ಬಳ್ಳಾರಿ : ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಯುವತಿಯರ ಶೋಷಣೆ! ಅಂತಾರಾಜ್ಯ ವೇಶ್ಯಾವಾಟಿಕೆ ಜಾಲ ಬಯಲಿಗೆಳೆದ ಬಳ್ಳಾರಿ ಪೊಲೀಸರು.
news.ashwasurya.in
ಅಶ್ವಸೂರ್ಯ | ಬಳ್ಳಾರಿ : ಲಕ್ಷ್ಮಿ ಪೂಜೆ ಮಾಡಿಸಿದರೆ ಹಣದ ಮಳೆಯೆ ಸುರಿಯುತ್ತದೆ ಎಂಬ ಆಮಿಷವೊಡ್ಡಿ ಬಡ ಕುಟುಂಬಗಳ ಯುವತಿಯರನ್ನು ಲೈಂಗಿಕ ಶೋಷಣೆಗೆ ಒಳಪಡಿಸಿ, ವೇಶ್ಯಾವಾಟಿಕೆ ದಂಧೆಗೆ ತಳ್ಳುತ್ತಿದ್ದ ಅಂತಾರಾಜ್ಯ ಜಾಲವೊಂದನ್ನು ಬಳ್ಳಾರಿ ಪೊಲೀಸರು ಭೇದಿಸಿ ಹೆಡೆಮುರಿ ಕಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಯುವತಿಯರನ್ನು ರಕ್ಷಿಸಲಾಗಿದ್ದು, 11 ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಯುವತಿಯರ ಆಯ್ಕೆಗೆ ವಿಚಿತ್ರ ಷರತ್ತು.!
ಈ ಜಾಲವು ಯುವತಿಯರನ್ನು ಆಯ್ಕೆ ಮಾಡುವಾಗ ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸುತ್ತಿತ್ತು ಎನ್ನಲಾಗಿದೆ. ಸುಮಾರು 5 ಅಡಿ 6 ಇಂಚು ಎತ್ತರವಿರುವ, ಅವಿವಾಹಿತ ಹಾಗೂ ದೇಹದ ಮೇಲೆ ಯಾವುದೇ ಗುರುತು ಅಥವಾ ಕಲೆಗಳಿಲ್ಲದ ಯುವತಿಯರ ಫೋಟೋಗಳನ್ನು ಆರೋಪಿಗಳು ಕೇಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಾಮಾನ್ಯ ಫೋಟೋಗಳ ಜತೆಗೆ ಬಲಗೈ ಮತ್ತು ಬಲಗಾಲಿನ ಪ್ರತ್ಯೇಕ ಫೋಟೋಗಳನ್ನು ಕೂಡ ಕಳುಹಿಸುವಂತೆ ಒತ್ತಾಯಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

‘ಲಕ್ಷ್ಮಿ ಪೂಜೆ’ ಹೆಸರಿನಲ್ಲಿ ಹಣದ ಆಮಿಷ :
ಇಂತಹ ವಿಶೇಷ ಲಕ್ಷಣಗಳನ್ನು ಹೊಂದಿರುವ ಯುವತಿಯರು ಲಕ್ಷ್ಮಿ ಪೂಜೆ ನಡೆಸಿದರೆ ಅಪಾರ ಹಣ ಲಭಿಸುತ್ತದೆ ಎಂದು ಸುಳ್ಳು ನಂಬಿಕೆ ಮೂಡಿಸಿ ಅವರನ್ನು ತಮ್ಮ ಜಾಲಕ್ಕೆ ಕೆಡವಿ ಕೊಳ್ಳಲಾಗುತ್ತಿತ್ತು ಎಂದು ಎಸ್‌ಪಿ ಸುಮನ್ ಡಿ. ಪನ್ನೇಕರ್ ಮಾಹಿತಿ ನೀಡಿದ್ದಾರೆ. ಪೂಜೆಯಿಂದ ಬರುವ ಹಣದಲ್ಲಿ ಯುವತಿಗೆ ಒಂದು ಪಾಲು, ಪೂಜೆ ನಡೆಸುವ ಸ್ವಾಮೀಜಿಗೆ ಒಂದು ಪಾಲು ಹಾಗೂ ಯುವತಿಯನ್ನು ಕರೆತಂದ ಏಜೆಂಟ್‌ಗೆ ಮತ್ತೊಂದು ಪಾಲು ಸಿಗುತ್ತದೆ ಎಂದು ನಂಬಿಸಿ ಮೊಸಮಾಡಲಾಗುತ್ತಿತ್ತು ಎನ್ನಲಾಗಿದೆ.
ಆರಂಭದಲ್ಲಿ ಯುವತಿಯರ ಫೋಟೋ ಮತ್ತು ವೈಯಕ್ತಿಕ ವಿವರಗಳನ್ನು ಸಂಗ್ರಹಿಸುತ್ತಿದ್ದ ಆರೋಪಿಗಳು, ಬಳಿಕ ಪೂಜೆಗೆ ಆಯ್ಕೆಯಾಗಿದ್ದೀರಿ ಎಂದು ಹೇಳಿ ಅವರನ್ನು ಕರೆಸಿಕೊಳ್ಳುತ್ತಿದ್ದರು. ನಂತರ ಲೈಂಗಿಕ ಶೋಷಣೆಗೆ ಒಳಪಡಿಸಿ, ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

ಎರಡು ತಿಂಗಳ ಕಾಲ ಪೊಲೀಸರ ರಹಸ್ಯ ಕಾರ್ಯಾಚರಣೆ :
ಇದೊಂದು ವ್ಯವಸ್ಥಿತ ವೇಶ್ಯಾವಾಟಿಕೆ ಜಾಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ದಂಧೆಯನ್ನು ಬಯಲಿಗೆಳೆಯಲು ಬಳ್ಳಾರಿ ಪೊಲೀಸರು ‘ಅಕ್ಕ ಪಡೆ’ಯ ಮಹಿಳಾ ಸಿಬ್ಬಂದಿ ಬಡ ಮಹಿಳೆಯರ ವೇಷದಲ್ಲಿ ಜಾಲದೊಳಗೆ ಪ್ರವೇಶಿಸಿ ಸುಮಾರು ಎರಡು ತಿಂಗಳ ಕಾಲ ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ. ಈ ಕಾರ್ಯಾಚರಣೆಯ ಬಳಿಕ ನಾಲ್ವರು ಯುವತಿಯರನ್ನು ರಕ್ಷಿಸಲಾಗಿದ್ದು, ಜಾಲದೊಂದಿಗೆ ಸಂಪರ್ಕ ಹೊಂದಿದ್ದರೆನ್ನಲಾದ 11 ಆರೋಪಿಗಳನ್ನು ಬಂಧಿಸಲಾಗಿದೆ.
ಹಲವು ಜಿಲ್ಲೆಗಳಿಗೆ ವಿಸ್ತರಿಸಿದ್ದ ಜಾಲ
ಈ ದಂಧೆ ಬಳ್ಳಾರಿಗೆ ಮಾತ್ರ ಸೀಮಿತವಾಗಿರದೆ ಚಿಕ್ಕಮಗಳೂರು, ಮೈಸೂರು ಹಾಗೂ ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಲ್ಲೂ ಸಕ್ರಿಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಡತನ ಮತ್ತು ಹಣದ ಆಸೆಯನ್ನು ದುರುಪಯೋಗಪಡಿಸಿಕೊಂಡು ಯುವತಿಯರನ್ನು ಶೋಷಣೆಗೆ ಒಳಪಡಿಸುತ್ತಿದ್ದ ಜಾಲದ ವಿರುದ್ಧ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದು ಇನ್ನಷ್ಟು ಮಾಹಿತಿ ಹೊರಬರಬೇಕಿದೆ.


