Headlines

ಮಂಗಳೂರು : ಮೊಬೈಲ್ ಕೊಡದಿದ್ದಕ್ಕೆ ಚೂರಿಯಿಂದ ಇರಿತ.! ಆರೋಪಿ ಇರ್ಷಾದ್ ವಿರುದ್ಧ ಎಫ್‌ಐಆರ್ ದಾಖಲು.!

ಮಂಗಳೂರು ಅಕ್ಟೋಬರ್ 14: ನಗರದ ಸಿಟಿ ಸೆಂಟರ್ ವೀಕ್ಷಿಸಲು ಬಂದಿದ್ದ ವ್ಯಕ್ತಿಯೊಬ್ಬರು ಲೇಡಿಗೋಶನ್ ಆಸ್ಪತ್ರೆ ಸಮೀಪದ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ನಿಂತಿದ್ದಾಗ ವ್ಯಕ್ತಿಯೊಬ್ಬ ಮೊಬೈಲ್ ಕೊಡುವಂತೆ ಕೇಳಿದ್ದಾನೆ ಫೋನ್ ನೀಡಲು ನಿರಾಕರಿಸಿದ್ದಕ್ಕೆ ಅಪರಿಚಿತ ವ್ಯಕ್ತಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ನೆಡೆದಿದೆ.! ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಸಂತ್ರಸ್ತ ಸಿರಾಜು ಬಿ.ಎನ್ ಅವರು ನೀಡಿದ ದೂರಿನಂತೆ, ದಾಳಿ ನಡೆಸಿದ ಆರೋಪಿ ಇರ್ಷಾದ್ ಎಂಬಾತನ ವಿರುದ್ಧ ಮಂಗಳೂರು ಸೌತ್ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಕರಣದ ಹಿನ್ನೆಲೆ :
ಅಕ್ಟೋಬರ್ 11, 2026 ರಂದು ಸಂಜೆ ಸುಮಾರು 6:30 ಕ್ಕೆ ಸಿರಾಜು ಅವರು ಮಂಗಳೂರು ಸಿಟಿ ಸೆಂಟರ್ ಮಳಿಗೆಗೆ ಬಂದಿದ್ದರು. ಬಳಿಕ ರಾತ್ರಿ ಸುಮಾರು 10:00 ಗಂಟೆಯ ವೇಳೆಗೆ ಲೇಡಿಗೋಶನ್ ಆಸ್ಪತ್ರೆ ಬಳಿಯ ಬಸ್ ಸ್ಟಾಪ್‌ನಲ್ಲಿ ಕುಳಿತು ಮೊಬೈಲ್ ಫೋನ್ ನೋಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೋಪಿ ಇರ್ಷಾದ್, ಮಲಯಾಳಂ ಭಾಷೆಯಲ್ಲಿ “ಇಲ್ಲಿ ಏನು ಮಾಡುತ್ತಿದ್ದೀಯಿ?” ಎಂದು ಕೇಳಿದ್ದಾನೆ. ಅದಕ್ಕೆ ಸಿರಾಜು ಮೊಬೈಲ್ ನೋಡುತ್ತಿರುವುದಾಗಿ ಉತ್ತರಿಸಿದ್ದಾರೆ.
ತಕ್ಷಣವೇ ಆರೋಪಿ “ಮೊಬೈಲ್ ಫೋನ್ ನೋಡಲು ಕೊಡು” ಎಂದು ಕೇಳಿದ್ದು, ಸಿರಾಜು ನಿರಾಕರಿಸಿದ್ದಾರೆ. ಇದರಿಂದ ಕೆರಳಿದ ಆರೋಪಿ, “ಫೋನ್ ಕೊಡದಿದ್ದರೆ ಜೀವಸಹಿತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾನೆ. ಸಿರಾಜು ಮೊಬೈಲ್ ನೀಡದೇ ಇದ್ದಾಗ ಮತ್ತಷ್ಟು ಆಕ್ರೋಶಗೊಂಡ ಆರೋಪಿ ಇರ್ಷಾದ್, ತನ್ನ ಬಳಿಯಿದ್ದ ಚೂರಿಯನ್ನು ತೆಗೆದು “ನಿನ್ನನ್ನು ಕೊಲ್ಲುತ್ತೇನೆ” ಎಂದು ಸಿರಾಜು ಅವರ ಕುತ್ತಿಗೆಗೆ ಇರಿಯಲು ಬಂದಿದ್ದಾನೆ. ತಕ್ಷಣ ಎಚ್ಚೆತ್ತ ಸಿರಾಜು ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಚೂರಿಯು ಅವರ ಮೂಗಿನ ಎಡಬದಿಗೆ ತಾಗಿ ಮೂಗು ಹರಿದುಹೋಗಿದೆ.
ಮತ್ತೊಮ್ಮೆ ಕೊಲ್ಲುವ ಉದ್ದೇಶದಿಂದ ಕತ್ತಿನ ಭಾಗಕ್ಕೆ ಇರಿಯಲು ಬಂದಾಗ ಸಿರಾಜು ಕೈ ಅಡ್ಡ ತಡೆದಿದ್ದು, ಈ ವೇಳೆ ಬಲಗೈಗೆ ಆಳವಾದ ಗಾಯವಾಗಿದೆ. ಸಂತ್ರಸ್ತನ ಆಕ್ರಂದನ ಕೇಳಿ ಸ್ಥಳದಲ್ಲಿ ಸಾರ್ವಜನಿಕರು ಓಡಿ ಬಂದು ಜಮಾಯಿಸಿದ್ದಾರೆ. ದಾಳಿಕೋರನ ಹೆಸರು ಇರ್ಷಾದ್ ಎಂದು ಸ್ಥಳದಲ್ಲಿದ್ದವರಿಂದ ತಿಳಿದುಬಂದಿದೆ. ತಕ್ಷಣವೇ ಸಾರ್ವಜನಿಕರು ಗಾಯಾಳು ಸಿರಾಜು ಅವರನ್ನು ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಸರ್ಕಾರಿ ವೆನ್‌ಲಾಕ್ (Wenlock) ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಘಟನೆ ಕುರಿತು ಚಿಕಿತ್ಸೆ ಪಡೆಯುತ್ತಿರುವ ಸಿರಾಜು ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಕೊಲೆಯತ್ನ (Attempt to Murder) ಸೇರಿದಂತೆ ವಿವಿಧ ಕಠಿಣ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿ ಇರ್ಷಾದ್‌ನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!