ಶಿವಮೊಗ್ಗ : KSOU ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಬಯಲು.! ಹಣ ಕೊಟ್ರೆ ಮೊಬೈಲ್, ಬುಕ್ ನೋಡಿ ಪರೀಕ್ಷೆ ಬರೆಯಬಹುದಂತೆ.!?

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಪ್ರಾದೇಶಿಕ ಕಚೇರಿಯಲ್ಲಿ ಹಣ ಪಡೆದು ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ನೀಡಿದ್ದಾರೆ ಎಂದು ಪರೀಕ್ಷೆಯಲ್ಲಿ ಅಕ್ರಮ ಬಯಲಾಗಿದೆ. ಒಂದು ವಿಷಯಕ್ಕೆ ₹1,000 ನೀಡಿದ ವಿದ್ಯಾರ್ಥಿಗಳಿಗೆ ಮೊಬೈಲ್ ಮತ್ತು ಪುಸ್ತಕ ನೋಡಿ ಪರೀಕ್ಷೆ ಬರೆಯಲು ಪ್ರಾದೇಶಿಕ ನಿರ್ದೇಶಕರ ನೇತೃತ್ವದಲ್ಲೇ ವಿಐಪಿ ವ್ಯವಸ್ಥೆ ಮಾಡಲಾಗಿದೆ ಎನ್ನುವ ಮಾತು ಕೇಳಿಬಂದಿದೆ.?
ರಾಜ್ಯದಲ್ಲಿ ಕೆಪಿಎಸ್ಸಿ ನೇಮಕಾತಿ ಅಕ್ರಮದ ಬೆನ್ನಲ್ಲೇ ಇದೀಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಪರೀಕ್ಷಾ ಕೇಂದ್ರದಲ್ಲೂ ಅಕ್ರಮದ ಬಯಲಾಟ ಬಯಲಾಗಿದೆ ಎನ್ನುವ ಮಾತು ಬಲವಾಗಿ ಕೇಳಿ ಬಂದಿದೆ.!? ಹಣ ಕೊಟ್ಟರೆ ಸಾಕು, ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಮೊಬೈಲ್ ಹಾಗೂ ಪುಸ್ತಕಗಳನ್ನು ಮುಂದಿಟ್ಟುಕೊಂಡೇ ಪರೀಕ್ಷೆ ಬರೆಯುವ ಕರಾಳ ದಂಧೆಯೊಂದು ಶಿವಮೊಗ್ಗದಲ್ಲಿ ನೆಡೆದಿದೆ ಎಂದು ವರದಿಯಾಗಿದೆ.

ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿರುವ ಕೆಎಸ್ಒಯು ಪ್ರಾದೇಶಿಕ ಕಚೇರಿಯಲ್ಲೇ ಈ ಪರೀಕ್ಷಾ ಅಕ್ರಮದ ‘ಮಹಾ ಜಾಲ’ ಸಕ್ರಿಯವಾಗಿದ್ದು, ಪ್ರಾದೇಶಿಕ ನಿರ್ದೇಶಕ ಬಿ.ಎಂ. ಸ್ವಾಮಿ ಅವರ ನೇತೃತ್ವದಲ್ಲೇ ಈ ಅಕ್ರಮ ವ್ಯವಹಾರ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು ಎಷ್ಟರಮಟ್ಟಿಗೆ ಸತ್ಯ ಎನ್ನುವುದು ತಿಳಿಯಬೇಕಿದೆ.
ಕಾಸು ಕೊಟ್ಟವರಿಗೆ VIP ವ್ಯವಸ್ಥೆ: 2ನೇ ಫ್ಲೋರ್ನಲ್ಲಿ ‘ಮುಕ್ತ’ ನಕಲು! ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಎಸಗಲು ವಿಚಿತ್ರ ನಿಯಮ ರೂಪಿಸಲಾಗಿತ್ತಂತೆ.!
2ನೇ ಮಹಡಿ (ಹಣ ನೀಡಿದವರಿಗೆ) ಒಂದು ವಿಷಯಕ್ಕೆ ₹1,000 ಹಣ ನೀಡಿದ ವಿದ್ಯಾರ್ಥಿಗಳಿಗೆ ಎರಡನೇ ಮಹಡಿಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿತ್ತಂತೆ.? ಇಲ್ಲಿ ಯಾವುದೇ ಭಯವಿಲ್ಲದೆ ಸ್ಮಾರ್ಟ್ಫೋನ್, ಗೈಡ್ಗಳು ಹಾಗೂ ಪುಸ್ತಕಗಳನ್ನು ಎದುರಿಗೇ ಇಟ್ಟುಕೊಂಡು ಪರೀಕ್ಷೆ ಬರೆಯಲು ಮುಕ್ತ ಅವಕಾಶವಿತ್ತು ಎಂದು ವರದಿಯಾಗಿದೆ.
1ನೇ ಮಹಡಿಯಲ್ಲಿ ಯಾವುದೇ ಹಣ ನೀಡದೆ ಪ್ರಾಮಾಣಿಕವಾಗಿ ಬರೆಯಲು ಬರುವ ಬಡ ವಿದ್ಯಾರ್ಥಿಗಳಿಗೆ ಮೊದಲ ಮಹಡಿಯಲ್ಲಿ ಕಟ್ಟುನಿಟ್ಟಿನ ನಿಗಾದಡಿ ಪರೀಕ್ಷೆ ಬರೆಸಲಾಗಿದೆಯಂತೆ.!?
ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲೇ ಪುಸ್ತಕ ಮತ್ತು ಮೊಬೈಲ್ ನೋಡಿ ನಿರಾತಂಕವಾಗಿ ಉತ್ತರ ಬರೆಯುತ್ತಿರುವ ಆಘಾತಕಾರಿ ವಿಡಿಯೋ ದೃಶ್ಯಾವಳಿಗಳು ಕೇಲವರ ಮೊಬೈಲ್ ನಲ್ಲಿ ಹರಿದಾಡಿದೆಯಂತೆ.
ದಿನಕ್ಕೆ 70 ರಿಂದ 100 ಮಂದಿ ವಿಧ್ಯಾರ್ಥಿಗಳಿಂದ ಹಣ ವಸೂಲಿ .!
ಪರೀಕ್ಷೆ ಆರಂಭವಾದ ಅರ್ಧ ಗಂಟೆಯ ನಂತರ ಕೊಠಡಿಗೆ ಎಂಟ್ರಿ ಕೊಡುವ ಪ್ರಾದೇಶಿಕ ನಿರ್ದೇಶಕರು ಎಷ್ಟು ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದಾರೆ ಎಂದು ಲೆಕ್ಕ ಹಾಕುತ್ತಾರೆ. ನಂತರ ತಮ್ಮ ಅಧೀನದ ಕೆಲವು ಸಿಬ್ಬಂದಿಗಳನ್ನು ಮುಂದಿಟ್ಟುಕೊಂಡು ಹಣ ವಸೂಲಿ ಮಾಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರತಿದಿನ ಪರೀಕ್ಷೆ ಮುಗಿದ ತಕ್ಷಣ ಸುಮಾರು 70 ರಿಂದ 100 ವಿದ್ಯಾರ್ಥಿಗಳಿಂದ ಫೋನ್ ಪೇ (PhonePe) ಮತ್ತು ಗೂಗಲ್ ಪೇ (Google Pay) ಮೂಲಕ ಸ್ಥಳದಲ್ಲೇ ಹಣ ಪಾವತಿಸಿಕೊಳ್ಳಲಾಗಿದೆಯಂತೆ.!?
ರಾತ್ರಿಹಗಲು ಶ್ರಮಪಟ್ಟು ಓದಿದ ವಿಧ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟ ನೀಚರು.!
ಅಕ್ಟೋಬರ್ 7 ರಿಂದ ಆರಂಭವಾಗಿರುವ ಮುಕ್ತ ವಿವಿಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನವೆಂಬರ್ 20 ರವರೆಗೆ ನಡೆಯಲಿವೆ. ದಿನರಾತ್ರಿ ಕಷ್ಟಪಟ್ಟು ಓದಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪರಿಶ್ರಮವನ್ನು ಈ ಭ್ರಷ್ಟ ಜಾಲ ಮಣ್ಣುಪಾಲು ಮಾಡುತ್ತಿದೆ. ತಕ್ಷಣವೇ ಉನ್ನತ ಶಿಕ್ಷಣ ಇಲಾಖೆ ಹಾಗೂ ಕೆಎಸ್ಒಯು ಕುಲಪತಿಗಳು ಈ ಕೇಂದ್ರದ ಮೇಲೆ ದಾಳಿ ನಡೆಸಿ, ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಜೋತೆಗೆ ಅಮಾಯಕ ವಿಧ್ಯಾರ್ಥಿ ಗಳ ಪೋಷಕರು ಒತ್ತಾಯಿಸಿದ್ದಾರೆ.


