ಬೆಂಗಳೂರು : ಮಹಿಳಾ PSIಗೆ ಕಪಾಳಮೋಕ್ಷ ಪ್ರಕರಣ ಶಾಸಕ ಸುರೇಶ್‌ಗೌಡ ಪುತ್ರಿ ಐಶ್ವರ್ಯಾಗೆ ಕೋರ್ಟ್ ಶಾಕ್. ಜಾಮೀನು ಅರ್ಜಿ ವಜಾ!
news.ashwasurya.in
ಅಶ್ವಸೂರ್ಯ/ಮಂಡ್ಯ : ಕರ್ತವ್ಯನಿರತ ಮಹಿಳಾ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗೆ ಕಪಾಳಮೋಕ್ಷ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಶಾಸಕ ಬಿ.ಎಸ್. ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯಾಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ನಿರೀಕ್ಷಣಾ ಜಾಮೀನು ಕೋರಿ ಐಶ್ವರ್ಯ ಸಲ್ಲಿಸಿದ್ದ ಅರ್ಜಿಯನ್ನು ಶ್ರೀರಂಗಪಟ್ಟಣದ ನ್ಯಾಯಾಲಯ ವಜಾಗೊಳಿಸಿದೆ .
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಅಹಲ್ಯದೇವಿ ದೇವಸ್ಥಾನದಲ್ಲಿ ಆಗಸ್ಟ್ 12ರಂದು ಈ ಘಟನೆ ನಡೆದಿತ್ತು. ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದ ಸಂದರ್ಭದಲ್ಲಿ ದರ್ಶನ ಹಾಗೂ ಗರ್ಭಗುಡಿ ಪ್ರವೇಶದ ವಿಚಾರವಾಗಿ ಐಶ್ವರ್ಯ ಮತ್ತು ಕರ್ತವ್ಯದಲ್ಲಿದ್ದ ಮಹಿಳಾ PSI ಸವಿತಾ ಬಿ. ಪಾಟೀಲ್ ನಡುವೆ ಮಾತಿನ ಚಕಮಕಿ ನಡೆದಿತ್ತು.

ಈ ವೇಳೆ ಐಶ್ವರ್ಯ ಅವರು PSIಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು. ನಂತರ PSI ಕೂಡ ಪ್ರತಿಕ್ರಿಯೆಯಾಗಿ ಹೊಡೆದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.
ಘಟನೆಗೆ ಸಂಬಂಧಿಸಿದಂತೆ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯ ವಿರುದ್ಧ ಪ್ರಕರಣ ದಾಖಲಾಗಿತ್ತು.ಆದರೆ ಪೊಲೀಸರು ಅವರನ್ನು ಬಂಧಿಸಿರಲಿಲ್ಲ. ವಿಚಾರಣೆಗೆ ಹಾಜರಾಗಿದ್ದ ಐಶ್ವರ್ಯ, ಬಂಧನದ ಭೀತಿಯಿಂದ ಕಾನೂನು ರಕ್ಷಣೆ ಕೋರಿ ಶ್ರೀರಂಗಪಟ್ಟಣ ನ್ಯಾಯಾಲಯದ ಮೊರೆ ಹೋಗಿದ್ದರು.
ಜಾಮೀನು ಅರ್ಜಿಯ ವಿಚಾರಣೆ ವೇಳೆ ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ, ಕರ್ತವ್ಯನಿರತ ಸರ್ಕಾರಿ ಅಧಿಕಾರಿಯ ಮೇಲಿನ ಹಲ್ಲೆಯ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಇದರಿಂದ ಮುಂದಿನ ಹಂತದಲ್ಲಿ ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಘಟನೆ ನಡೆದ ಕೆಲ ದಿನಗಳ ಬಳಿಕ ದೇವಸ್ಥಾನದ ಸಿಸಿಟಿವಿ ದೃಶ್ಯಗಳು ಹೊರಬಂದಿದ್ದವು. ವಿಡಿಯೋದಲ್ಲಿ ಐಶ್ವರ್ಯ ಹಾಗೂ PSI ಸವಿತಾ ನಡುವೆ ವಾಗ್ವಾದ ನಡೆಯುವುದು, ಬಳಿಕ ಐಶ್ವರ್ಯ ಅವರು PSIಗೆ ಹೊಡೆಯುವುದು ಮತ್ತು ನಂತರ PSI ಕೂಡ ಪ್ರತಿಕ್ರಿಯಿಸುವುದು ಕಂಡುಬಂದಿತ್ತು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು.
ಘಟನೆ ಬಗ್ಗೆ ಶಾಸಕ ಸುರೇಶ್‌ಗೌಡ ಅವರು ತಮ್ಮ ಪುತ್ರಿಯ ಪರವಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ಇದೇ ವೇಳೆ ತಮ್ಮ ಪುತ್ರಿಗೆ ಮೊದಲು ಪೊಲೀಸ್ ಅಧಿಕಾರಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದರು. ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ತಾವು ನೋಡಿರಲಿಲ್ಲ ಎಂದು ಕೂಡ ಅವರು ಹೇಳಿದ್ದರು. ಇದೀಗ ಐಶ್ವರ್ಯ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿರುವುದು ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದ್ದು, ಮುಂದಿನ ಕಾನೂನು ಕ್ರಮದ ಬಗ್ಗೆ ಕುತೂಹಲ ಹೆಚ್ಚಾಗಿದೆ.


