
ಬೆಂಗಳೂರು : ಮಾಜಿ ಎಂಎಲ್ಸಿ ದಯಾನಂದ್ ರೆಡ್ಡಿ ಕಿಡ್ನ್ಯಾಪ್ ಪ್ರಕರಣ, ನಾಲ್ವರು ಆರೋಪಿಗಳು ಹೆಡೆಮುರಿ ಕಟ್ಟಿದ ಪೋಲಿಸರು.
news.ashwasurya.in
ಅಶ್ವಸೂರ್ಯ/ಬೆಂಗಳೂರು : ಇತ್ತೀಚೆಗೆ ವಿಧಾನ ಪರಿಷತ್ ಮಾಜಿ ಸದಸ್ಯ ದಯಾನಂದ ರೆಡ್ಡಿ ಅವರನ್ನು ಅಪಹರಿಸಿ ಕೊಲೆ ಬೆದರಿಕೆ ಹಾಕಿ 3 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಘಟನೆ ನಡೆದಿತ್ತು. ಇದೀಗ ಈ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ತಡರಾತ್ರಿ 12:15ರ ಸುಮಾರಿಗೆ ಗೋಲ್ಡ್ ಕಾಯಿನ್ ಕ್ಲಬ್ನಿಂದ ಹೊರಟಿದ್ದ ಮಾಜಿ ಎಂಎಲ್ಸಿ ದಯಾನಂದರೆಡ್ಡಿ ಅವರ ಕಾರನ್ನು ಬೈಕ್ನಲ್ಲಿ ಬಂದ ಇಬ್ಬರು ಅಡ್ಡಗಟ್ಟಿ ನಿಮಗೆ ಗಿಫ್ಟ್ ಬಂದಿದೆ ಎಂದು ಹೇಳಿ ಕಾಟನ್ ಬಾಕ್ಸ್ ತೋರಿಸಿ. ಕಾರಿನ ಡೋರ್ ಲಾಕ್ ತೆರೆದ ತಕ್ಷಣ ಓರ್ವ ವ್ಯಕ್ತಿ ಕಾರಿನೊಳಗೆ ನುಗ್ಗಿ ಗನ್ ತೋರಿಸಿ ತಾನು ಹೇಳಿದ ಕಡೆಗೆ ಕಾರು ಚಲಾಯಿಸುವಂತೆ ಸೂಚಿಸಿ ಕೊಲೆ ಬೆದರಿಕೆ ಹಾಕಿದ್ದರು.

ಬಳಿಕ ಹಣ ನಾನೇ ಕೊಡುತ್ತೇನೆ, ಕೊಲ್ಲಬೇಡಿ ಎಂದು ದಯಾನಂದ ರೆಡ್ಡಿ ಮನವಿ ಮಾಡಿಕೊಂಡಿದ್ದು, ಮೊದಲು 3 ಕೋಟಿ ರೂ. ಬೇಡಿಕೆ ಇಟ್ಟಿದ್ದ ಅಪಹರಣಕಾರರು, ಬಳಿಕ 2 ಕೋಟಿ ರೂ.ಗೆ ಒಪ್ಪಿಕೊಂಡಿದ್ದರು. ಸದ್ಯ ಹಣ ಇಲ್ಲ, ಬೆಳಗ್ಗೆ ಬ್ಯಾಂಕ್ ತೆರೆದ ಬಳಿಕ ಹಣ ನೀಡುವುದಾಗಿ ದಯಾನಂದರೆಡ್ಡಿ ಮನವಿ ಮಾಡಿದ್ದರು. ಹಣ ಡ್ರಾ ಮಾಡಿದ ಬಳಿಕ ಕರೆ ಮಾಡುವಂತೆ ಸೂಚಿಸಿ ಆರೋಪಿಗಳು ಅವರನ್ನು ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ದಯಾನಂದರೆಡ್ಡಿ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಸೂರ್ಯನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಕಿಡ್ನಾಪ್ ಮಾಡಿ ಕರೆದೊಯ್ಯುತ್ತಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದ್ದು, ಸದ್ಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಕಿಡ್ನಾಪ್ಗೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಲಾಗುತ್ತಿದೆ.


