ಹೈಕೋರ್ಟ್ ಆದೇಶ ಪಾಲಿಸದೇ ನ್ಯಾಯಾಂಗ ನಿಂದನೆ: ಜಿಲ್ಲಾಧಿಕಾರಿಗೆ 6 ತಿಂಗಳು ಸಾದ ಜೈಲು ಶಿಕ್ಷೆ ವಿಧಿಸಿದ ಕೋರ್ಟ್.!
news.ashwasurya.in
ಅಶ್ವಸೂರ್ಯ | ರಂಗಾರೆಡ್ಡಿ : ಹೈಕೋರ್ಟ್ ಆದೇಶವನ್ನು ಪಾಲಿಸದೇ ಉಲ್ಲಂಘನೆ ಮಾಡಿದ ಆರೋಪದ ಮೇಲೆ ತೆಲಂಗಾಣ ಹೈಕೋರ್ಟ್ ರಂಗಾರೆಡ್ಡಿ ಜಿಲ್ಲೆಯ ಜಿಲ್ಲಾಧಿಕಾರಿ ಸಿ. ನಾರಾಯಣ ರೆಡ್ಡಿ ಅವರಿಗೆ ಆರು ತಿಂಗಳ ಸಾದ ಜೈಲು ಶಿಕ್ಷೆ ವಿಧಿಸಿದೆ.
ತೆಲಂಗಾಣ ಹೈಕೋರ್ಟ್ ಆದೇಶವನ್ನು ಪಾಲಿಸದ ಕಾರಣ ಡಿಸಿ ನಾರಾಯಣ ರೆಡ್ಡಿ ಅವರಿಗೆ ಆರು ತಿಂಗಳ ಸರಳ ಜೈಲು ಶಿಕ್ಷೆ ಹಾಗೂ 2,000 ರೂ. ದಂಡವನ್ನೂ ಪಾವತಿಸುವಂತೆ ಆದೇಶಿಸಿದೆ. ಐಎಎಸ್ ಅಧಿಕಾರಿಯೊಬ್ಬರಿಗೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಇಂತಹ ಶಿಕ್ಷೆ ವಿಧಿಸಿರುವುದು ಭಾರಿ ಗಮನ ಸೆಳೆದಿದೆ.
ಇದೇ ವೇಳೆ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಉದ್ದೇಶದಿಂದ ಜೈಲು ಶಿಕ್ಷೆಯ ಜಾರಿಗೆ ನಾಲ್ಕು ವಾರಗಳ ಕಾಲ ತಡೆ ನೀಡಲಾಗಿದೆ. ಈ ಅವಧಿಯಲ್ಲಿ ಅವರು ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬಹುದು. ದಂಡವನ್ನು ನಾಲ್ಕು ವಾರಗಳೊಳಗೆ ಪಾವತಿಸುವಂತೆ ನ್ಯಾಯಾಲಯ ಸೂಚಿಸಿದೆ.
ನಿವೇಶನಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ರಂಗಾರೆಡ್ಡಿ ಜಿಲ್ಲೆಯ ತುರ್ಕಯಾಂಜಲ್ನ ಮನ್ನೆ ಮುತ್ತ್ಯಾಲಮ್ಮ ಕುಂಟ ಪ್ರದೇಶದಲ್ಲಿರುವ ಎರಡು ನಿವೇಶನಗಳಿಗೆ ಸಂಬಂಧಿಸಿದೆ. ಪಿ. ಶಿವಲೀಲಾ ಮತ್ತು ಅವರ ಪತಿ ಪಿ. ವೆಂಕಟೇಶ್ವರ್ಲು ಎಂಬ ದಂಪತಿ ತಮ್ಮ ನಿವೇಶನಗಳನ್ನು ನಿಷೇಧಿತ ಆಸ್ತಿಗಳ ಪಟ್ಟಿಯಿಂದ ತೆಗೆದುಹಾಕುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.
ಸರ್ವೆ ನಂಬರ್ 536, 537, 657 ಮತ್ತು 658ರ ವ್ಯಾಪ್ತಿಯಲ್ಲಿರುವ ಪ್ಲಾಟ್ ನಂಬರ್ 59 ಹಾಗೂ ಪ್ಲಾಟ್ ನಂಬರ್ 62ರ ಪೂರ್ವ ಭಾಗ ಈ ವಿವಾದಕ್ಕೆ ಸಂಬಂಧಿಸಿವೆ. 2024ರ ಮಾರ್ಚ್ 14ರಂದು ದಂಪತಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಮನವಿಗೆ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

2025ರ ಆಗಸ್ಟ್ 5ರಂದು ತೆಲಂಗಾಣ ಹೈಕೋರ್ಟ್ ದಂಪತಿಯ ಮನವಿಯನ್ನು ಪರಿಶೀಲಿಸಿ 60 ದಿನಗಳೊಳಗೆ ನಿರ್ಧಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿತ್ತು. ಮನವಿಯನ್ನು ತಿರಸ್ಕರಿಸುವುದಾದರೆ ಅದಕ್ಕೆ ಸೂಕ್ತ ಕಾರಣಗಳನ್ನು ನೀಡುವ ವಿವರವಾದ ಆದೇಶ ಹೊರಡಿಸಿ ದಂಪತಿಗೆ ತಿಳಿಸಬೇಕು ಎಂದೂ ಸ್ಪಷ್ಟಪಡಿಸಿತ್ತು.
ಆದರೆ ಜಿಲ್ಲಾಧಿಕಾರಿ ನಿಗದಿತ ಅವಧಿಯಲ್ಲಿ ಯಾವುದೇ ನಿರ್ಧಾರ ಪ್ರಕಟಿಸಿರಲಿಲ್ಲ. ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ಬಳಿಕ, 2026ರ ಫೆಬ್ರವರಿ 26ರಂದು ದಂಪತಿಯ ಮನವಿಯನ್ನು ತಿರಸ್ಕರಿಸಿದ್ದರು. ನಂತರ ಜುಲೈ 8ರಂದು ಮತ್ತೊಂದು ಆದೇಶ ಹೊರಡಿಸಿದ್ದರು. ನ್ಯಾಯಾಲಯದ ಸೂಚನೆ ಪಾಲಿಸಲು ನ್ಯಾಯಾಂಗ ನಿಂದನೆ ನೋಟಿಸ್ ಬಂದ ನಂತರವೇ ಕ್ರಮ ಕೈಗೊಂಡಿದ್ದನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿತು.
ಅದೇ ಬಡಾವಣೆಯಲ್ಲಿರುವ ಕೆಲವು ಪಕ್ಕದ ನಿವೇಶನಗಳನ್ನು ಈ ಹಿಂದೆ ನಿಷೇಧಿತ ಆಸ್ತಿಗಳ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಆದರೆ ಈ ದಂಪತಿಯ ನಿವೇಶನಗಳ ವಿಚಾರದಲ್ಲಿ ಮಾತ್ರ ಬೇರೆ ರೀತಿಯ ನಿರ್ಧಾರ ಕೈಗೊಳ್ಳಲಾಗಿತ್ತು.
ಇದಕ್ಕೆ ಸೂಕ್ತ ಕಾರಣಗಳನ್ನು ಜಿಲ್ಲಾಧಿಕಾರಿ ನೀಡಿಲ್ಲ ಎಂದು ನ್ಯಾಯಮೂರ್ತಿ ಕೆ. ಲಕ್ಷ್ಮಣ್ ಗಮನಿಸಿದರು. ಹಿಂದಿನ ನ್ಯಾಯಾಲಯದ ಆದೇಶ ತಪ್ಪಾಗಿದೆ ಎಂದು ಅಧಿಕಾರಿಗೆ ಅನಿಸಿದರೆ ಅದನ್ನು ಮೇಲ್ಮನವಿ ಮೂಲಕ ಪ್ರಶ್ನಿಸಬೇಕು. ಅದನ್ನು ಪಾಲಿಸದೆ ನಿರ್ಲಕ್ಷಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯ ವರ್ತನೆ ಉದ್ದೇಶಪೂರ್ವಕ ಉದ್ದೇಶಪೂರ್ವಕ ನ್ಯಾಯಾಂಗ ನಿಂದನೆ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಲಾಗಿದೆ.


