
ಕಲಬುರಗಿ : ನೀಟ್ ರದ್ದಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.?
news.ashwasurya.in
ನೀಟ್ ಪರೀಕ್ಷೆ ರದ್ದಾದ ಕಾರಣಕ್ಕೆ ಕಲಬುರಗಿಯ ವಿದ್ಯಾರ್ಥಿನಿ ಭಾಗ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿತ್ತು. ಆದರೆ, ಪೊಲೀಸ್ ತನಿಖೆಯಲ್ಲಿ ವಿಧ್ಯಾರ್ಥಿನಿ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದು, ಈ ವಿಷಯವನ್ನು ಪಾಲಕರಿಂದ ಮುಚ್ಚಿಟ್ಟಿದ್ದಳು ಎಂಬ ಸತ್ಯಾಂಶ ಬೆಳಕಿಗೆ ಬಂದಿದೆ….

ಅಶ್ವಸೂರ್ಯ/ಕಲಬುರಗಿ: ನೀಟ್ ಪರೀಕ್ಷೆ ರದ್ದಾದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದ್ದ ಕಲಬುರಗಿಯ ವಿದ್ಯಾರ್ಥಿನಿಯ ಸಾವಿನ ಪ್ರಕರಣಕ್ಕೆ ಪೊಲೀಸ್ ತನಿಖೆಯಲ್ಲಿ ಸತ್ಯಾಂಶ ಹೊರಬಿದ್ದು ಹೊಸ ತಿರುವು ದೊರೆತಿದ್ದು, ಆಕೆ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದ ಸಂಗತಿ ಬೆಳಕಿಗೆ ಬಂದಿದೆ. ಅಲ್ಲದೇ, ತನ್ನ ಪಾಲಕರಿಗೆ ಪಾಸ್ ಆಗಿದ್ದೆನೆಂದು ಸುಳ್ಳು ಹೇಳಿರುವ ವಿಚಾರ ಗೊತ್ತಾಗಿದೆ.
ಭಾಗ್ಯಶ್ರೀ (18) ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈಕೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಪರೀಕ್ಷೆ ರದ್ದಾದ ಕಾರಣ ಸಾವಿಗೆ ಶರಣಾಗಿದ್ದಾಳೆ ಎಂದು ಮೃತಳ ಮನೆಯವರೇ ಮಾಹಿತಿ ನೀಡಿದ್ದರು.
ನೀಟ್ ಕೋಚಿಂಗ್ ಕೊಡಿಸಿದ್ದರು ಪೋಷಕರು
ದ್ವಿತೀಯ ಪಿಯುಸಿ ಫಲಿತಾಂಶ ಬಂದಾಗ ಭಾಗ್ಯಶ್ರೀ ತಾನು ಶೇ.92ರಷ್ಟು ಅಂಕ ಪಡೆದು ಪಾಸ್ ಆಗಿರುವುದಾಗಿ ಹೆತ್ತವರ ಬಳಿ ಹೇಳಿಕೊಂಡಿದ್ದಳು. ಮಗಳ ಮಾತನ್ನು ನಂಬಿದ್ದ ಪಾಲಕರು, ಆಕೆ ವೈದ್ಯಕೀಯ ಶಿಕ್ಷಣದ ಕನಸು ಹೊತ್ತು ನೀಟ್ ಪರೀಕ್ಷೆ ಬರೆಯಲು ಸಂಪೂರ್ಣ ಬೆಂಬಲ ನೀಡಿ ಕೋಚಿಂಗ್ ಕೊಡಿಸಿದ್ದರು. ಇತ್ತೀಚೆಗಷ್ಟೇ ಭಾಗ್ಯಶ್ರೀ ನೀಟ್ ಪರೀಕ್ಷೆ ಬರೆದಿದ್ದಳು. ಸುಳ್ಳು ಹೇಳಿದ ವಿಷಯ ಮನೆಯವರಿಗೆ ಗೊತ್ತಾದರೆ ಎಲ್ಲಿ ಬೈಯುತ್ತಾರೋ ಅಥವಾ ಪಾಲಕರ ನಿರೀಕ್ಷೆ ಸುಳ್ಳಾಯಿತಲ್ಲ ಎಂಬ ಭಯದಿಂದಲೇ ಆತ್ಮಹತ್ಯೆಯ ಮಾಡಿಕೊಂಡಿರಬಹುದು ಎಂಬ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಆದರೀಗ ಯಾರಿಗೂ ಊಹಿಸಲಾಗದ ರೀತಿ ಸತ್ಯ ಬಯಲಾಗಿದ್ದು, ಪೊಲೀಸರ ತನಿಖೆಯಲ್ಲಿ ಭಾಗ್ಯಶ್ರೀ ಪಿಯುಸಿ ಫಲಿತಾಂಶ ಪರಿಶೀಲಿಸಿದಾಗ ಆಕೆ ಪಾಲಕರಿಗೂ ಸುಳ್ಳು ಹೇಳಿರುವ ವಿಷಯ ತಿಳಿದು ಬಂದಿದೆ.
ಇದೀಗ ಭಾಗ್ಯಶ್ರೀ ಆತ್ಮಹತ್ಯೆ ಕೇಸ್ ತನಿಖೆ ನಡೆಸಿದ ಪೊಲೀಸರು ಆಕೆಯ ಫಲಿತಾಂಶ ಪರಿಶೀಲಿಸಿದ್ದು, ಮೊದಲ ಪರೀಕ್ಷೆಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ಪರೀಕ್ಷೆಯಲ್ಲಿ ಫೇಲ್ ಆಗಿರುವ ಸತ್ಯ ಸಂಗತಿ ಬಯಲಾಗಿದೆ. ಬಳಿಕ ಅವಳು ಎರಡೂ ವಿಷಯಗಳಿಗೆ ಮರು ಪರೀಕ್ಷೆ ಬರೆದಿದ್ದು, ಮೇ 21 ರಂದು ಪ್ರಕಟವಾದ ಫಲಿತಾಂಶದಲ್ಲಿ ಭೌತಶಾಸ್ತ್ರಕ್ಕೆ 51 ಅಂಕ ಪಡೆದು ತೇರ್ಗಡೆಯಾಗಿ ಗಣಿತದಲ್ಲಿ 24 ಅಂಕ ಪಡೆದು ಅನುತ್ತೀರ್ಣಗೊಂಡಿದ್ದಳು.ಭಾಗ್ಯಶ್ರೀ ಹೇಳಿದ ಒಂದು ಸುಳ್ಳು ಆಕೆಯನ್ನು ಸಾವಿನಂಚಿಗೆ ತಂದು ನಿಲ್ಲಿಸಿದ್ದು ಮಾತ್ರ ದುರಂತವೆ ಹೌದು.!


