ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಕೊಲೆ; ಕಾರಿನ ಡಿಕ್ಕಿಯಲ್ಲಿತ್ತು ತುಂಡು ತುಂಡಾದ ವ್ಯಕ್ತಿಯ ಶವ.!
ಯುಎಇಯ ಶಾರ್ಜಾದಲ್ಲಿ ಪತ್ನಿ ಹಾಗೂ ಪುತ್ರನೊಂದಿಗೆ ವಾಸವಾಗಿದ್ದ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಕೊಲೆಯಾಗಿದೆ. ಕೊಲೆಯ ಬಳಿಕ ಮೃತನ ಪತ್ನಿ ಹಾಗೂ ಅಪ್ರಾಪ್ತ ವಯಸ್ಸಿನ ಪುತ್ರ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು ಈ ಹತ್ಯೆ ಹಿಂದೆ ಪತ್ನಿ ಮಗನ ಕೈವಾಡವಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಶಾರ್ಜಾ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ…
news.ashwasurya.in
ಅಶ್ವಸೂರ್ಯ/ಉಡುಪಿ: ಯುಎಇಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಪ್ರಕಾಶ್ ಕುಂದರ್ ಕೊಲೆಯಾದ ದುರ್ದೈವಿ, ಜುಲೈ ತಿಂಗಳಲ್ಲಿ ಈ ಕೊಲೆ ನಡೆದಿದ್ದು, ಎರಡು ತಿಂಗಳ ಬಳಿಕ ಘಟನೆ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಕೊಲೆಮಾಡಿ, ಶವವನ್ನು 9 ತುಂಡುಗಳನ್ನಾಗಿ ಮಾಡಿ, ಅವರದ್ದೇ ಕಾರಿನ ಡಿಕ್ಕಿಯಲ್ಲಿ ತುಂಬಿದ್ದರು ಎಂದು ತಿಳಿದುಬಂದಿದೆ.
ಕುಟುಂಬದ ಸದಸ್ಯರ ಜೊತೆಯಲ್ಲಿ ಕೊಲೆಯಾದ ಪ್ರಕಾಶ್

ಶಾರ್ಜಾದಲ್ಲಿ ಪತ್ನಿ ಹಾಗೂ ಪುತ್ರನೊಂದಿಗೆ ಪ್ರಕಾಶ್ ವಾಸವಾಗಿದ್ದರು.ಕಳೆದ 20 ವರ್ಷಗಳ ಹಿಂದೆ ಪ್ರಕಾಶ್ ಟೀನಾ ಮದುವೆಯಾಗಿದ್ದರು. ಇವರಿಗೆ ಎಸ್ಸೆಸ್ಸೆಲ್ಸಿ ಓದುವ ಮಗನಿದ್ದ. ಕುಂದಾಪುರ ಮೂಲದ ಪ್ರಕಾಶ್ ಶಾರ್ಜಾ ಏರ್ಪೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದರು, ಉದ್ಯಾವರ ಮೂಲದ ಪತ್ನಿ ಟೀನಾ ಶಿಕ್ಷಕಿ.ಕೊಲೆಯ ಬಳಿಕ ಮೃತನ ಪತ್ನಿ ಟೀನಾ ಹಾಗೂ ಅಪ್ರಾಪ್ತ ವಯಸ್ಸಿನ ಪುತ್ರ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪತ್ನಿಯೇ ಕೊಲೆ ಮಾಡಿಸಿದ್ದಾರೆಯೇ? ಅಥವಾ ಬೇರೆಯವರ ಸಹಾಯದಿಂದ ಕೃತ್ಯ ಎಸಗಲಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಪತ್ನಿ ಮತ್ತು ಪುತ್ರ ಭಾರತಕ್ಕೆ ಬಂದಿರುವ ಶಂಕೆ ಕೂಡ ವ್ಯಕ್ತವಾಗಿದೆ. ಈ ಸಂಬಂಧ ಶಾರ್ಜಾ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಮೃತರು ಪ್ರಕಾಶ್ ಎಂದು ಡಿಎನ್ಎ ಪರೀಕ್ಷೆ ಮೂಲಕ ಸಾಬೀತಾಗಿದೆ. ಇನ್ನು ಸಿಸಿಟಿವಿಯಲ್ಲಿ ಓರ್ವ ಮಹಿಳೆ ಇಬ್ಬರು ಪುರುಷರು ಚೀಲ ತರುವುದು ಸೆರೆಯಾಗಿದೆ. ಪತ್ನಿ ಟೀನಾಳಿಗೆ ಬೇರೆ ವ್ಯಕ್ತಿಯ ಜೊತೆಗೆ ಅಕ್ರಮ ಸಂಬಂಧ ಇರುವ ಅನುಮಾನ ವ್ಯಕ್ತವಾಗಿದೆ, ಪುತ್ರ ಮತ್ತು ಪ್ರಿಯಕರನ ಜೊತೆ ಸೇರಿ ಪತ್ನಿ ಪತಿಯ ಕೊಲೆ ಮಾಡಿರುವ ಅನುಮಾನ ದಟ್ಟವಾಗಿದೆ.

ಜು.20 ರಂದು ಸಹೋದರನನ್ನು ಸಂಪರ್ಕಿಸಲು ಪ್ರಶಾಂತ್ ಕುಂದರ್ ಯತ್ನಿಸಿದ್ದರು. ಯಾವಾಗಲೂ ಪ್ರಕಾಶ್ ವಾಯ್ಸ್ ಮೆಸೇಜ್ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದರು. ಈ ಬಾರಿ ಟೆಕ್ಸ್ಟ್ ಮೆಸೇಜ್ ಮೂಲಕ ಉತ್ತರ ನೀಡಿದ್ದರು. ಕುಟುಂಬಸ್ಥರು ಕರೆ ಮಾಡುವಂತೆ ಒತ್ತಾಯಿಸಿದ ನಂತರ ಸಂಪರ್ಕ ಕಡಿತಗೊಂಡಿತ್ತು ಎಂದು ತಿಳಿದುಬಂದಿದೆ.
ಸಂಬಂಧಿಕರು ಪ್ರಕಾಶ್ ಕೆಲಸ ಮಾಡುತ್ತಿದ್ದ ಕಂಪನಿಯನ್ನು ಸಂಪರ್ಕಿಸಿದ್ದರು. ಆಗ ಅವರು ಭಾರತಕ್ಕೆ ಹೋಗಿರುವುದಾಗಿ ಕಂಪನಿ ತಿಳಿಸಿತ್ತು. ಆದರೆ ಭಾರತಕ್ಕೆ ಬಾರದೇ ಇರುವುದರಿಂದ ಶಾರ್ಜಾದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ಹುಡುಕಾಟ ನಡೆಸಿದಾಗ ಕಾರಿನ ಡಿಕ್ಕಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಮೃತದೇಹಕ್ಕಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ.


