ಸಾವಿನ ಪುರಾವೆ ಕೇಳಿದ ಬ್ಯಾಂಕ್ ಅಧಿಕಾರಿ.! ತಂಗಿಯ ಅಸ್ಥಿಪಂಜರವನ್ನೇ ಹೊತ್ತು ಬ್ಯಾಂಕಿಗೆ ಬಂದ ಸಹೋದರ.!
news.ashwasurya.in
ಅಶ್ವಸೂರ್ಯ/ಒಡಿಶಾ: ಒಡಿಶಾದ ಕಿಯೋಂಜಾರದಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ ಹಣ ಹಿಂಪಡೆಯಲು ಮೃತ ಸಹೋದರಿಯನ್ನೇ ಕರೆತರುವಂತೆ ಸಿಬ್ಬಂದಿ ಒತ್ತಾಯಿಸಿದರೆಂಬ ಕಾರಣಕ್ಕೆ ಹತಾಶೆಗೊಂಡ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬರು ಸಮಾಧಿಯಿಂದ ತಂಗಿಯ ಅಸ್ಥಿಪಂಜರವನ್ನು ಹೊರತೆಗೆದು ಬ್ಯಾಂಕಿಗೆ ಹೊತ್ತು ತಂದ ಘಟನೆ ಒಡಿಶಾದ ಮಾಲಿಪೋಸಿ ಶಾಖೆಯಲ್ಲಿ ನಡೆದಿದೆ.
50 ವರ್ಷದ ಜೀತು ಮುಂಡಾ ಎಂಬವರು ಎರಡು ತಿಂಗಳ ಹಿಂದೆ ನಿಧನರಾಗಿದ್ದ ತಮ್ಮ ಸಹೋದರಿ ಕಲ್ರಾ ಮುಂಡಾ ಅವರ ಖಾತೆಯಲ್ಲಿದ್ದ ₹20,000 ಪಡೆಯಲು ಹಲವು ಬಾರಿ ಬ್ಯಾಂಕಿಗೆ ಅಲೆದಾಡಿದ್ದರು. “ಅವಳು ಸತ್ತಿದ್ದಾಳೆ ಎಂದು ಹೇಳಿದರೂ ಬ್ಯಾಂಕ್ನವರು ಕೇಳಲಿಲ್ಲ. ಅವಳನ್ನು ಇಲ್ಲಿಗೆ ಕರೆತನ್ನಿ ಇಲ್ಲವೇ ಪುರಾವೆ ಕೊಡಿ ಎಂದು ಪಟ್ಟು ಹಿಡಿದರು ಕುಳಿತಿದ್ದರು.

ದಾಖಲೆಗಳಿಲ್ಲದ ನಾನು ಕೊನೆಗೆ ಹತಾಶೆಯಿಂದ ಸಮಾಧಿ ಅಗೆದು ಅವಳ ಅಸ್ಥಿಪಂಜರವನ್ನೇ ಹೊತ್ತು ತಂದೆ” ಎಂದು ಜೀತು ಮುಂಡಾ ಸುದ್ದಿಗಾರರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಘಟನೆ ವೈರಲ್ ಆಗುತ್ತಿದ್ದಂತೆ ತೀವ್ರ ಟೀಕೆಗೆ ಗುರಿಯಾದ ಇಂಡಿಯನ್ ಓವರ್ಸೀಸ್ ಬ್ಯಾಂಕ್ (ಒಡಿಶಾ ಗ್ರಾಮೀಣ ಬ್ಯಾಂಕ್ ಪ್ರಾಯೋಜಕತ್ವ) ಸ್ಪಷ್ಟೀಕರಣ ನೀಡಿದೆ. “ನಾವು ಶವ ಅಥವಾ ಅಸ್ಥಿಪಂಜರ ತರಲು ಹೇಳಿಲ್ಲ. ಮರಣ ಪ್ರಮಾಣಪತ್ರದಂತಹ ಕಾನೂನುಬದ್ಧ ದಾಖಲೆಗಳನ್ನು ಕೇಳಿದ್ದೆವು. ದಾಖಲೆಗಳಿಲ್ಲದೆ ಹಣ ನೀಡಲು ನಿಯಮಗಳಲ್ಲಿ ಅವಕಾಶವಿಲ್ಲ. ಸಂವಹನದ ಕೊರತೆ ಮತ್ತು ನಿಯಮಗಳ ಅರಿವಿಲ್ಲದ ಕಾರಣ ಈ ದುರದೃಷ್ಟಕರ ಘಟನೆ ನಡೆದಿದೆ” ಎಂದು ಬ್ಯಾಂಕ್ ತಿಳಿಸಿದೆ.
ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ಕಿರಣ್ ಪ್ರಸಾದ್ ಸಾಹು ಮಾತನಾಡಿ, “ಜೀತು ಮುಂಡಾ ಅನಕ್ಷರಸ್ಥ ಬುಡಕಟ್ಟು ವ್ಯಕ್ತಿಯಾಗಿದ್ದು, ಅವರಿಗೆ ನಾಮಿನಿ ಅಥವಾ ಕಾನೂನು ಪ್ರಕ್ರಿಯೆಗಳ ಬಗ್ಗೆ ತಿಳುವಳಿಕೆ ಇರಲಿಲ್ಲ. ಬ್ಯಾಂಕ್ ಸಿಬ್ಬಂದಿ ಅವರಿಗೆ ಸರಿಯಾಗಿ ಮನವರಿಕೆ ಮಾಡುವಲ್ಲಿ ವಿಫಲರಾಗಿದ್ದಾರೆ” ಎಂದಿದ್ದಾರೆ. ಸದ್ಯ ಕಲ್ರಾ ಮುಂಡಾ ಅವರ ಖಾತೆಯಲ್ಲಿದ್ದ ನಾಮಿನಿ ಕೂಡ ಮೃತಪಟ್ಟಿರುವುದು ದೃಢಪಟ್ಟಿದ್ದು, ಜೀತು ಮುಂಡಾ ಅವರೇ ಏಕೈಕ ಹಕ್ಕುದಾರರಾಗಿದ್ದಾರೆ. ಸ್ಥಳೀಯ ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು (BDO) ಈಗ ಮಧ್ಯಪ್ರವೇಶಿಸಿದ್ದು, ಆದ್ಯತೆಯ ಮೇಲೆ ಮರಣ ಪ್ರಮಾಣಪತ್ರ ಒದಗಿಸಿ ಜೀತು ಅವರಿಗೆ ಹಣ ಕೊಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.


