Headlines

ಸರ್ಕಾರಿ ನೌಕರಿಗಾಗಿ ಹೆತ್ತ ತಾಯಿಯನ್ನೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ ಮಗಳು.!!

ಅಶ್ವಸೂರ್ಯ/ಜೈಪುರ : ಸರ್ಕಾರಿ ಕೆಲಸ ಮತ್ತು ಆಸ್ತಿಗಾಗಿ ಹೆತ್ತು ಹೊತ್ತು ಸಾಕಿದ 23 ವರ್ಷದ ಮಗಳೆ ತನ್ನ ತಾಯಿಯನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಆಘಾತಕಾರಿ ಪ್ರಕರಣವೊಂದು ವರದಿಯಾಗಿದೆ. ಅಪಘಾತವೆಂದು ಬಿಂಬಿಸಲು ಯತ್ನಿಸಿದ ಈ ಕೃತ್ಯವನ್ನು ಪೊಲೀಸರು ತನಿಖೆ ನಡೆಸಿ, ಮಗಳು ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಆಸ್ತಿ ಮತ್ತು ಸರ್ಕಾರಿ ಕೆಲಸದ ಆಸೆಗೆ ಸ್ಕೆಚ್ ಹಾಕಿದ 23 ವರ್ಷದ ಮಗಳು ಹೆತ್ತಮ್ಮ ಎನ್ನುವುದನ್ನು ಮರೆತು ಅಮ್ಮನನ್ನೇ ಕೊಂದು ಮುಗಿಸಿದ್ದಾಳೆ.! ಈ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಅಮ್ಮನನ್ನು ಕೊಲ್ಲಿಸಿ ಅಪಘಾತವೆಂದು ನಂಬಿಸಲು ಯತ್ನ:
ಜೈಪುರದ ಪ್ರತಾಪ್ ನಗರದ ನಿವಾಸಿ ನೀರಜ್ ಶರ್ಮಾ (45) ಜುಲೈ 3 ರಂದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ವೇಗವಾಗಿ ಬಂದ ಸ್ಕಾರ್ಪಿಯೋ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿತ್ತು. ಮೇಲ್ನೋಟಕ್ಕೆ ಇದು ಸಾಮಾನ್ಯ ಅಪಘಾತದಂತೆ ಕಂಡರೂ,ಮೃತ ಮಹಿಳೆಯ ಸಹೋದರ ರಾಕೇಶ್‌ಗೆ ತಂಗಿಯ ಸಾವಿನ ಬಗ್ಗೆ ಬಲವಾದ ಅನುಮಾನವಿತ್ತು. ಇದು ಉದ್ದೇಶಪೂರ್ವಕವಾಗಿ ನಡೆದ ಕೊಲೆ ಎಂದು ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಾಗ ಅಸಲಿ ಸತ್ಯ ಹೊರಬಂದಿದೆ.

ಸರ್ಕಾರಿ ಕೆಲಸದ ಮೇಲೆ ಕಣ್ಣಿಟ್ಟಿದ್ದ ಮಗಳು:
ಮೃತ ನೀರಜ್ ಶರ್ಮಾ ಅವರು ಜೈಪುರ ನ್ಯಾಯಾಲಯದಲ್ಲಿ ಎಲ್‌ಡಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪತಿ ವಿಜಯ್ ಕುಮಾರ್ ಶರ್ಮಾ ಅವರ ಮರಣದ ನಂತರ, ಅನುಕಂಪದ ಆಧಾರದ (Compassionate Appointment) ಮೇಲೆ ನೀರಜ್‌ಗೆ ಈ ಕೆಲಸ ಸಿಕ್ಕಿತ್ತು. ಆದರೆ, ಪದವೀಧರೆಯಾಗಿದ್ದ ಮಗಳು ಆಯುಷಿಗೆ ಆ ಸರ್ಕಾರಿ ಕೆಲಸದ ಮೇಲೆ ಕಣ್ಣಿತ್ತು. ತಾಯಿ ಬದುಕಿರುವವರೆಗೆ ಆ ಕೆಲಸ ತನಗೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಆಕೆ ತಾಯಿಯನ್ನೇ ಮುಗಿಸಲು ಸಂಚು ರೂಪಿಸಿದ್ದಳು.

ತನ್ನ ಸಂಬಂಧಿಕರ ಜೊತೆಗೆ ಸೇರಿ ಸ್ಕೆಚ್.!:
ಈ ಕೃತ್ಯಕ್ಕೆ ಆಯುಷಿಗೆ ಆಕೆಯ ಸ್ವಂತ ಮಾವ (ತಾಯಿಯ ಇನ್ನೊಬ್ಬ ಸಹೋದರ), ಕಸಿನ್ ಮತ್ತು ಇತರ ನಾಲ್ವರು ಸಂಬಂಧಿಕರು ಸಾಥ್ ನೀಡಿದ್ದರು. ತಾಯಿಯನ್ನು ಅಪಘಾತದ ರೂಪದಲ್ಲಿ ಕೊಂದರೆ ಯಾರೂ ಅನುಮಾನಿಸುವುದಿಲ್ಲ ಮತ್ತು ತಾಯಿಯ ಮರಣದ ನಂತರ ಅನುಕಂಪದ ಆಧಾರದಲ್ಲಿ ತನಗೇ ಆ ಸರ್ಕಾರಿ ಕೆಲಸ ಸಿಗುತ್ತದೆ ಎಂದು ಆಯುಷಿ ನಂಬಿದ್ದಳು. ಈ ಕೊಲೆಗಾಗಿ ಸುಪಾರಿ ಕೂಡ ನೀಡಲಾಗಿತ್ತು.
ಪ್ರಕರಣವನ್ನು ಭೇದಿಸಿರುವ ಪೊಲೀಸರು ಮಗಳು ಆಯುಷಿ ಸೇರಿದಂತೆ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆಸ್ತಿ ಮತ್ತು ಕೆಲಸಕ್ಕಾಗಿ ಹೆತ್ತ ತಾಯಿಯನ್ನೇ ಬಲಿ ಪಡೆದ ಮಗಳ ಈ ಕ್ರೂ ಮನಸ್ಥಿತಿಯನ್ನು ಕಂಡು ಸ್ಥಳೀಯ ಜನತೆ ಬೆಚ್ಚಿಬಿದ್ದಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!