
ಧಾರವಾಡ :ಪ್ಯಾರ ಮೆಡಿಕಲ್ ವಿಧ್ಯಾರ್ಥಿನಿ ಹತ್ಯೆ ಪ್ರಕರಣ, ಮದುವೆಯಾಗ ಬೇಕಿದ್ದವನೆ ಯುವತಿಯನ್ನು ಮಸಣ ಸೇರಿಸಿ ಬಿಟ್ಟ.!
ಅಶ್ವಸೂರ್ಯ/ಧಾರವಾಡ: ವಿದ್ಯಾ ಕಾಶಿ ಧಾರವಾಡದ ಮನಸೂರ ರಸ್ತೆಯಲ್ಲಿರುವ ವಿನಯ್ ಕುಲಕರ್ಣಿ ಡೈರಿ ಬಳಿ ಬರ್ಬರವಾಗಿ ಹತ್ಯೆಯಾಗಿದ್ದ ಪ್ಯಾರಾ ಮೆಡಿಕಲ್ ಯುವತಿ ಝಾಕಿಯಾ ಮುಲ್ಲಾ (21) ಅವರ ಕೊಲೆ ಪ್ರಕರಣವನ್ನು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು 12 ಗಂಟೆಯಲ್ಲೇ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಚ್ಚರಿ ಹಾಗೂ ಆತಂಕದ ಸಂಗತಿಯೆಂದರೆ ಆಕೆಯನ್ನು ಮದುವೆಯಾಗಬೇಕಿದ್ದ ಯುವಕನೇ ಈ ಕೊಲೆ ಮಾಡಿದ್ದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಧಾರವಾಡದ ಗಾಂಧಿ ಚೌಕ ನಿವಾಸಿಯಾಗಿದ್ದ ಝಾಕಿಯಾ ಮುಲ್ಲಾ (21) ಜೊತೆ ಮದುವೆ ನಿಶ್ಚಯ ಮಾಡಿಕೊಂಡಿದ್ದ ಯುವಕ ಸಾಬೀರ್ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಈ ಆರೋಪಿ ಕೊಲೆಗೈದು ನಂತರ ಈ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಆಕೆ ನಾಪತ್ತೆಯಾಗಿದ್ದಾಳೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಅಮಾಯಕನಂತೆ ಪೋಷಕರ ಜೊತೆಗೆ ಸೇರಿ ಹುಡುಕಾಟ ಮುಂದಾಗಿದ್ದನಂತೆ.!

ಅಲ್ಲದೆ, ಆಕೆಯ ಕೊಲೆಯಾದ ಸ್ಥಳಕ್ಕೂ ಬಂದು ನಿಂತಿದ್ದ.ಕೊಲೆಯಾದ ಸ್ಥಳದಲ್ಲೇ ಆಕೆಯ ಮೊಬೈಲ್ ಕೂಡ ಇತ್ತು. ಸುದ್ದಿ ಗೊತ್ತಾದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ತೀವ್ರ ತಪಾಸಣೆ ನಡೆಸಿದ್ದರು.
ಈ ವೇಳೆ ಕೊಲೆ ಮಾಡಿದ ಆರೋಪಿ ಕೂಡ ತನಗೇನೂ ಗೊತ್ತಿಲ್ಲವೆಂಬಂತೆ ಅದೇ ಸ್ಥಳದಲ್ಲಿ ಓಡಾಡಿಕೊಂಡಿದ್ದ. ಮಂಗಳವಾರ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಸಾಬೀರ್, ಝಾಕಿಯಾ ಶವ ಸಿಕ್ಕ ಸ್ವಲ್ಪ ದೂರದಲ್ಲೇ ಕೊಲೆ ಮಾಡಿ, ಶವವನ್ನು ತಂದು ಹಾಕಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.
ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಧಾರವಾಡ ಎಸ್ಪಿ ಗುಂಜನ್ ಆರ್ಯ ತಿಳಿಸಿದ್ದಾರೆ.

ಆರೋಪಿ ಸಾಬೀರ್, ಝಾಕಿಯಾ ತಂದೆಯ ಸ್ನೇಹಿತನ ಮಗನಾಗಿದ್ದ ಅಲ್ಲದೆ, ಇವರಿಬ್ಬರು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಾಗಿದ್ದರು. ಕಳೆದ ಎರಡು ಮೂರು ವರ್ಷಗಳಿಂದ ಪರಸ್ಪರ ಪರಿಚಯದವರಾಗಿದ್ದರು.
ಆದರೆ, ಆತ ಕೆಲ ಹುಡುಗಿಯರ ಜೊತೆಗೆ ಸಲುಗೆಯಿಂದ ಇದ್ದ ಎಂಬ ಕಾರಣದಿಂದಾಗಿ ಆಕೆ ಆತನ ಜೊತೆಗೆ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಳಂತೆ. ಹೀಗಾಗಿ ಆಕೆಯೊಂದಿಗೆ ಸ್ವಲ್ಪ ಮಾತನಾಡುವುದಿದೆ ಎಂದು ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಸಾಬೀರ್ ಝಾಕಿಯಾಳನ್ನು ಕೊಲೆ ಮಾಡಿರುವುದು ಹೆಣ್ಣು ಹೆತ್ತ ಪೋಷಕರು ಬೆಚ್ಚಿ ಬೀಳುವಂತೆ ಮಾಡಿದ್ದು, ಆತನಿಗೆ ಗಲ್ಲು ಶಿಕ್ಷೆ ನೀಡಬೇಕಂದು ಸ್ಥಳೀಯರ ಆಕ್ರೋಶವಾಗಿದೆ.


