ಕೊಲ್ಲೂರು ಮೂಕಾಂಬಿಕೆ ಸನ್ನಿದಿದಲ್ಲಿ ಭಕ್ತೆಯ ಹಣ ದೋಚಿದ ಭದ್ರಾವತಿಯ ಮೂವರು ಖತರ್ನಾಕ್ ಕಳ್ಳಿಯರು ಅಂದರ್.!
news.ashwasurya.in
ಅಶ್ವಸೂರ್ಯ/ಕೊಲ್ಲೂರು: ಇಲ್ಲಿನ ಪ್ರಸಿದ್ಧ ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದ ಭಕ್ತೆಯೊಬ್ಬರ ಹಣ ಕದ್ದ ಕಳ್ಳತನ ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಕೊಲ್ಲೂರು ಪೊಲೀಸರು ಭೇದಿಸಿ ಮೂವರು ಖತರ್ನಾಕ್ ಮಹಿಳಾ ಆರೋಪಿಗಳನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ನೇತ್ರಾವತಿ, ಶಾರದಾ ಹಾಗೂ ದುರ್ಗಮ್ಮ ಬಂಧಿತ ಆರೋಪಿಗಳು.
ದೇಗುಲಕ್ಕೆ ದೇವರ ದರ್ಶನಕ್ಕೆಂದು ಬಂದಿದ್ದ ನಿಮಿಶಾ ಎಂಬ ಭಕ್ತೆಯ ವ್ಯಾನಿಟಿ ಬ್ಯಾಗ್ ನಲ್ಲಿದ್ದ 80 ಸಾವಿರ ರೂ. ಹಣ ಕಳ್ಳತನವಾಗಿತ್ತು. ಘಟನೆ ಬಳಿಕ ದೇವಸ್ಥಾನದ ಆವರಣದಲ್ಲಿ ಎಷ್ಟೇ ಹುಡುಕಾಟ ನಡೆಸಿದರೂ ಹಣ ಪತ್ತೆಯಾಗಿರಲಿಲ್ಲ.

ನಂತರ ಹಣ ಕಳೆದುಕೊಂಡ ಸಂತ್ರಸ್ತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ದೇವಸ್ಥಾನದ ಸಿಸಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಘಟನೆ ನಡೆದ ಸ್ಥಳದಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದ ಛಾಯಾಚಿತ್ರಗಳ ಆಧಾರದ ಮೇಲೆ ತನಿಖೆ ನಡೆಸಿದರು.
ತನಿಖೆಯಲ್ಲಿ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ಮಹಿಳೆಯರ ಸುಳಿವು ಪತ್ತೆಯಾಗಿತ್ತು. ಕಳ್ಳತನ ನಡೆದ 24 ಗಂಟೆಯೊಳಗೆ ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ದುರ್ಗಮ್ಮ ವಿರುದ್ಧ ಈ ಹಿಂದೆ ಎರಡು ಕಳ್ಳತನ ಪ್ರಕರಣಗಳು ದಾಖಲಾಗಿದೆ. ಶಾರದಾ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದು ಇವರಿಂದ ಇನ್ನಷ್ಟು ಕಳ್ಳತನದ ಪ್ರಕರಣಗಳು ಬಯಲಾಗುವ ಸಾಧ್ಯತೆ ಇದೆ.


