Headlines

ಸಾಗರ : ಮರದ ಕೊಂಬೆ ಕತ್ತರಿಸುವ ವೇಳೆ ವಿದ್ಯುತ್ ಶಾಕ್‌ ಹೊಡೆದು ಕ್ರಿಕೆಟ್ ಆಟಗಾರನ ದಾರುಣ ಸಾವು.!

ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಳದಿ ಸಮೀಪದ ಹಾರೆಗೊಪ್ಪ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಯುವ ಕ್ರಿಕೆಟಿಗನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಪ್ರವೀಣ್ ಹೆಗಡೆ (36) ಎಂದು ಗುರುತಿಸಲಾಗಿದೆ. ಮರದ ಕೊಂಬೆಗಳನ್ನು ಕತ್ತರಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ಮರ ತಗುಲಿ ವಿದ್ಯುತ್ ಶಾಕ್ ನಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ತಾರಗೋಡು ಗ್ರಾಮದವರಾದ ಪ್ರವೀಣ್ ಹೆಗಡೆ, ಕೆಲವು ವರ್ಷಗಳ ಹಿಂದೆ ಹಾರೆಗೊಪ್ಪದಲ್ಲಿ ಕೃಷಿ ಭೂಮಿ ಖರೀದಿಸಿ ನೆಲೆಸಿದ್ದರಂತೆ.
ಪ್ರವೀಣ್ ಅವರು ಕ್ರಿಕೆಟ್ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದು, ಕೆಎಸ್‌ಸಿಎ ಶಿವಮೊಗ್ಗ ವಲಯದ ಲೀಗ್ ಪಂದ್ಯಗಳಲ್ಲಿ ನಿಸರಾಣಿ ಕ್ಲಬ್ ಪರವಾಗಿ ಆಡಿದ್ದರು. ಹವ್ಯಕ ಕ್ರಿಕೆಟ್ ಲೀಗ್ ಸೇರಿದಂತೆ ಹಲವು ಟೂರ್ನಿಗಳಲ್ಲಿ ಭಾಗವಹಿಸಿ ಕ್ರೀಡಾಭಿಮಾನಿಗಳ ಮೆಚ್ಚುಗೆ ಗಳಿಸಿದ್ದರು.
ಈ ಘಟನೆ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಕ್ರೀಡಾಪಟುವಿನ ಅಕಾಲಿಕ ನಿಧನಕ್ಕೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಕ್ರೀಡಾ ವಲಯದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!