ಆಗ್ರಾ : 20 ವರ್ಷ ಜೈಲುವಾಸದ ನಂತರ ನಿರಪರಾಧಿ ಎಂದು ಸಾಬೀತು.! ಹೊರಬಂದಾಗ ಮನೆ ಪಾಳುಬಿದ್ದಿತ್ತು ಕುಟುಂಬವೇ ಸಮಾಧಿಯಾಗಿತ್ತು.! ವಿಧಿ ನಿನೇಷ್ಟೂ ಕ್ರೂರಿ…..
news.ashwasurya.in
ಅಶ್ವಸೂರ್ಯ/ಉತ್ತರಪ್ರದೇಶ : ನ್ಯಾಯದೇವತೆ ಕುರುಡು ಎಂದು ಹೇಳಲಾಗುವ ಮಾತಿಗೆ ಸಾಕ್ಷಿಯಾದ ಭೀಕರ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಅತ್ಯಾಚಾರದ ಸುಳ್ಳು ಆರೋಪದ ಮೇಲೆ ಬರೋಬ್ಬರಿ 20 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ವಿಷ್ಣು ತಿವಾರಿ ಎಂಬ ವ್ಯಕ್ತಿಯ ಜೀವನ ಈಗ ಸಂಪೂರ್ಣವಾಗಿ ದುರಂತಮಯವಾಗಿದೆ. ಮಾಡದ ತಪ್ಪಿಗೆ ತನ್ನ ತಾರುಣ್ಯವನ್ನೆಲ್ಲ ಜೈಲಿನ ನಾಲ್ಕು ಗೋಡೆಯ ಕತ್ತಲ ಕೋಣೆಯಲ್ಲಿಯೆ ಕಳೆದ ಅಮಾಯಕ ವ್ಯಕ್ತಿ ಜೈಲಿನಿಂದ ಹೊರಬಂದಾಗ ತಾರುಣ್ಯವನ್ನು ಕಳೆದುಕೊಂಡಿದ್ದ ತನನ್ನು ಬರಮಾಡಿಕೊಳ್ಳಲು ಕುಟುಂಬದ ಯಾವೊಬ್ಬ ಸದಸ್ಯನೂ ಇರದಂತೆ ಎಲ್ಲರು ಸಾವಿನ ಮನೆ ಸೇರಿದ್ದರು.!
ಒಂದು ಸುಳ್ಳು ದೂರು ಮತ್ತು ಎರಡು ದಶಕಗಳ ನೋವು 2000ನೇ ಇಸವಿಯಲ್ಲಿ ಹಸುವನ್ನು ಕಟ್ಟುವ ವಿಚಾರವಾಗಿ ನಡೆದ ಅಕ್ಕಪಕ್ಕದ ಮನೆಯವರ ಸಣ್ಣ ಜಗಳ ದೊಡ್ಡ ಸ್ವರೂಪ ಪಡೆದುಕೊಂಡು ವಿಷ್ಣು ತಿವಾರಿ ಮೇಲೆ ಅತ್ಯಾಚಾರದ ಸುಳ್ಳು ಮೊಕದ್ದಮೆ ದಾಖಲಿಸಲಾಗಿತ್ತು.! ಆಗ ಕೇವಲ 23 ವರ್ಷದ ಯುವಕನಾಗಿದ್ದ ವಿಷ್ಣು ತಿವಾರಿಗೆ ವಿಚಾರಣಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಂದಿನಿಂದ ಸುಮಾರು ಎರಡು ದಶಕಗಳ ಕಾಲ ಅವರು ಜೈಲಿನಲ್ಲೇ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಯಿತು.! ಈ ಅವಧಿಯಲ್ಲಿ ಅವರಿಗೆ ಒಮ್ಮೆಯೂ ಪೆರೋಲ್ ಅಥವಾ ಜಾಮೀನು ಕೂಡ ಸಿಗಲಿಲ್ಲ. ದುರಂತವೆಂದರೆ ಅವರು ಜೈಲಿನಲ್ಲಿದ್ದಾಗಲೇ ಅವರ ತಂದೆ ತಾಯಿ ಮತ್ತು ಇಬ್ಬರು ಸಹೋದರರು ಇವರ ಕೊರಗಿನಲ್ಲೆ ಮೃತಪಟ್ಟಿದ್ದರು. ಕನಿಷ್ಠ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೂಡ ವಿಷ್ಣು ಅವರಿಗೆ ಅವಕಾಶ ಸಿಗಲಿಲ್ಲ.
ಹೋರಾಟ ಮತ್ತು ಅಂತಿಮ ನ್ಯಾಯ ಸುಮಾರು 16 ವರ್ಷಗಳ ಕಾಲ ಅವರ ಮೇಲ್ಮನವಿ ತಾಂತ್ರಿಕ ಕಾರಣಗಳಿಂದ ನ್ಯಾಯಾಲಯದಲ್ಲಿ ಧೂಳು ಹಿಡಿದು ಬಿದ್ದಿತ್ತು. ಅಂತಿಮವಾಗಿ 2019 ರಲ್ಲಿ ಕಾನೂನು ನೆರವು ಸಮಿತಿಯ ವಕೀಲೆ ಶ್ವೇತಾ ಸಿಂಗ್ ರಾಣಾ ಅವರು ಈ ಪ್ರಕರಣವನ್ನು ಕೈಗೆತ್ತಿಕೊಂಡರು. ಪ್ರಕರಣದ ಕೂಲಂಕಷ ಪರಿಶೀಲನೆ ನಡೆಸಿದ ಅಲಹಾಬಾದ್ ಹೈಕೋರ್ಟ್ 2021 ರಲ್ಲಿ ವಿಷ್ಣು ತಿವಾರಿ ನಿರಪರಾಧಿ ಎಂದು ಘೋಷಿಸಿ ಬಿಡುಗಡೆ ಮಾಡಲು ಆದೇಶಿಸಿತು. ನ್ಯಾಯಾಲಯವು ತನ್ನ ತೀರ್ಪಿನಲ್ಲಿ ತನಿಖಾಧಿಕಾರಿಗಳ ವೈಫಲ್ಯ ಮತ್ತು ಸುಳ್ಳು ವರದಿಯ ಬಗ್ಗೆ ವಿಷಾದ ವ್ಯಕ್ತಪಡಿಸಿತು.
ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶದ ಅಲೆ ಜೈಲಿನಿಂದ ಹೊರಬರುವಾಗ ವಿಷ್ಣು ತಿವಾರಿ ಬಿಕ್ಕಿ ಬಿಕ್ಕಿ ಅಳುತ್ತಿರುವ ಹಳೆಯ ವಿಡಿಯೋ ಈಗ ಮತ್ತೆ ವೈರಲ್ ಆಗುತ್ತಿದ್ದು ಅದನ್ನು ಕಂಡು ನೆಟ್ಟಿಗರು ಕಣ್ಣೀರು ಹಾಕುತ್ತಿದ್ದಾರೆ. ಸುಳ್ಳು ದೂರು ನೀಡಿ ಒಬ್ಬ ವ್ಯಕ್ತಿಯ 20 ವರ್ಷಗಳ ಬದುಕನ್ನು ನಾಶಪಡಿಸಿದ ಮಹಿಳೆಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಸರ್ಕಾರವು ವಿಷ್ಣು ಅವರಿಗೆ ದೊಡ್ಡ ಮಟ್ಟದ ಪರಿಹಾರ ನೀಡಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ. ಮನೆಯವರು ಇಲ್ಲದ ಪಾಳುಬಿದ್ದ ಮನೆ ಮತ್ತು ಮಾರಾಟವಾದ ಜಮೀನಿನ ನಡುವೆ ಇಂದು ವಿಷ್ಣು ತಿವಾರಿ ಒಂಟಿಯಾಗಿದ್ದಾರೆ.
ಸುಳ್ಳು ಆರೋಪಗಳು ಒಬ್ಬ ವ್ಯಕ್ತಿಯ ಜೀವನವನ್ನು ಮಾತ್ರವಲ್ಲದೆ ಇಡೀ ಕುಟುಂಬವನ್ನೇ ಹೇಗೆ ಸರ್ವನಾಶ ಮಾಡಬಲ್ಲವು ಎಂಬುದಕ್ಕೆ ಈ ಘಟನೆ ಕನ್ನಡಿಯಾಗಿದೆ. ವ್ಯವಸ್ಥೆಯ ಲೋಪದೋಷಗಳಿಂದಾಗಿ ಇಪ್ಪತ್ತು ವರ್ಷಗಳ ಕಾಲ ಒಬ್ಬ ನಿರಪರಾಧಿ ಶಿಕ್ಷೆ ಅನುಭವಿಸಿದ್ದು ನ್ಯಾಯಾಂಗ ವ್ಯವಸ್ಥೆಯ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ.ಆದರೆ ಎಲ್ಲವನ್ನೂ… ಕುಟುಂಬವನ್ನೂ… ಕಳೆದುಕೊಂಡ ವಿಷ್ಣು ತಿವಾರಿಯ ಬದುಕು ಮಾತ್ರ ಇಂದು ದಿಕ್ಕಿಲ್ಲದಂತಾಗಿದೆ.


