ಬೆಂಗಳೂರು: ಸಿಎಲ್ 7 ಲೈಸನ್ಸ್ 2.30 ಕೋಟಿ ಲಂಚ.! ಹಣಕ್ಕೆ ಕೈ ಒಡ್ಡಿದಾಗಲೆ ಲೋಕಾ ಬಲೆಗೆ ಬಿದ್ದ ಅಬಕಾರಿ ಉಪ ಆಯುಕ್ತ!
news.ashwasurya.in
ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನಲ್ಲಿ ನಡೆದ ಲೋಕಾಯುಕ್ತ ರೈಡ್ ನಲ್ಲಿ ಹಣದಾಹಿ ದೊಡ್ಡ ತಿಮಿಂಗಿಲ ಒಂದು ಭಲೇಗೆ ಬಿದ್ದಿದೆ. ಸಿಎಲ್–7 ಮತ್ತು ಮೈಕ್ರೋ ಬ್ರೇವರಿ ಲೈಸೆನ್ಸ್ ನೀಡಲು ಕೋಟ್ಯಂತರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಅಬಕಾರಿ ಇಲಾಖೆಯ ಉಪ ಆಯುಕ್ತ ಜಗದೀಶ್ ನಾಯಕ್ ಸೇರಿದಂತೆ ಮೂವರು ಅಧಿಕಾರಿಗಳು ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ.! ಸಿಎಲ್–7 ಮತ್ತು ಮೈಕ್ರೋ ಬ್ರೇವರಿ ಲೈಸೆನ್ಸ್ ನೀಡುವ ನೆಪದಲ್ಲಿ ಕೋಟ್ಯಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕೇಳಿಬಂದಿದೆ. ಅಬಕಾರಿ ಇಲಾಖೆಯ ಉಪ ಆಯುಕ್ತ ಜಗದೀಶ್ ನಾಯಕ್, ಬ್ಯಾಟರಾಯನಪುರ ವಲಯದ ಅಬಕಾರಿ ಸೂಪರಿಂಟೆಂಡೆಂಟ್ ತಮ್ಮಣ್ಣ, ಹಾಗೂ ಅಬಕಾರಿ ಕಾನ್ಸ್ಟೇಬಲ್ ಲಕ್ಕಪ್ಪ ಮೂವರೂ ಸೇರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

CL-7 ಲೈಸೆನ್ಸ್ ನೀಡಲು ಕೋಟಿ ಕೋಟಿ ರೂಪಾಯಿ ಲಂಚ.!
ಬೆಂಗಳೂರು ಮೂಲದ ಲಕ್ಷ್ಮೀ ನಾರಾಯಣ್ ಎಂಬ ಉದ್ಯಮಿಯಿಂದ ಸಿಎಲ್–7 ಹಾಗೂ ಮೈಕ್ರೋ ಬ್ರೇವರಿ ಲೈಸೆನ್ಸ್ ನೀಡಲು ಅಧಿಕಾರಿಗಳು ಒಟ್ಟು 2 ಕೋಟಿ 30 ಲಕ್ಷ ರೂಪಾಯಿ ಲಂಚ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ನಂತರ ಮಾತುಕತೆ ನಡೆದು, ಎರಡು ಲೈಸೆನ್ಸ್ ನೀಡಲು 2 ಕೋಟಿ 25 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದರಂತೆ.! ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಅದರ ಭಾಗವಾಗಿ, ಅಡ್ವಾನ್ಸ್ ಹಣವಾಗಿ 25 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನೂ ತಮ್ಮ ಖೆಡ್ಡಕ್ಕೆ ಬೀಳಿಸಿದ್ದಾರೆ.
ಈ ದಾಳಿ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಅಬಕಾರಿ ಭವನದಲ್ಲಿ ನಡೆದಿದೆ. ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಉಪ ಆಯುಕ್ತ ಜಗದೀಶ್ ನಾಯಕ್ ಮತ್ತು ಅಬಕಾರಿ ಕಾನ್ಸ್ಟೇಬಲ್ ಲಕ್ಕಪ್ಪರನ್ನು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ. ಇನ್ನೊಂದೆಡೆ, ದಾಳಿ ಸಮಯದಲ್ಲಿ ತಪ್ಪಿಸಿಕೊಂಡಿದ್ದ ಅಬಕಾರಿ ಸೂಪರಿಂಟೆಂಡೆಂಟ್ ತಮ್ಮಣ್ಣ ಅವರನ್ನು ನಂತರ ವೈಯಾಲಿಕಾವಲ್ ಪ್ರದೇಶದ ಬಳಿ ಬಂಧಿಸಿ ಲೋಕಾಯುಕ್ತ ಅಧಿಕಾರಿಗಳು ಅಬಕಾರಿ ಭವನಕ್ಕೆ ಕರೆತಂದಿದ್ದಾರೆ.

ಅಬಕಾರಿ ವಿವಿಧ ಲೈಸೆನ್ಸ್ಗಳಿಗೆ ಪ್ರತ್ಯೇಕ ಲಂಚ ದರ ನಿಗದಿ.!
ಲೋಕಾಯುಕ್ತ ತನಿಖೆಯಲ್ಲಿ ಹೊರಬಂದ ಮಾಹಿತಿಯಂತೆ, ಸಿಎಲ್–7 ಲೈಸೆನ್ಸ್ಗೆ (ಲಿಕ್ಕರ್) ₹75 ಲಕ್ಷ, ಮೈಕ್ರೋ ಬ್ರೇವರಿ ಲೈಸೆನ್ಸ್ಗೆ (ಪಾನೀಯಗಳು) ₹1.5 ಕೋಟಿ. ಹೀಗೆ ಒಟ್ಟು ₹2.30 ಕೋಟಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಕೊನೆಗೆ ₹2.25 ಕೋಟಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಮೂವರ ಮೇಲೂ ವಿಚಾರಣೆ ಮುಂದುವರಿದಿದೆ
ಸದ್ಯ ಲೋಕಾಯುಕ್ತ ಅಧಿಕಾರಿಗಳು ಅಬಕಾರಿ ಭವನದಲ್ಲೇ ಮೂವರು ಅಧಿಕಾರಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣ ಅಬಕಾರಿ ಇಲಾಖೆಯಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಧಿಕಾರಿಗಳ ಪಾತ್ರ ಬಹಿರಂಗವಾಗುವ ಸಾಧ್ಯತೆ ಇದೆ. ಈ ಲೋಕಾಯುಕ್ತ ದಾಳಿ ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮತ್ತೊಂದು ದೊಡ್ಡ ಉದಾಹರಣೆಯಾಗಿ ಪರಿಗಣಿಸಲಾಗಿದೆ.

ರಾಜ್ಯದ ಮೂಲೆ ಮೂಲೆಯಲ್ಲೂ ಅವಕಾರಿಬ ಇಲಾಖೆಯ CL-7 ಲೈಸೆನ್ಸ್ ನಿಯಮಗಳ ಉಲ್ಲಂಘನೆಯಾಗಿ ಲಂಚದ ಹಣಕ್ಕೆ ಬಿಕರಿಯಾಗಿದೆ ಅದರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು CL-7 ಲೈಸೆನ್ಸ್ಗಳನ್ನು ನಿಯಮಗಳನ್ನು ಉಲ್ಲಂಘನೆಮಾಡಿ ನೀಡಲಾಗಿದೆ.ಈ ದಂಧೆಯಲ್ಲಿ ಲಕ್ಷಾಂತರ ರೂಪಾಯಿ ಲಂಚದ ಹಣ ನುಂಗಿದ ಮಿಕ ಒಂದು ಶಿವಮೊಗ್ಗದಿಂದ ವರ್ಗಾವಣೆಗೊಂಡು ಸೈಲೆಂಟಾಗಿ ಹಣದ ಮೂಟೆಯೊಂದಿಗೆ ಬೆಂಗಳೂರು ಸೇರಿದೆ ಲೋಕಾಯುಕ್ತಾ ಅಧಿಕಾರಿಗಳು ಶಿವಮೊಗ್ಗ ಅಬಕಾರಿ ಇಲಾಖೆಯ ಕಡತಗಳನ್ನು ಪರಿಶೀಲನೆ ಮಾಡಿದರೆ CL-7 ಪರವಾನಿಗೆ ಸಂಭಂದಿಸಿದ ಅಕ್ರಮಗಳು ಬಯಲಾಗಲಿದೆ..


