯಾಗ್ನಿಂದ ಮಚ್ಚು ಹೊರಗೆ ತೆಗೆದು ಸಾರ್ವಜನಿಕರ ಎದುರೇ ಭೀಕರವಾಗಿ ದಾಳಿ ನಡೆಸಿದ್ದಾನೆ.ದಾಳಿಯಿಂದ ತೀವ್ರ ರಕ್ತಸ್ರಾವಕ್ಕೊಳಗಾದ ಲಾವಣ್ಯ ಅವರನ್ನು ಸಾರ್ವಜನಿಕರು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ, ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಆರೋಪಿಯು ಕೃತ್ಯ ಎಸಗಿದ ಬಳಿಕ ಮಚ್ಚನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾನೆ.!….

news.ashwasurya.in
ಅಶ್ವಸೂರ್ಯ/ಬಂಟ್ವಾಳ : ಬಂಟ್ವಾಳ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಭೀಕರ ಕೃತ್ಯ.? ಯುವತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಒಂದು ನಡುಕ ಹುಟ್ಟಿಸುವಂತಹ ಹತ್ಯೆ ಪ್ರಕರಣವೊಂದು ಜುಲೈ 16ರ ಗುರುವಾರ ನಡೆದಿದೆ. ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಕಣ್ಣೆದುರೇ ಯುವತಿಯೊಬ್ಬಳನ್ನು ಮಚ್ಚಿನಿಂದ ಮನಬಂದಂತೆ ಕೊಚ್ಚಿ ಅಮಾನುಷವಾಗಿ ಕೊಲೆ ಮಾಡಲಾಗಿದೆ. ಬಂಟ್ವಾಳದ ಉಳಿಗ್ರಾಮದ ನಿವಾಸಿಯಾದ ಲಾವಣ್ಯ (21) ಕೊಲೆಯಾದ ಅಮಾಯಕ ಯುವತಿ. ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈಕೆಯನ್ನು ಹತ್ಯೆ ಮಾಡಿದ ಆರೋಪಿಯನ್ನು ಬೆಳ್ತಂಗಡಿಯ ಒಡಿಲ್ನಾಳ ನಿವಾಸಿ ಚೇತನ್ (22) ಎಂದು ಗುರುತಿಸಲಾಗಿದೆ.

ಘಟನೆಯ ಹಿನ್ನೆಲೆ.? ಲಾವಣ್ಯ ಅವರು ಎಂದಿನಂತೆ ಕಕ್ಯಪದವು ಕಡೆಗೆ ಪ್ರಯಾಣಿಸಲು ಬಸ್ ನಿಲ್ದಾಣದಲ್ಲಿದ್ದ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದರು. ಬಸ್ಸಿನಲ್ಲಿ ಕುಳಿತಿದ್ದಾಗ ಆಕೆಗೆ ಅಪರಿಚಿತ ಯುವಕನ ವರ್ತನೆ ಅನುಮಾನ ತಂದಿದ್ದು, ತಕ್ಷಣವೇ ತನ್ನ ಸಂಬಂಧಿಕರೊಬ್ಬರಿಗೆ ಮೊಬೈಲ್ ಕರೆ ಮಾಡಿ, “ನನ್ನ ಪಕ್ಕದಲ್ಲಿ ಒಬ್ಬ ಯುವಕ ಬಂದು ಕುಳಿತಿದ್ದಾನೆ” ಎಂದು ಆತಂಕದಿಂದ ತಿಳಿಸಿದ್ದರು. ಆದರೆ, ಅಷ್ಟರಲ್ಲೇ ಫೋನ್ ಸಂಪರ್ಕ ಕಡಿತಗೊಂಡಿತ್ತು. ಆ ಬಳಿಕ ಲಾವಣ್ಯ ಬಸ್ಸಿನಿಂದ ಕೆಳಗಿಳಿಯುತ್ತಿದ್ದಂತೆ, ಹಠಾತ್ತನೆ ಹಿಂಬಾಲಿಸಿದ ಆ ಯುವಕ ತನ್ನ ಬ್ಯಾಗಿನಿಂದ ತೀಕ್ಷ್ಣವಾದ ಮಚ್ಚನ್ನು ಹೊರತೆಗೆದು ಆಕೆಯ ಮೇಲೆ ಬಿಸಿದ್ದಾನೆ.!
ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿ ಪ್ರಕಾರ,ಹಂತಕ ಯುವಕನಿಂದ ತನ್ನ ಪ್ರಾಣ ಉಳಿಸಿಕೊಳ್ಳಲು ಯುವತಿ ಲಾವಣ್ಯ ತೀವ್ರವಾಗಿ ಹೋರಾಡಿದ್ದಾಳೆ. ಆದಾಗ್ಯೂ, ಆರೋಪಿ ಯುವಕ ಆಕೆಯ ಮೇಲೆ ಮೃಗಿಯಾಗಿ ಆಕೆಯ ಮೇಲೆರಗಿ ಮಚ್ಚಿನಿಂದ ಹಲ್ಲೆ ನಡೆಸಿದ ಪರಿಣಾಮ ಯುವತಿ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ.

ಕೃತ್ಯ ಎಸಗಿದ ತಕ್ಷಣವೇ ಆರೋಪಿ ಚೇತನ್ ಸ್ಥಳದಿಂದ ಓಡಿ ಹೋಗಿದ್ದಾನೆ. ಈ ಇಡೀ ಭೀಕರ ದಾಳಿಯ ದೃಶ್ಯಗಳನ್ನು ಸ್ಥಳದಲ್ಲಿದ್ದ ಪ್ರವಾಸಿ ಅಥವಾ ಸಾರ್ವಜನಿಕರೊಬ್ಬರು ರಹಸ್ಯವಾಗಿ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಪ್ರಸ್ತುತ ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಹರಿದಾಡುತ್ತಿದ್ದು, ಆರೋಪಿಯ ಪತ್ತೆಗೆ ಪೊಲೀಸರಿಗೆ ಇದು ಅತ್ಯಂತ ಪ್ರಮುಖ ಸಾಕ್ಷ್ಯವಾಗುವ ಸಾಧ್ಯತೆಯಿದೆ.

ಹಾಡು ಹಗಲೆ ಸಾರ್ವಜನಿಕರ ಎದುರಲ್ಲೆ ನಡೆದ ಈ ಭೀಕರ ಹತ್ಯೆಯಿಂದ ಬಂಟ್ವಾಳದ ಜನತೆ ಬೆಚ್ಚಿಬಿದ್ದಿದ್ದು ಅಮಾಯಕ ಯುವತಿಯ ಹತ್ಯೆ ನಂತರದಲ್ಲಿ ಸಾರ್ವಜನಿಕರಲ್ಲಿ ಆತಂಕ ವ್ಯಕ್ತವಾಗಿದ್ದು ಮಹಿಳೆಯರ ಸುರಕ್ಷತೆಯ ಬಗ್ಗೆ ತೀವ್ರ ಚರ್ಚೆಯಾಗುತ್ತಿದೆ. ಮಾಹಿತಿ ತಿಳಿಯುತ್ತಿದ್ದಂತೆ ಬಂಟ್ವಾಳ ಉಪವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಪಟ್ಟಣ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ವರ್ಗ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅರುಣ್ ಕೆ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಿಸಿದ್ದಾರೆ. ಕೊಲೆಗೆ ನಿಖರವಾದ ಕಾರಣ ಏನು ಎಂಬುದು ಸದ್ಯಕ್ಕೆ ನಿಗೂಢವಾಗಿದ್ದು, ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಿದೆ. ಸದ್ಯ ತಲೆಮರೆಸಿಕೊಂಡಿರುವ ಹಂತಕ ಚೇತನ್‌ನನ್ನು ಸೆರೆಹಿಡಿಯಲು ಪೊಲೀಸರು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದು,ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.


