ಶಿವಮೊಗ್ಗದ ರೌಡಿಶೀಟರ್ ಸಚಿನ್‌ಗೆ ಗೂಂಡಾ ಕಾಯ್ದೆ ಬಿಸಿ! ಹಲವು ಅಪರಾಧ ಪ್ರಕರಣಗಳ ಆರೋಪಿಗೆ ಗಡಿಪಾರು ಮಾದರಿಯ ಕಠಿಣ ಕ್ರಮ – ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ.
news.ashwasurya.in
ಶಿವಮೊಗ್ಗ | ಅಶ್ವಸೂರ್ಯ ನ್ಯೂಸ್ :
ಶಿವಮೊಗ್ಗ ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಆರೋಪಿ ಸಚಿನ್ ಎಂ.ಎಸ್. ಅಲಿಯಾಸ್ ಸಚಿನ್ ಅಲಿಯಾಸ್ ಶ್ಯಾಡೋ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದೆ. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆಯನ್ನು ಪರಿಗಣಿಸಿ, ಆರೋಪಿಯನ್ನು ಗೂಂಡಾ ಕಾಯ್ದೆಯಡಿ ಬಂಧನದಲ್ಲಿರಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಆರೋಪಿ ಸಚಿನ್ ಎಂ.ಎಸ್. @ ಸಚಿನ್ @ ಶ್ಯಾಡೋ ಬಿನ್ ಶ್ರೀನಿವಾಸ ವಿರುದ್ಧ ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ, ಜಯನಗರ, ದೊಡ್ಡಪೇಟೆ, ಕೋಟೆ, ವಿನೋಬನಗರ ಹಾಗೂ ಆನಂದಪುರ ಪೊಲೀಸ್ ಠಾಣೆಗಳಲ್ಲಿ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ.
ಕೊಲೆಗೆ ಪ್ರಯತ್ನ, ಸುಲಿಗೆ, ದೊಂಬಿ, ಜೀವ ಬೆದರಿಕೆ, ಗಾಂಜಾ ಮಾರಾಟ ಮತ್ತು ಸಾಗಾಣಿಕೆ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಸೇರಿದಂತೆ ವಿವಿಧ ಗಂಭೀರ ಆರೋಪಗಳು ಈತನ ವಿರುದ್ಧ ದಾಖಲಾಗಿರುವುದಾಗಿ ಪೊಲೀಸ್ ಪ್ರಕಟಣೆ ತಿಳಿಸಿದೆ.

ಸಾಮಾನ್ಯ ಕಾನೂನು ಕ್ರಮಕ್ಕೆ ಬಗ್ಗದ ಹಿನ್ನೆಲೆ ಕಠಿಣ ನಿರ್ಧಾರ!
ನಿರಂತರ ಅಪರಾಧ ಚಟುವಟಿಕೆಗಳಿಂದ ಸಮಾಜದ ಶಾಂತಿ, ನೆಮ್ಮದಿ ಹಾಗೂ ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ, ಸಾಮಾನ್ಯ ಕಾನೂನು ಕ್ರಮಗಳಿಂದ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂಬ ವರದಿಯ ಆಧಾರದ ಮೇಲೆ, ಕರ್ನಾಟಕ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ಶಿವಮೊಗ್ಗ ಜಿಲ್ಲಾಧಿಕಾರಿಗಳು 2026ರ ನವೆಂಬರ್ 6ರಂದು ಆರೋಪಿಯನ್ನು ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶ ಹೊರಡಿಸಿದ್ದಾರೆ.
ಅದರಂತೆ,ನವೆಂಬರ್ 7ರಂದು ಆರೋಪಿಯನ್ನು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಈ ಕ್ರಮ ಮಹತ್ವ ಪಡೆದಿದೆ. ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಸಂದೇಶವೂ ಈ ಬೆಳವಣಿಗೆಯಿಂದ ರವಾನೆಯಾಗಿದೆ.
ಅಶ್ವಸೂರ್ಯ ನ್ಯೂಸ್ | ಶಿವಮೊಗ್ಗ
ಸುದ್ದಿಯ ಹಿಂದೆ ಸತ್ಯ… ಜನರ ಜೊತೆಗೆ ಅಶ್ವಸೂರ್ಯ…

