ಜಮ್ಮು ಕಾಶ್ಮೀರದಲ್ಲಿ ಸಿಐಎಸ್‌ಎಫ್ ಯೋಧನಿಂದಲೇ ಗುಂಡಿನ ದಾಳಿ ನಾಲ್ವರು ಸಹೋದ್ಯೋಗಿಗಳ ಹತ್ಯೆ.!!

news.ashwasurya.in
ಅಶ್ವಸೂರ್ಯ/ ಶ್ರೀನಗರ : ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF) ಹೆಡ್ ಕಾನ್‌ಸ್ಟೆಬಲ್ ಒಬ್ಬ ಹುಚ್ಚನಂತೆ ಮನಬಂದಂತೆ ಗುಂಡು ಹಾರಿಸಿ ಒಬ್ಬ ಹಿರಿಯ ಅಧಿಕಾರಿ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಹತ್ಯೆ ಮಾಡಿರುವ ಭಯಾನಕ ಘಟನೆ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ನಡೆದಿದೆ.
ಬಸೋಹ್ಲಿಯ ಮಾಷ್ಕಾ ಗ್ರಾಮದಲ್ಲಿರುವ ರಾವಿ ನದಿಯ ಉಪನದಿಯಾದ ಸೇವಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ‘ಸೇವಾ ಜಲವಿದ್ಯುತ್ ಯೋಜನೆ’ ಘಟಕದಲ್ಲಿ ನಿಯೋಜನೆಗೊಂಡಿದ್ದ ಸಿಐಎಸ್‌ಎಫ್ ತುಕಡಿಯಲ್ಲಿ ಮಂಗಳವಾರ ಸಂಜೆ ಸುಮಾರು 6:40 ರ ಸುಮಾರಿಗೆ ಈ ಘಟನೆ ನಡೆದಿದೆ. ಸಿಬ್ಬಂದಿಗಳ ನಡುವೆ ನಡೆದ ತೀವ್ರ ವಾಗ್ವಾದವೇ ತಾರಕಕ್ಕೆ ಏರಿ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.

ಘಟನೆಯಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಅಂಕಿತ್ ಕುಮಾರ್ ಪಾಂಡೆ, ಸಬ್-ಇನ್‌ಸ್ಪೆಕ್ಟರ್ ಲಕ್ಷ್ಮಣ್ ಸಿಂಗ್, ಕಾನ್‌ಸ್ಟೆಬಲ್ ರಫೀಕ್ ಅಹ್ಮದ್ ಹಾಗೂ ಕಾನ್‌ಸ್ಟೆಬಲ್ ಸಂದೀಪ್ ಕುಮಾರ್ ಮೃತಪಟ್ಟಿದ್ದಾರೆ.
ಆರೋಪಿ ಹೆಡ್ ಕಾನ್‌ಸ್ಟೆಬಲ್ ಅವದೇಶ್ ಕುಮಾರ್ ಸಿಂಗ್ ತನಗೆ ನೀಡಲಾಗಿದ್ದ ಎಕೆ-47 ರೈಫಲ್‌ನೊಂದಿಗೆ ಕಚೇರಿಯ ಆವರಣಕ್ಕೆ ನುಗ್ಗಿ ಏಕಾಏಕಿ ಸಹೋದ್ಯೋಗಿಗಳ ಮೇಲೆ ಗುಂಡಿನ ಮಳೆಗರೆದಿದ್ದಾನೆ. ಆತನ ಬಳಿ ಬರೋಬ್ಬರಿ 150 ಸುತ್ತು ಗುಂಡುಗಳಿದ್ದವು ಎಂದು ಸಿಐಎಸ್‌ಎಫ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರು ಪ್ರದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ ಅವದೇಶ್ ಕುಮಾರ್ ಸಿಂಗ್‌ನನ್ನು ಬಂಧಿಸಲಾಗಿದ್ದು, ಪೊಲೀಸರಿಗೆ ಒಪ್ಪಿಸಲಾಗಿದೆ. ಗುಂಡಿನ ದಾಳಿಗೆ ನಿಖರ ಕಾರಣವೇನು ಎನ್ನುವುದರ ಕುರಿತು ಹಿರಿಯ ಅಧಿಕಾರಿಗಳು ತನಿಖೆ ಮುಂದಾಗಿದ್ದಾರೆ.


