ಶೃಂಗೇರಿ : ಪವಿತ್ರ ಶೃಂಗೇರಿಯ ಶಾರದಾಂಬೆಯ ಕ್ಷೇತ್ರದಲ್ಲಿ ಅಕ್ರಮ ಇಸ್ಪೀಟ್ ದಂಧೆ.!? ಮಕ್ಕಳ ಅಕ್ಷರ ಅಭ್ಯಾಸದ ಪುಣ್ಯಕ್ಷೇತ್ರದಲ್ಲಿ ಇಸ್ಪೀಟ್ ಕಲರವ.!? ಪೊಲೀಸರ ಮೌನ.?
news.ashwasurya.in
ಪವಿತ್ರ ಕ್ಷೇತ್ರ ಶೃಂಗೇರಿಯ ಶಾರದಾಂಬೆಯ ಸನ್ನಿಧಿಯಲ್ಲಿ ಜೂಜಿನ ಅಡ್ಡೆಗಳ ಆರೋಪ – ಪೊಲೀಸರ ಮೌನಕ್ಕೆ ಸಾರ್ವಜನಿಕರ ಪ್ರಶ್ನೆ!?…

ಅಶ್ವಸೂರ್ಯ/ಶೃಂಗೇರಿ: ಆಧ್ಯಾತ್ಮಿಕತೆ, ಶಿಕ್ಷಣ, ಸಂಸ್ಕೃತಿ ಹಾಗೂ ಧಾರ್ಮಿಕ ಪರಂಪರೆಗೆ ಹೆಸರಾಗಿರುವ ಶೃಂಗೇರಿ ಇದೀಗ ಮತ್ತೊಂದು ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸುದ್ದಿಯಲ್ಲಿದೆ. ಪವಿತ್ರ ಕ್ಷೇತ್ರದ ವ್ಯಾಪ್ತಿಯಲ್ಲಿ ಇಸ್ಪೀಟ್ ಜೂಜಾಟದ ದಂಧೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ,
ಶಾರದಾಂಬೆಯ ದರ್ಶನಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುವ ಈ ಪವಿತ್ರ ಕ್ಷೇತ್ರದಲ್ಲಿ ಹಗಲು-ರಾತ್ರಿ ಎನ್ನದೆ ಜೂಜಿನ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿರುವುದ್ದು ಪೊಲೀಸರ ಮೌನವೇಕೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜೂಜಿನ ಅಡ್ಡೆಗಳ ಹಿಂದೆ ಯಾರಿದ್ದಾರೆ?
ಇಸ್ಪೀಟ್ ಆಟವೆಂಬ ಹೆಸರಿನಲ್ಲಿ ಅಕ್ರಮ ಜೂಜಿನ ವಹಿವಾಟು ನಡೆಯುತ್ತಿದೆ ಎನ್ನಲಾಗುತ್ತಿರುವ ಸ್ಥಳಗಳ ಬಗ್ಗೆ ಸ್ಥಳೀಯವಾಗಿ ಹಲವು ಮಾತುಗಳು ಕೇಳಿಬರುತ್ತಿವೆ. ಆದರೆ ಈ ಚಟುವಟಿಕೆಗಳ ಹಿಂದೆ ಯಾರು ಇದ್ದಾರೆ? ಸ್ಥಳೀಯವಾಗಿ ಯಾರಾದರೂ ಪ್ರಭಾವಿ ವ್ಯಕ್ತಿಗಳ ಬೆಂಬಲವಿದೆಯೇ? ಅಕ್ರಮ ಜೂಜಾಟಕ್ಕೆ ಸ್ಥಳಾವಕಾಶ ಕಲ್ಪಿಸಿದವರು ಯಾರು?
ಆರೋಪಗಳು ನಿಜವಾಗಿದ್ದರೆ, ಅಕ್ರಮ ಜೂಜಾಟವನ್ನು ನಡೆಸುವವರಷ್ಟೇ ಅಲ್ಲದೆ, ಅದಕ್ಕೆ ಸ್ಥಳ, ಹಣಕಾಸು ಅಥವಾ ಇತರ ರೀತಿಯ ಸಹಕಾರ ನೀಡುತ್ತಿರುವವರ ಬಗ್ಗೆಯೂ ತನಿಖೆ ನಡೆಯಬೇಕಾಗಿದೆ.
ಪೊಲೀಸ್ ಇಲಾಖೆಗೆ ಸವಾಲು!
ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲವೇ? ಅಥವಾ ಈ ಕುರಿತು ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲವೇ? ಮಾಹಿತಿ ಇಲ್ಲದಿದ್ದರೆ ಪೊಲೀಸ್ ಗುಪ್ತಚರ ವ್ಯವಸ್ಥೆ ಎಲ್ಲಿದೆ? ಮಾಹಿತಿ ಇದ್ದರೆ—ಕ್ರಮ ಎಲ್ಲಿದೆ?
ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುವಂತಾಗಿದೆ.
ಯಾವುದೇ ಆರೋಪವನ್ನು ಕೇವಲ ಮಾತಿನ ಆಧಾರದ ಮೇಲೆ ಸತ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ ಆರೋಪಗಳು ಸಾರ್ವಜನಿಕವಾಗಿ ಕೇಳಿಬರುತ್ತಿರುವಾಗ ಅವುಗಳ ಬಗ್ಗೆ ಪರಿಶೀಲನೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸುವುದು ಸಂಬಂಧಪಟ್ಟ ಇಲಾಖೆಯ ಜವಾಬ್ದಾರಿಯಾಗಿದೆ.

ಪವಿತ್ರ ಕ್ಷೇತ್ರವೋ… ಜೂಜಿನ ಅಖಾಡವೋ?
ಶೃಂಗೇರಿ ಎಂದರೆ ಭಕ್ತರಿಗೆ ಪವಿತ್ರ ಕ್ಷೇತ್ರ. ಇಲ್ಲಿ ಧಾರ್ಮಿಕ ವಾತಾವರಣವನ್ನು ಕಾಪಾಡಬೇಕಾದ ಹೊಣೆ ಎಲ್ಲರ ಮೇಲಿದೆ. ಅಂತಹ ಪ್ರದೇಶದಲ್ಲಿ ಅಕ್ರಮ ಇಸ್ಪೀಟ್ ಜೂಜಾಟದ ದಂಧೆ ನೆಡೆಯುತ್ತಿದೆ ಎಂದು ಆರೋಪಗಳು ಕೇಳಿಬಂದರೆ ಅದು ಕೇವಲ ಕಾನೂನು-ಸುವ್ಯವಸ್ಥೆಯ ವಿಚಾರವಾಗಿರದೆ, ಕ್ಷೇತ್ರದ ಗೌರವ ಮತ್ತು ಸಾರ್ವಜನಿಕ ನಂಬಿಕೆಗೆ ಸಂಬಂಧಿಸಿದ ವಿಷಯವೂ ಆಗಿರುತ್ತದೆ.
ಜೂಜಾಟದಿಂದ ಹಣ ಕಳೆದುಕೊಳ್ಳುವ ಕುಟುಂಬಗಳು, ಸಾಲದ ಸಮಸ್ಯೆ, ಆರ್ಥಿಕ ಸಂಕಷ್ಟ ಹಾಗೂ ಸಾಮಾಜಿಕ ಅಶಾಂತಿ ಉಂಟಾಗುವ ಸಾಧ್ಯತೆಯಿರುವುದರಿಂದ ಇಂತಹ ಆರೋಪಗಳನ್ನು ಪೊಲೀಸ್ ಇಲಾಖೆ ಲಘುವಾಗಿ ಪರಿಗಣಿಸಬಾರದು.
ಕೆಲವು ನೇರ ಪ್ರಶ್ನೆಗಳು…
🔴 ಶೃಂಗೇರಿ ವ್ಯಾಪ್ತಿಯಲ್ಲಿ ಅಕ್ರಮ ಇಸ್ಪೀಟ್ ಜೂಜಾಟ ನಡೆಯುತ್ತಿದೆಯೇ?
🔴 ನಡೆಯುತ್ತಿದ್ದರೆ ಈ ಅಕ್ರಮ ಜೂಜಿನಾಟಕ್ಕೆ ಅವಕಾಶವನ್ನು ಮಾಡಿಕೊಟ್ಟವರುಬಯಾರು.?
🔴 ಈ ಚಟುವಟಿಕೆಗಳ ಹಿಂದೆ ಇರುವವರು ಯಾರು?
🔴 ಅಕ್ರಮ ಇಸ್ಪೀಟ್ ಜೂಜಿನ ಅಡ್ಡೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆಯೇ?
🔴 ಮಾಹಿತಿ ಇದ್ದರೆ ಈವರೆಗೆ ಸುಮ್ಮನಿರಲು ಕಾರಣವೇನು.?
🔴 ಯಾವುದೇ ದಾಳಿ ಅಥವಾ ಪರಿಶೀಲನೆ ನಡೆದಿದೆಯೇ?
🔴 ಸ್ಥಳೀಯವಾಗಿ ಯಾರಾದರೂ ಪ್ರಭಾವಿ ವ್ಯಕ್ತಿಗಳ ಹಸ್ತಕ್ಷೇಪವಿದೆಯೇ?
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪೋಲಿಸ್ ಇಲಾಖೆ ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ಮಾಡಿದರೆ ಹೊರಬರಲಿದೆ. ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಶೃಂಗೇರಿ ವ್ಯಾಪ್ತಿಯಲ್ಲಿ ಅಕ್ರಮ ಜೂಜಾಟದ ಕುರಿತು ಸಮಗ್ರ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತಾಗಲಿ,

ಈ ಅಕ್ರಮ ಇಸ್ಪೀಟ್ ದಂಧೆಯ ಹಿಂದೆ ಯಾರಿದ್ದಾರೆ.? ಇಲ್ಲಿ ನೆಡೆಯುವ ಸ್ಟ್ರೈಕ್ ರೇಟ್ ಏನು.? ದಿನನಿತ್ಯದ ಹಣದ ವಹಿವಾಟು ಎಷ್ಟು.? ಅದೇಷ್ಟು ಟೇಬಲ್ ಗಳ ಮೇಲೆ ಇಸ್ಪೀಟ್ ಎಲೆಗಳ ನರ್ತನ.? ಎಲ್ಲವನ್ನೂ ನಿರೀಕ್ಷಿಸಿ……..
ಇನ್ನಷ್ಟು ನಿರೀಕ್ಷಿಸಿ…
‘ಅಶ್ವಸೂರ್ಯ ನ್ಯೂಸ್’ನ ಮುಂದಿನ ವರದಿಯಲ್ಲಿ.

