ನನ್ನ ಬೆಡ್ರೂಂ ಬಗ್ಗೆ ಹಗಲುಗನಸು ಕಾಣಬೇಡಿ.. ರಾಮದೇವ್ ಬಾಬಾಗೆ ಬಿಜೆಪಿ ಸಂಸದೆ ಕಂಗನಾ ರಣಾವತ್ ತಿರುಗೇಟು.
news.ashwasurya.in
ಅಶ್ವಸೂರ್ಯ/ನವದೆಹಲಿ : ನೀಟ್ (NEET) ಪರೀಕ್ಷೆಯಲ್ಲಿ ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಇತ್ತೀಚೆಗೆ ದೆಹಲಿಯ ಜಂತರ್ ಮಂತರ್ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಯಿಂದ ಜೆನ್-ಝಡ್ (Gen Z) ಯುವಕರು ನಡೆಸಿದ ಪ್ರತಿಭಟನೆಗಳು ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿವೆ. ಈ ಪ್ರತಿಭಟನೆಗಳಿಗೆ ಸ್ಪಂದಿಸಿದ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ಜೆನ್-ಝಡ್ ಯುವಕರ ಹೋರಾಟಕ್ಕೆ ಸಾರ್ವಜನಿಕ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಯುವಕರು ಅಂದುಕೊಂಡರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂದು ಕೆಲವರು ಶ್ಲಾಘಿಸಿದರೆ, ಮತ್ತೆ ಕೆಲವರು ಯುವಕರು ಕೆಲವು ಪಕ್ಷಗಳು ಹಾಗೂ ದೇಶ ವಿರೋಧಿ ಶಕ್ತಿಗಳ ಕೈಗೊಂಬೆಯಾಗಿದ್ದಾರೆ ಎಂದು ಟೀಕಿಸಿದ್ದಾರೆ. ಇಂತಹ ಟೀಕಾಕಾರರಲ್ಲಿ ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಕೂಡ ಒಬ್ಬರು. ಜೆನ್-ಝಡ್ ಪ್ರತಿಭಟನೆಯನ್ನು ಅವರು ಖಂಡಿಸಿದ್ದರು, ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ನಡುವೆ, ಕಂಗನಾ ವಿರುದ್ಧ ಖ್ಯಾತ ಯೋಗ ಗುರು ಬಾಬಾ ರಾಮದೇವ್ ತೀವ್ರ ವಾಗ್ದಾಳಿ ನಡೆಸಿದ್ದರು. ಅದಕ್ಕೆ ಇದೀಗ ಕಂಗನಾ ತಿರುಗೇಟು ನೀಡಿದ್ದಾರೆ.
ಇನ್ನು, ದೆಹಲಿಯಲ್ಲಿ ಜೆನ್-ಝಡ್ ಯುವಕರು ನಡೆಸಿದ ಪ್ರತಿಭಟನೆಗಳ ಬಗ್ಗೆ ಕಂಗನಾ ಈ ಹಿಂದೆ ಕೆಲವು ಪೋಸ್ಟ್ಗಳನ್ನು ಹಾಕಿದ್ದರು. ‘ಯುವಕರು ಪ್ರತಿಭಟನೆ ನಡೆಸದ ಸ್ಥಳದಲ್ಲಿ ಅಸಹ್ಯ, ಕಸ ಬಿಟ್ಟು ಏನೂ ಇಲ್ಲ. ಈ ಮಕ್ಕಳನ್ನು ಯಾರು ಹೆತ್ತರು? ಹೇಗೆ ಬೆಳೆಸುತ್ತಿದ್ದಾರೆ?’ ಎಂದು ಅವರು ಸಂಚಲನಕಾರಿ ಹೇಳಿಕೆ ನೀಡಿದ್ದರು. ‘ಆಯ್ಕೆಯಾದ ಸರ್ಕಾರವನ್ನು ಬೆದರಿಸಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದೂ ಹೇಳಿದ್ದ ಅವರು, ಸಂಸತ್ತನ್ನು ಮುುತ್ತಿಗೆ ಹಾಕಲು ಯತ್ನಿಸಿದ ಗುಂಪಿನಿಂದ ತಮ್ಮನ್ನು ರಕ್ಷಿಸಿದ ದೆಹಲಿ ಪೊಲೀಸರಿಗೆ ಧನ್ಯವಾದ ಹೇಳಿದ್ದರು. ಅಷ್ಟೇ ಅಲ್ಲದೇ, ಜೆನ್-ಝಡ್ ಯುವಕರನ್ನು ‘ಗಟರ್ ಜನರೇಷನ್’ (Gutter Generation – ಕೊಳಚೆ ತಲೆಮಾರು) ಎಂದು ಕರೆಯುವ ಮೂಲಕ ಕಟುವಾಗಿ ಟೀಕಿಸಿದ್ದರು.

ಇದಕ್ಕೆ ‘ಕಾಕ್ರೋಚ್ ಜನತಾ ಪಾರ್ಟಿ’ಯ ವಕ್ತಾರ ಸೌರವ್ ದಾಸ್ ತೀವ್ರವಾಗಿ ಪ್ರತಿಕ್ರಿಯಿಸಿದ್ದರು. ‘ಯುವ ಪೀಳಿಗೆಯ ಬಗ್ಗೆ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದನ್ನು ನೋಡಿದರೆ, ಅವರ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಅರ್ಥವಾಗುತ್ತದೆ. ನಿಮ್ಮ ಮನೆಯಲ್ಲಿ ಜೆನ್-ಝಡ್, ಜೆನ್-ಆಲ್ಫಾ ತಲೆಮಾರಿನವರು ಇದ್ದರೆ, ಅವರನ್ನೂ ನೀವು ಗಟರ್ ಜನರೇಷನ್ ಎಂದು ಕರೆಯುತ್ತೀರಾ?’ ಎಂದು ಪ್ರಶ್ನಿಸಿದ್ದರು. ‘ಕಂಗನಾ ಹೇಳಿಕೆಗಳನ್ನು ಬಿಜೆಪಿಯವರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಜೆನ್-ಝಡ್ ಪ್ರತಿಭಟನೆಯನ್ನು ಅಸ್ತ್ರವಾಗಿ ಬಳಸಿಕೊಂಡು ಸುದ್ದಿಯಲ್ಲಿರಲು ಅವರು ಪ್ರಯತ್ನಿಸುತ್ತಿದ್ದಾರೆ’ ಎಂದು ಸೌರವ್ ತಿರುಗೇಟು ನೀಡಿದ್ದರು. ಇದಕ್ಕೆ ಕಂಗನಾ ಅದೇ ರೀತಿ ಸ್ಪಂದಿಸಿ, ‘ಯಾರೀ ಸೌರವ್ ದಾಸ್? ಓರ್ವ ಕೆಲಸಕ್ಕಿಲ್ಲದ, ನಿರುದ್ಯೋಗಿ ವ್ಯಕ್ತಿ’ ಎಂದು ಹರಿಹಾಯ್ದಿದ್ದರು. ಬಳಿಕ ಈ ವಿವಾದ ತಾರಕಕ್ಕೇರಿದ್ದರಿಂದ ಕಂಗನಾ ತಮ್ಮ ನಿಲುವನ್ನು ಬದಲಿಸಿಕೊಂಡು, ‘ನಾನು ಒಟ್ಟಾರೆ ಜೆನ್-ಝಡ್ ಬಗ್ಗೆ ಹೇಳಿಲ್ಲ, ಕೇವಲ ಕೆಲವರ ಬಗ್ಗೆ ಮಾತ್ರ ಮಾತನಾಡಿದ್ದೇನೆ’ ಎಂದು ಸ್ಪಷ್ಟನೆ ನೀಡಿದ್ದರು.
ಈ ವಿವಾದಕ್ಕೆ ಖ್ಯಾತ ಯೋಗ ಗುರು ಬಾಬಾ ರಾಮದೇವ್ ಮೂಗು ತೂರಿಸಿದ್ದಾರೆ. ‘ದೇಶದ ಯುವಕರನ್ನು ಅವಮಾನಿಸಲು ಕಂಗನಾಳಿಗಿರುವ ಅರ್ಹತೆ ಏನು? ಅವರ ಬಾಲ್ಯ ಹೇಗಿತ್ತು? ಯವ್ವೌನ ಹೇಗಿತ್ತುi? ಅವರ ಹಿಂದಿನ ಕ್ರಿಯೆಗಳು, ಸಾಧನೆಗಳು ಏನು?’ ಎಂದು ಪ್ರಶ್ನಿಸಿದ್ದ ಅವರು, ‘ಯುವ ಪೀಳಿಗೆಯನ್ನು ಕೊಳಚೆ ತಲೆಮಾರು ಎನ್ನುವುದು ಕಲುಷಿತ ಮನಸ್ಥಿತಿಗೆ ಸಾಕ್ಷಿ. ಇಂತಹ ವ್ಯಕ್ತಿಗಳ ಬಗ್ಗೆ ಮಾತನಾಡಲೂ ನಾನು ಇಷ್ಟಪಡುವುದಿಲ್ಲ’ ಎಂದು ಬಾಬಾ ರಾಮದೇವ್ ಹೇಳಿದ್ದರು.
ಇದಕ್ಕೆ ಕೆಲವೇ ಗಂಟೆಗಳ ಅಂತರದಲ್ಲಿ ಕಂಗನಾ ರಣಾವತ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಪ್ರತಿಕ್ರಿಯಿಸಿದ್ದಾರೆ. ‘ನನ್ನ ಯವ್ವನ, ಬೆಡ್ರೂಂ ಬಗ್ಗೆ ಹಗಲುಗನಸು ಕಾಣಬೇಡಿ. ಕೇವಲ ಪುಕಾರುಗಳು, ಇತರ ವದಂತಿಗಳ ಆಧಾರದ ಮೇಲೆ ಯಾರ ವ್ಯಕ್ತಿತ್ವವನ್ನೂ ಅಂದಾಜಿಸುವುದು ಸರಿಯಲ್ಲ. ನನಗೆ ಎಂದೂ ನಕಲಿ, ಮೋಸದ ವೈದ್ಯಕೀಯ ಕ್ಲೈಮ್ಗಳನ್ನು ಮಾಡಿ ಸುಪ್ರೀಂ ಕೋರ್ಟ್ ಮುಂದೆ ನಿಂತು, ಛಾಟಿ ಏಟು ತಿಂದಿಲ್ಲ. ನಿಮ್ಮಕಿಂತ ನನ್ನ ಕ್ಯಾರೆಕ್ಟರ್ ಎಷ್ಟೋ ಉತ್ತಮವಾಗಿದೆ, ಇಲ್ಲಿ ಯಾವುದೇ ಮೋಸಗಳಿಲ್ಲ’ ಎಂದು ಕಂಗನಾ ಖಾರಿವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
2023ರ ಮಾರ್ಚ್ನಲ್ಲಿ ಪತಂಜಲಿ ಆಯುರ್ವೇದ ಉತ್ಪನ್ನಗಳ ಬಗ್ಗೆ ತಪ್ಪು ಜಾಹೀರಾತು ನೀಡಿದ ಪ್ರಕರಣದಲ್ಲಿ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ವಿರುದ್ಧ ಸರ್ವೋಚ್ಚ ನ್ಯಾಯಾಲಯವು ಗರಂ ಆಗಿತ್ತು. ಆಗ ಇವರಿಬ್ಬರೂ ಸುಪ್ರೀಂ ಕೋರ್ಟ್ ಎದುರು ಹಾಜರಾಗಿ ಕ್ಷಮೆಯಾಚಿಸಿದ್ದರು. ಈ ಹಳೆಯ ಪ್ರಕರಣವನ್ನು ಪ್ರಸ್ತಾಪಿಸುತ್ತಾ ಕಂಗನಾ ಬಾಬಾ ರಾಮದೇವ್ಗೆ ತಿರುಗೇಟು ನೀಡಿದ್ದಾರೆ. ಇದೀಗ ಈ ಬಗ್ಗೆ ಬಾಬಾ ರಾಮದೇವ್ ಹೇಗೆ ಪ್ರತಿಕ್ರಿಯಿಸುತ್ತಾರೆ? ಈ ವಿವಾದ ಎಲ್ಲಿಗೆ ತಲುಪುತ್ತದೆ ಎಂದು ಸಿನಿಮಾ ಹಾಗೂ ರಾಜಕೀಯ ವಲಯಗಳಲ್ಲಿ ಕುತೂಹಲ ಮೂಡಿಸಿದೆ.


