
ಮಂಡ್ಯ : ಕಳ್ಳತನ ಬಿಟ್ಟರು ಮಾಡಿದ ಪಾಪ ಬಿಡಲಿಲ್ಲ.! ಸಹಚರರಿಂದ ಹಳೆಯ ಪ್ರಕರಣ ಬಯಲು.! ಜೈಲು ಸೇರಿದ ಯುವಕ.
news.ashwasurya.in
ಅಶ್ವಸೂರ್ಯ/ಮಂಡ್ಯ: ಕಳೆದ ಒಂದು ವರ್ಷದ ಹಿಂದೆ ಪತ್ನಿಯ ಮುಂದೆ ಶ್ರೀಮಂತಿಕೆಯ ಜೀವನ ನಡೆಸಲು ಮುಂದಾಗಿದ್ದ ಪತಿ ಇದೀಗ ತನ್ನ ಮೂವರು ಸಹರಚರರೊಂದಿಗೆ ಜೈಲು ಸೇರಿರುವ ವಿಚಿತ್ರ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಕಿರುಗಾವಲು ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಖದೀಮರ ಜಾಲವನ್ನು ಬಯಲುಮಾಡಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗದ್ದಾರೆ. ಗುರುಪ್ರಸಾದ್(36), ರೋಹಿತ್(20), ನಂಜೇಗೌಡ(19) ಮಾದೇಶ(20) ನಾಲ್ವರು ಬಂಧಿತ ಆರೋಪಿಗಳಿಂದ ಸುಮಾರು 70 ಲಕ್ಷ ರೂ. ಮೌಲ್ಯದ 475 ಗ್ರಾಂ ಚಿನ್ನಾಭಾರಣ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ತನ್ನ ಹೆಂಡತಿಯ ಜೋತೆಗೆ ಶ್ರೀಮಂತಿಕೆಯಲ್ಲಿ ಬದುಕಲು ಗುರುಪ್ರಸಾದ್ ಎಂಬಾತ ಕಳ್ಳತನದ ದಾರಿ ಹಿಡಿದಿದ್ದ. ಆದರೆ, ಕಳೆದ ಒಂದು ವರ್ಷದ ಹಿಂದೆ ಆತನ ಪತ್ನಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು. ಪತ್ನಿಯ ಸಾವಿನಿಂದ ಆಘಾತಕ್ಕೊಳಗಾಗಿದ್ದ ಈತ ಕಳ್ಳತನವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದನಂತೆ. ಆದರೆ ಆತನ ಸಹಚರರು ಮಾತ್ರ ತಮ್ಮ ಹಳೇಯ ಚಾಳಿಯನ್ನು ಮುಂದುವರೆಸಿದ್ದರು.

ಕಳೆದ ಮಾರ್ಚ್ 30ರಂದು ಮಹಿಳೆಯೊಬ್ಬರ ಚಿನ್ನದ ಸರ ಕಳವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ವಿಶೇಷ ತಂಡವನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಮೊದಲಿಗೆ ರೋಹಿತ್ ಮತ್ತು ನಂಜೇಗೌಡನನ್ನು ವಶಕ್ಕೆ ಪಡೆದರು. ಈ ಇಬ್ಬರು ಆರೋಪಿಗಳು ಪೊಲೀಸರ ವಿಚಾರಣೆ ವೇಳೆ, ಒಂದು ವರ್ಷದ ಹಿಂದೆ ಗುರುಪ್ರಸಾದ್ ನೇತೃತ್ವದಲ್ಲಿ ನಡೆಸಿದ್ದ ಸಾಲು ಸಾಲು ಕಳ್ಳತನಗಳ ಬಗ್ಗೆ ಸತ್ಯ ಬಾಯಿಬಿಟ್ಟಿದ್ದಾರೆ.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇವರ ವಿರುದ್ಧ ಸುಮಾರು 16ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಸದ್ಯ ನಾಲ್ಕು ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.


