
ಹತ್ಯೆಯಾದ ಲಾವಣ್ಯರ ಪಾರ್ಥೀವ ಶರೀರ ಮನೆ ಬಾಗಿಲಿಗೆ ಬಂದೊಡನೆ ಸಂಭಂದಿಕರು, ಸ್ನೇಹಿತರು, ಸ್ಥಳೀಯರ ಮುಗಿಲು ಮುಟ್ಟಿದ ಆಕ್ರಂದನ..!

ಮನೆ ಬಾಗಿಲಿಗೆ ಲಾವಣ್ಯರ ಪಾರ್ಥೀವ ಶರೀರ ತಲುಪುತ್ತಿದ್ದಂತೆ, ಅಲ್ಲಿ ನೆರೆದಿದ್ದ ಕುಟುಂಬಸ್ಥರು, ಬಂಧು-ಬಳಗ, ಸ್ನೇಹಿತರು ಹಾಗೂ ಸ್ಥಳೀಯರ ಕಣ್ಣೀರಿನ ಕಟ್ಟೆ ಒಡೆಯಿತು.
“ಇನ್ನೊಮ್ಮೆ ಕಣ್ಣು ತೆರೆಯಮ್ಮ…” ಎಂದು ತಾಯಿಯ ಹೃದಯವಿದ್ರಾವಕ ಆಕ್ರಂದನ, ತಂದೆಯ ಮೌನ ವೇದನೆ, ಸಹೋದರ-ಸಹೋದರಿಯರ ದುಃಖ, ಸ್ನೇಹಿತರ ಕಣ್ಣೀರು… ಇಡೀ ವಾತಾವರಣವನ್ನೇ ಮೌನಗೊಳಿಸಿತು.
ನಗುವಿನಿಂದ ಕಂಗೊಳಿಸುತ್ತಿದ್ದ ಮನೆಯ ಅಂಗಳ, ಇಂದು ಕಣ್ಣೀರು ಮತ್ತು ನೋವಿನ ಸಾಗರವಾಗಿದೆ. ಪ್ರತಿಯೊಬ್ಬರ ಕಣ್ಣಲ್ಲೂ ಒಂದೇ ಪ್ರಶ್ನೆ – “ಇಂತಹ ಅಂತ್ಯ ಯಾವ ಶತ್ರುಗಳಿಗೂ ಬೇಡ.?”…..

news.ashwasurya.in
ಅಶ್ವಸೂರ್ಯ/ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಕಕ್ಯಪದವು ಎಂಬ ಪುಟ್ಟ ಗ್ರಾಮದ ಬಡ ಕೃಷಿಕ ಕುಟುಂಬದ ಮುದ್ದಿನ ಮಗಳು ಲಾವಣ್ಯ ಗೌಡ ಮನೆಯವರು ಪ್ರೀತಿಯಿಂದ ಕರೆಯುತ್ತಿದ್ದದ್ದು ಪ್ರೀತಿ ಎಂದು. ಅದರೆ ಕನಸು ಹೊತ್ತ ಮನೆಯ ಮುದ್ದಿನ ಮಗಳ ಬದುಕಿನ ಪಯಣ ಕಿಡಿಗೇಡಿಯೊಬ್ಬನ ಕ್ರೂರತನಕ್ಕೆ ನಡು ಹಾದಿಯಲ್ಲೆ ಅಂತ್ಯಗೊಂಡಿದ್ದು.!

ಆಕೆಯ ಪಾರ್ಥಿವ ಶರೀರವನ್ನು ನೋಡಿದ ಕುಟುಂಬದವರ ಆಕ್ರಂದನ ಕಂಡು ಗ್ರಾಮದ ಜನರ ಕಣ್ಣಲ್ಲೂ ನೀರು ಜಾರಿದೆ. ಲಾವಣ್ಯಳ ಪಾರ್ಥಿವ ಶರೀರ ಮನೆಗೆ ತಲುಪುತ್ತಿದ್ದಂತೆಯೇ ತಂದೆ ಬಾಳಪ್ಪ ಗೌಡ ಅವರು “ಮಗಳು… ಪ್ರೀತಿ… ಪ್ರೀತಿ…” ಎಂದು ಗೋಳಿಡುತ್ತಾ ಕಣ್ಣೀರಿಟ್ಟ ದೃಶ್ಯ ಅಲ್ಲಿದ್ದ ಪ್ರತಿಯೊಬ್ಬರ ಮನಕಲಕುವಂತಿತ್ತು.

ತಮ್ಮ ಮುದ್ದಿನ ಮಗಳನ್ನು ಕಳೆದುಕೊಂಡ ನೋವನ್ನು ತಡೆಯಲಾಗದೆ ಕುಟುಂಬದವರು ಹಾಗೂ ಬಂಧುಗಳು ಬಿಕ್ಕಿ ಬಿಕ್ಕಿ ಅತ್ತರು. ತಾಯಿ ರೂಪ ಅವರು ಮಗಳ ಪಾರ್ಥಿವ ಶರೀರವನ್ನು ಕಂಡು ಕೆಲ ಹೊತ್ತು ಪ್ರಜ್ಞೆ ತಪ್ಪುವ ಸ್ಥಿತಿಗೆ ತಲುಪಿದರು.
ಬಳಿಕ ಮನೆಗೆ ಆಗಮಿಸಿದ್ದ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರು ಅವರ ಕೈ ಹಿಡಿದು ಧೈರ್ಯ ಹೇಳುತ್ತಾ ಮನೆಯೊಳಗೆ ಕರೆದೊಯ್ಯುತ್ತಿದ್ದ ವೇಳೆ, “ನನ್ನ ಮಗಳನ್ನು ಕೊಂದ ಪಾಪಿಯನ್ನು ಯಾವಾಗ ಕೊಲ್ಲುತ್ತೀರಿ?” ಎಂದು ಕಣ್ಣೀರಿನ ನಡುವೆ ಪ್ರಶ್ನಿಸಿದ ಕ್ಷಣ ಅಲ್ಲಿದ್ದವರ ಕಣ್ಣನ್ನೂ ತೇವಗೊಳಿಸಿತು.

ಬಾಳಪ್ಪ ಗೌಡ–ರೂಪ ದಂಪತಿಗೆ ಮೂವರು ಹೆಣ್ಣುಮಕ್ಕಳು. ಅವರಲ್ಲಿ ಲಾವಣ್ಯ ಕಿರಿಯವಳು. ಬಡ ಕೃಷಿಕ ಕುಟುಂಬದಲ್ಲಿ ಬೆಳೆದ ಲಾವಣ್ಯ, ಉತ್ತಮ ಶಿಕ್ಷಣ ಪಡೆದು ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕೆಂಬ ಕನಸಿನಿಂದ ಪುತ್ತೂರಿನಲ್ಲಿ ನರ್ಸಿಂಗ್ ಶಿಕ್ಷಣ ಪೂರ್ಣಗೊಳಿಸಿದ್ದರು.

ಕಳೆದ ಮೂರು ತಿಂಗಳಿನಿಂದ ಕಲ್ಲಡ್ಕದ ಖಾಸಗಿ ಆಸ್ಪತ್ರೆಯ ನರ್ಸಿಂಗ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಅವರ ಹಿರಿಯ ಅಕ್ಕ ಅದೇ ಆಸ್ಪತ್ರೆಯ ಮೆಡಿಕಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರೆ, ಎರಡನೇ ಅಕ್ಕ ಉಪ್ಪಿನಂಗಡಿಯ ಬೇಕರಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ.ಬಡ ಕುಟುಂಬದ ಆಧಾರವಾಗಿ, ಪೋಷಕರಿಗೆ ಆಸರೆಯಾಗಬೇಕಿದ್ದ ಲಾವಣ್ಯಳ ಬದುಕು ಈ ರೀತಿಯಾಗಿ ಅರ್ಧದಲ್ಲೇ ಅಂತ್ಯವಾಗಿರುವುದರಿಂದ ಕುಟುಂಬದ ಕನಸುಗಳನ್ನೇ ನುಚ್ಚುನೂರಾಗಿದೆ.

ಹಸನ್ಮುಖಿಯಾಗಿ ಸದಾ ನಗುನಗುತ್ತಾ ಎಲ್ಲರೊಂದಿಗೆ ಬೆರೆಯುತ್ತಿದ್ದ ಮಗಳ ನಗು ಇಂದು ನೆನಪು ಮಾತ್ರವಾಗಿದೆ. ಅ ಪುಟ್ಟ ಮನೆಯಲ್ಲಿ ಮಗಳು ಪ್ರೀತಿಯ ಅಕ್ಕರೆಯ ಮಾತುಗಳು ಇನ್ನೂ ಕೇಳಿಸದಂತಾಗಿದೆ. ಆಕೆಯ ನೆನಪುಗಳು ಮಾತ್ರ ಕುಟುಂಬದ ಕಣ್ಣೀರಿನೊಂದಿಗೆ ಉಳಿದಿವೆ ಹೊರತು ಆಕೆ ಮಾತ್ರ ಬಾರದಲೋಕದೆಡೆ ಹೆಜ್ಜೆ ಹಾಕಿ ಹೋಗಿದ್ದಾಳೆ…

ಲಾವಣ್ಯಳ ಸಾವಿನ ನೋವು ಕೇವಲ ಒಂದು ಕುಟುಂಬಕ್ಕಷ್ಟೇ ಸೀಮಿತವಾಗಿಲ್ಲ. ಇಡೀ ಗ್ರಾಮದ ಜೋತೆಗೆ ರಾಜ್ಯವನ್ನು ಶೋಕಸಾಗರದಲ್ಲಿ ಮುಳುಗಿಸಿದ್ದು, ಇಂತಹ ಅಮಾನವೀಯ ಘಟನೆಗಳು ಮತ್ತೆ ಮರುಕಳಿಸದಂತೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂಬ ಒತ್ತಾಯ ರಾಜ್ಯದ ಮೂಲೆ ಮೂಲೆಗಳಿಂದಲು ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಒಂದು ಅಮಾಯಕ ಹೆಣ್ಣಿನ ಮೇಲೆ ಈ ರೀತಿಯ ಕ್ರೂರತನ ತೋರಿರುವ ಅ ನೀಚನಿಗೆ ಮುಂದೊಂದು ದಿನ ಯಾವುದೇ ಶಿಕ್ಷೆಯಾದರು ಅದು ಕಮ್ಮಿಯೆ…


