ಕುಂದಾಪುರ: PMGDY 40 ಲಕ್ಷದ ಲೋನ್ ಆಮಿಷಕ್ಕೆ ಬಿದ್ದು 5.69 ಲಕ್ಷ ಕಳೆದುಕೊಂಡ ಮಹಿಳೆ.!
news.ashwasurya.in
ಅಶ್ವಸೂರ್ಯ/ಕುಂದಾಪುರ : ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ (PMGDY) ಯೋಜನೆಯಡಿ ಕಡಿಮೆ ಬಡ್ಡಿದರದಲ್ಲಿ ಲೋನ್ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ಹಂತ ಹಂತವಾಗಿ 5.69 ಲಕ್ಷ ರೂಪಾಯಿ ಹಣ ಪಡೆದು ಆನ್ಲೈನ್ ವಂಚಕರು ವಂಚಿಸಿರುವ ಘಟನೆ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಕುಂದಾಪುರ ತಾಲೂಕಿನ ಕಸಬ ಗ್ರಾಮದ ಕೆಳ ಖಾರ್ವಿಕೇರಿ, ಡೋಗಿ ಪೇರಿ ರಸ್ತೆ ನಿವಾಸಿ ಪ್ರಣೀತ (38) ವಂಚನೆಗೊಳಗಾದ ಮಹಿಳೆ. 2026 ರ ಮಾರ್ಚ್ 10 ರಂದು ಪ್ರಣೀತ ಅವರು ತಮ್ಮ ಮೊಬೈಲ್ನಲ್ಲಿ ಫೇಸ್ಬುಕ್ ವೀಕ್ಷಿಸುತ್ತಿದ್ದಾಗ, ಅದರಲ್ಲಿ ‘PMGDY ಅಡಿಯಲ್ಲಿ ಸುಲಭವಾಗಿ ಲೋನ್ ಕೊಡಿಸಲಾಗುವುದು’ ಎಂಬ ಆಕರ್ಷಕ ಜಾಹೀರಾತು ಕಂಡುಬಂದಿದೆ. ಸಾಲದ ಹಣ ಬೇಕಿದ್ದಲ್ಲಿ 7082732342 ಮೊಬೈಲ್ ಸಂಖ್ಯೆಗೆ ಕರೆ ಮಾಡುವಂತೆ ಅದರಲ್ಲಿ ನಮೂದಿಸಲಾಗಿತ್ತು. ಅದನ್ನು ನಂಬಿದ ಪ್ರಣೀತ ಅವರು ಸದ್ರಿ ನಂಬರ್ಗೆ ಕರೆ ಮಾಡಿದಾಗ, ಆ ಕಡೆಯಿಂದ ಮಾತನಾಡಿದ ವ್ಯಕ್ತಿ ತನ್ನ ಹೆಸರು ‘ಶ್ರೀನಿವಾಸ್ ರಾವ್’ ಎಂದು ಪರಿಚಯಿಸಿಕೊಂಡಿದ್ದಾನೆ.ಪಿರ್ಯಾದಿದಾರರಿಗೆ 40 ಲಕ್ಷ ರೂಪಾಯಿ ಮೊತ್ತದ ಬೃಹತ್ ಲೋನ್ ಕೊಡಿಸುವುದಾಗಿ ನಂಬಿಸಿದ ಶ್ರೀನಿವಾಸ್ ರಾವ್, ಸಾಲ ಮಂಜೂರಾತಿಗೆ ಮುನ್ನ ಪ್ರೊಸೆಸಿಂಗ್ ಫೀಸ್, ಇನ್ಶೂರೆನ್ಸ್ ಹಾಗೂ ಇತರೆ ಶುಲ್ಕಗಳ ಹೆಸರಿನಲ್ಲಿ ಮೊದಲು ಹಣ ಪಾವತಿಸಬೇಕು ಎಂದು ನಂಬಿಸಿದ್ದಾನೆ. ಆತನ ಮಾತುಗಳನ್ನು ಸತ್ಯವೆಂದು ನಂಬಿದ ಪ್ರಣೀತ ಅವರು 2026 ರ ಮಾರ್ಚ್ 11 ರಿಂದ ಏಪ್ರಿಲ್ 13 ರವರೆಗಿನ ಅವಧಿಯಲ್ಲಿ ವಿವಿಧ ಕಂತುಗಳಲ್ಲಿ ಒಟ್ಟು 5,69,069/- ರೂಪಾಯಿ (ಐದು ಲಕ್ಷದ ಅರವತ್ತೊಂಬತ್ತು ಸಾವಿರದ ಅರವತ್ತೊಂಬತ್ತು ರೂ.) ಹಣವನ್ನು ಫೋನ್ ಪೇ (PhonePe) ಮೂಲಕ ಆಪಾದಿತನು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ.
ಇಷ್ಟೆಲ್ಲಾ ಹಣ ಪಡೆದ ಮೇಲೂ ಆರೋಪಿಯು ಯಾವುದೇ ಲೋನ್ ಹಣವನ್ನು ನೀಡದೇ ಸತಾಯಿಸಿದ್ದಾನೆ. ಇದರಿಂದ ಬೇಸತ್ತ ಮಹಿಳೆ ತಾವು ಕಟ್ಟಿದ ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ, ಲೋನ್ ರಿಲೀಸ್ ಆಗಬೇಕಾದರೆ ಇನ್ನು ಹೆಚ್ಚಿನ ಹಣವನ್ನು ಖಾತೆಗೆ ಹಾಕಬೇಕು ಎಂದು ಆರೋಪಿ ಮತ್ತೆ ಬೇಡಿಕೆ ಇಟ್ಟಿದ್ದಾನೆ. ತಾವು ಆನ್ಲೈನ್ ವಂಚನೆಗೆ ಒಳಗಾಗಿರುವುದನ್ನು ಅರಿತ ಪ್ರಣೀತ ಅವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

