ಶಿವಮೊಗ್ಗ : ವಿಧಿಯಾಟಕ್ಕೆ 1ನೇ ತರಗತಿ ಬಾಲಕನ ಸಾವು.!!
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕರೂರು ಹೋಬಳಿ ಹಾಳಸಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಾರು ಏಣಿಸಿರದ ದುರ್ಘಟನೆಯೊಂದು ಸಂಭವಿಸಿದೆ. ಶಾಲೆ ಆವರಣದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದ ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲು ಶಿಕ್ಷಕರು ಮುಂದಾಗಿದ್ದರು. ಆದರೆ ದುರಾದೃಷ್ಟವಶಾತ್ ಬಾಲಕ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಇತ್ತೀಚೆಗೆ ಸಣ್ಣ ವಯಸ್ಸಿನವರೂ ಹೃದಯಾಘಾತದಿಂದ ಸಾಯುವ ಪ್ರಕರಣಗಳು ದಿನದಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದಕ್ಕೆ ಸಾಕ್ಷಿಯಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕರೂರು ಹೋಬಳಿ ಹಾಳಸಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಶನಿವಾರ ಬಾಲಕ ಹೃದಯಾಘಾತದಿಂದ ಮೃತಪಟ್ಟಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೊಡನವಳ್ಳಿ ಗ್ರಾಮದ ಗೌತಮ್ ಜೈನ್ ಹಾಗೂ ಶಿಲ್ಪಾ ದಂಪತಿ ಪುತ್ರ ತ್ರಿಲೋಕ್ ಜೈನ್ (6) ಮೃತ ಬಾಲಕ ಶನಿವಾರ ಮಧ್ಯಾಹ್ನ ವಿದ್ಯಾರ್ಥಿ ತ್ರಿಲೋಕ್ ಜೈನ್, ಶಾಲೆ ಮುಗಿಯುವ ಸಮಯದಲ್ಲಿ ಆವರಣದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದನು. ತಕ್ಷಣವೇ ಶಾಲೆ ಶಿಕ್ಷಕರು ಪುಟ್ಟ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದರು. ಆದರೆ ದುರಾದೃಷ್ಟವಶಾತ್ ತ್ರಿಲೋಕ್ ಜೈನ್ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಪುತ್ರನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಒಂದನೇ ತರಗತಿಯ ಬಾಲಕನ ಸಾವಿಗೆ ಗ್ರಾಮಸ್ಥರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮುಖ್ಯ ಶಿಕ್ಷಕರು ಕಂಬನಿ ಮಿಡಿದಿದ್ದಾರೆ. ತ್ರಿಲೋಕ್ಗೆ ಮೊದಲಿನಿಂದಲೂ ಯಾವುದೇ ಹೃದಯ ಸಂಬಂಧಿತ ಸಮಸ್ಯೆಗಳಿರಲಿಲ್ಲ. ಆರೋಗ್ಯವಾಗಿದ್ದ ಬಾಲಕ ಹೃದಯಾಘಾತದಿಂದ ಮೃತಪಟ್ಟಿರುವುದು ಜನರಲ್ಲಿ ಆತಂಕ ಮೂಡಿಸಿದೆ.

