
ತೀರ್ಥಹಳ್ಳಿ : ಅರಣ್ಯ ಕಾಯಬೇಕಾದ ವಾಚರ್ ಮನೆಯಲ್ಲೇ ಲಕ್ಷಾಂತರ ರೂಪಾಯಿ ಮೌಲ್ಯದ ಬೆಲೆಬಾಳುವ ನಾಟಾ ವಶ.!
ತೀರ್ಥಹಳ್ಳಿಯ ಮುಂಡುವಳ್ಳಿಯಲ್ಲಿ ದೂರು ದಾಖಲು,ವಾಚರ್ ನ ತೋಟದ ಮನೆಯಲ್ಲಿ ಹೊನ್ನೆ, ಮತ್ತಿ, ಬೋಗಿ ನಾಟಾಗಳು ವಶ.! ಡಿಆರ್ಎಫ್ಒ ಮೇಲೂ ಗಂಭೀರ ಆರೋಪ.!
ಅಶ್ವಸೂರ್ಯ ನ್ಯೂಸ್ /ತೀರ್ಥಹಳ್ಳಿ :
ಅರಣ್ಯವನ್ನು ಸಂರಕ್ಷಿಸುವ ಜವಾಬ್ದಾರಿ ಹೊತ್ತಿರುವ ಅರಣ್ಯ ವಾಚರ್ವೊಬ್ಬನ ತೋಟದ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಿವಿಧ ಜಾತಿಯ ಮರಗಳ ನಾಟಾಗಳು ಪತ್ತೆಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಪ್ರಕರಣ ಇದೀಗ ಅರಣ್ಯ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.
ತಾಲೂಕಿನ ಮುಂಡುವಳ್ಳಿ ಗ್ರಾಮದ ಶಾಂತಿಕೆರೆ ವ್ಯಾಪ್ತಿಯ ಮೃಗವಧೆ ಮೀಸಲು ಅರಣ್ಯದ ಸರ್ವೇ ನಂ.188ರ ಪ್ರದೇಶದಲ್ಲಿ ಅಕ್ರಮವಾಗಿ ಮರ ಕಡಿದು ನಾಟಾಗಳನ್ನಾಗಿ ಪರಿವರ್ತಿಸಿ ಸಂಗ್ರಹಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸಂಚಾರಿ ಅರಣ್ಯಾಧಿಕಾರಿಗಳ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಫಾರೆಸ್ಟ್ ವಾಚರ್ ಫಿಲಿಪ್ ಡಿಸೋಜಾ ಅವರ ತೋಟದ ಮನೆಯಲ್ಲಿ ಸಂಗ್ರಹಿಸಲಾಗಿದ್ದ ವಿವಿಧ ಜಾತಿಯ ಮರಗಳ ನಾಟಾಗಳು ಪತ್ತೆಯಾಗಿದ್ದು, ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಬೆಲೆಬಾಳುವ ಹೊನ್ನೆ, ಮತ್ತಿ, ಬೋಗಿ… ನಾಟಾಗಳ ರಾಶಿ!
ವಶಕ್ಕೆ ಪಡೆದಿರುವ ನಾಟಾಗಳಲ್ಲಿ ಹೊನ್ನೆ, ಮತ್ತಿ, ಬೋಗಿ ಸೇರಿದಂತೆ ವಿವಿಧ ಜಾತಿಯ ಮರಗಳ ನಾಟಾಗಳು ಇದ್ದವು ಎನ್ನಲಾಗಿದೆ.
ಆದರೆ ನಾಟಾಗಳ ನಿಖರ ಪ್ರಮಾಣ, ಮರಗಳ ಜಾತಿ, ಮಾರುಕಟ್ಟೆ ಮೌಲ್ಯ ಹಾಗೂ ಅವುಗಳ ಮೂಲ ಇನ್ನಷ್ಟೇ ಅಧಿಕೃತವಾಗಿ ಸ್ಪಷ್ಟವಾಗಬೇಕಿದೆ.
ಕಾಡಿನಿಂದ ಮರಗಳನ್ನು ಕಡಿದು ನಾಟಾಗಳನ್ನಾಗಿ ಪರಿವರ್ತಿಸಿ ತೋಟದ ಮನೆಯಲ್ಲಿ ಸಂಗ್ರಹಿಸಲಾಗಿತ್ತು ಇದು ಯಾರ ಕುಮ್ಮಕ್ಕಿನಿಂದ ಅಕ್ರಮವಾಗಿ ಕದ್ದುತಂದು ಅಲ್ಲಿ ಇಡಲಾಗಿತ್ತು ಎನ್ನುವುದು ತನಿಖೆಯಿಂದಲೇ ಹೊರಬರಬೇಕಿದೆ.
ಎಂಪಿಎಂಗೆ ಸೇರಿದ ನೊಡುತೋಪಿನ ಅರಣ್ಯ ವಲಯದಲ್ಲಿ ಫಿಲಿಪ್ ಡಿಸೋಜಾ ಅವರು ಅರಣ್ಯ ವಾಚರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ.
ಅರಣ್ಯ ಸಂಪತ್ತನ್ನು ರಕ್ಷಿಸಬೇಕಾದ ಸಿಬ್ಬಂದಿಯವರೇ ಅಕ್ರಮ ನಾಟಾ ಸಂಗ್ರಹದಲ್ಲಿ ಭಾಗಿಯಾಗಿದ್ದಾರೆ ಎಂಬ ವಿಚಯ ಹೊರ ಬರುತ್ತಿದ್ದಹಾಗೆ ಇದೀಗ ತೀರ್ಥಹಳ್ಳಿ ಅರಣ್ಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಇದರ ಜೊತೆಗೆ ಎಂಪಿಎಂಗೆ ಸೇರಿದ ಅರಣ್ಯ ಪ್ರದೇಶದಲ್ಲಿ 10 ಎಕರೆಗೂ ಅಧಿಕ ಜಾಗದಲ್ಲಿ ಅಕ್ರಮವಾಗಿ ತೋಟ ಮಾಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದ್ದು, ಈ ಬಗ್ಗೆ ಸಮಗ್ರ ಸರ್ವೇ ಹಾಗೂ ಸ್ಥಳ ಪರಿಶೀಲನೆ ನಡೆಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಡಿಆರ್ಎಫ್ಒ ಹರೀಶ್ ನಾಯ್ಕ್ ಮೇಲೂ ಆರೋಪ
ಫಾರೆಸ್ಟ್ ವಾಚರ್ ಫಿಲಿಪ್ ಡಿಸೋಜಾ ಅವರಿಗೆ ಡಿಆರ್ಎಫ್ಒ ಹರೀಶ್ ನಾಯ್ಕ್ ಅವರು ಅಕ್ರಮ ನಾಟಾ ಸಂಗ್ರಹಕ್ಕೆ ಸಹಕಾರ ನೀಡಿದ್ದಾರೆ ಎಂಬ ಆರೋಪವನ್ನು ಕೆಲ ಗ್ರಾಮಸ್ಥರು ಮಾಡಿದ್ದಾರೆ.
ಇಬ್ಬರೂ ಹಲವು ವರ್ಷಗಳಿಂದ ಪರಸ್ಪರ ಸಹಕಾರದೊಂದಿಗೆ ಅಕ್ರಮ ನಾಟಾ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದ್ದು ತೀರ್ಥಹಳ್ಳಿ ಮೂಲದ ಖದೀಮ ಟಿಂಬರ್ ಮರ್ಚೆಂಟ್ ಜೋತೆಗೆ ಕೈ ಮಿಲಾಯಿಸಿದ್ದಾರೆ ಎನ್ನುವ ಆರೋಪವು ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಅಲ್ಲದೆ, ಅರಣ್ಯ ಇಲಾಖೆಯ ಕಾಮಗಾರಿಗಳಿಗೆ ಡಿಆರ್ಎಫ್ಒ ಅವರು ಬೇನಾಮಿ ಗುತ್ತಿಗೆದಾರರ ಮೂಲಕ ಕಾಮಗಾರಿ ನಡೆಸುತ್ತಿದ್ದಾರೆ ಹಾಗೂ ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.
ಈ ಎಲ್ಲ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಅಧಿಕೃತ ಸ್ಪಷ್ಟನೆ ಇನ್ನಷ್ಟೇ ಲಭ್ಯವಾಗಬೇಕಿದೆ. ಆರೋಪಗಳು ತನಿಖೆಯಲ್ಲಿ ಸಾಬೀತಾಗುವವರೆಗೆ ಅವುಗಳನ್ನು ಆರೋಪಗಳಾಗಿಯೇ ಪರಿಗಣಿಸಬೇಕಾಗಿದೆ.
ಡಿಎಫ್ಒಗೆ ದೂರು ನೀಡಿದ ನಂತರ ಅಧಿಕಾರಿಗಳ ದಾಳಿ.
ಫಾರೆಸ್ಟ್ ವಾಚರ್ ಅವರ ತೋಟದ ಮನೆಯಲ್ಲಿ ಅಕ್ರಮ ನಾಟಾಗಳನ್ನು ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಶಿವಮೊಗ್ಗ ಡಿಎಫ್ಒ ಅವರಿಗೆ ದೂರು ಸಲ್ಲಿಸಲಾಗಿತ್ತು ಎಂದು ತಿಳಿದುಬಂದಿದೆ.
ದೂರಿನ ಆಧಾರದ ಮೇಲೆ ಸಂಚಾರಿ ಅರಣ್ಯಾಧಿಕಾರಿಗಳ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ನಾಟಾಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಪ್ರಮುಖ ಪ್ರಶ್ನೆಗಳು.?
ನಾಟಾಗಳು ಎಲ್ಲಿಂದ ಬಂದವು?
ಯಾವ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿದು ತರಲಾಗಿದೆ?
ಮರ ಕಡಿತಕ್ಕೆ ಅನುಮತಿ ಇತ್ತೇ?
ನಾಟಾಗಳನ್ನು ಯಾರಿಗಾಗಿ ಸಂಗ್ರಹಿಸಲಾಗಿತ್ತು?
ಈ ಪ್ರಕರಣದಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ?
ಈ ಎಲ್ಲಾ ಪ್ರಶ್ನೆಗಳಿಗೆ ಅರಣ್ಯ ಇಲಾಖೆಯ ತನಿಖೆಯಿಂದ ಸ್ಪಷ್ಟ ಉತ್ತರ ಸಿಗಬೇಕಿದೆ.
ಅರಣ್ಯ ಪ್ರದೇಶದಲ್ಲಿ 10 ಎಕರೆ ತೋಟದ ಆರೋಪವೂ ತನಿಖೆಯಾಗಲಿ!
ಎಂಪಿಎಂಗೆ ಸೇರಿದ ಅರಣ್ಯ ಪ್ರದೇಶದಲ್ಲಿ 10 ಎಕರೆಗೂ ಅಧಿಕ ಜಾಗದಲ್ಲಿ ಅಕ್ರಮವಾಗಿ ತೋಟ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿರುವ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಪ್ರದೇಶದ ದಾಖಲೆಗಳು, ಗಡಿ ಗುರುತು, ಭೂ ಕಬಳಿಕೆ ಹಾಗೂ ಮರಗಳ ಕಡಿತದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಆರೋಪ ಸಾಬೀತಾದರೆ ಕಠಿಣ ಕ್ರಮಕ್ಕೆ ಆಗ್ರಹ
ಅರಣ್ಯ ಸಂರಕ್ಷಣೆಯ ಜವಾಬ್ದಾರಿ ಹೊಂದಿರುವ ಸಿಬ್ಬಂದಿಯವರೇ ಅಕ್ರಮ ಮರ ಕಡಿತ, ನಾಟಾ ಸಂಗ್ರಹ ಅಥವಾ ಸಾಗಾಟದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಸಾಬೀತಾದರೆ ಯಾವುದೇ ಮುಲಾಜಿಲ್ಲದೆ ಕಾನೂನು ಹಾಗೂ ಇಲಾಖಾ ನಿಯಮಗಳ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಫಾರೆಸ್ಟ್ ವಾಚರ್ ವಿರುದ್ಧದ ಆರೋಪಗಳ ಜೊತೆಗೆ ಡಿಆರ್ಎಫ್ಒ ಮೇಲಿರುವ ಆರೋಪಗಳ ಬಗ್ಗೆಯೂ ಪ್ರತ್ಯೇಕ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು. ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ತೋಟ ಮಾಡಿರುವ ಆರೋಪ, ಅಧಿಕಾರ ದುರ್ಬಳಕೆ ಹಾಗೂ ಇಲಾಖಾ ಕಾಮಗಾರಿಗಳಲ್ಲಿನ ನಿಯಮ ಉಲ್ಲಂಘನೆ ಕುರಿತ ಆರೋಪಗಳನ್ನೂ ಪರಿಶೀಲಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸದ್ಯ ಅರಣ್ಯಾಧಿಕಾರಿಗಳ ವಶದಲ್ಲಿರುವ ನಾಟಾಗಳ ಜಾತಿ, ಪ್ರಮಾಣ, ಮೌಲ್ಯ, ಮೂಲಸ್ಥಳ ಹಾಗೂ ಕಡಿತಗೊಂಡ ಪ್ರದೇಶ ಪತ್ತೆಹಚ್ಚುವುದು ತನಿಖೆಯ ಪ್ರಮುಖ ಭಾಗವಾಗಿದೆ.
ಅಕ್ರಮವಾಗಿ ಮರ ಕಡಿತ ಹಾಗೂ ನಾಟಾ ಸಂಗ್ರಹ ನಡೆದಿರುವುದು ತನಿಖೆಯಲ್ಲಿ ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಪ್ರಕರಣದಲ್ಲಿ ಇಲಾಖೆಯ ಸಿಬ್ಬಂದಿಯ ಪಾತ್ರ ಸಾಬೀತಾದರೆ ಅವರ ವಿರುದ್ಧವೂ ಇಲಾಖಾ ಮಟ್ಟದಲ್ಲಿ ಕ್ರಮ ಜರುಗಿಸಲಾಗುತ್ತದೆ.
ಸುದ್ದಿಯ ಹಿಂದೆ ಸತ್ಯ… ಜನರ ಜೊತೆ ಅಶ್ವಸೂರ್ಯ.


