Headlines

ಬೆಂಗಳೂರು : ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ಕೈಬಿಟ್ಟು ಹೋಗಿದಿಯಾ.? ಆತಂಕ ಬೇಡ, ಮತ್ತೆ ಸೇರಿಸಲು ಅವಕಾಶವಿದೆ.

ಅಶ್ವಸೂರ್ಯ/ಬೆಂಗಳೂರು : ರಾಜ್ಯದಲ್ಲಿ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ವೇಗವಾಗಿ ನಡೆಯುತ್ತಿದ್ದರು ಕೇಲವರು ಹೆಸರು ಸೇರಿಸಲು ಅಲೆದಾಡುತ್ತಿದ್ದಾರೆ. ಸುಮಾರು 84.31 ಲಕ್ಷ ಮತದಾರರ ಹೆಸರನ್ನು ಕರಡು ಪಟ್ಟಿಯಿಂದ ಕೈಬಿಡಲು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಹೆಸರು ಪಟ್ಟಿಯಿಂದ ಕೈಬಿಟ್ಟಿದೆಯೇ ಎಂಬ ಅನುಮಾನ ಇರುವ ಮತದಾರರು ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಸೂಚಿಸಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನುಪ್‌ಕುಮಾರ್ ಅವರ ಮಾಹಿತಿ ಪ್ರಕಾರ, ಮನೆ ಬದಲಾವಣೆ, ಮೃತಪಟ್ಟಿರುವುದು, ಒಂದಕ್ಕಿಂತ ಹೆಚ್ಚು ಕಡೆ ಮತದಾರರಾಗಿ ನೋಂದಣಿ, ಹಾಗೂ ಪರಿಶೀಲನೆ ವೇಳೆ ಪತ್ತೆಯಾಗದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಈ ಮತದಾರರನ್ನು ಪ್ರತ್ಯೇಕ ಪಟ್ಟಿಗೆ ಸೇರಿಸಲಾಗಿದೆ.
ಲಭ್ಯವಿರುವ ಮಾಹಿತಿಯಂತೆ, 14.99 ಲಕ್ಷ ಮಂದಿ ಮೃತಪಟ್ಟವರಾಗಿದ್ದು, 51.74 ಲಕ್ಷ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. 5.62 ಲಕ್ಷ ಮಂದಿ ಒಂದಕ್ಕಿಂತ ಹೆಚ್ಚು ಕಡೆ ಮತದಾರರಾಗಿ ನೋಂದಾಯಿಸಿಕೊಂಡಿರುವುದು ಪತ್ತೆಯಾಗಿದ್ದು, 11.61 ಲಕ್ಷ ಮಂದಿ ಪರಿಶೀಲನೆ ವೇಳೆ ಲಭ್ಯವಾಗಿಲ್ಲ.
ತಮ್ಮ ಹೆಸರು ಈ ಪಟ್ಟಿಗೆ ಸೇರಿದೆ ಎಂಬ ಅನುಮಾನ ಇದ್ದರೆ ಮತದಾರರು ಆತಂಕಪಡಬೇಕಿಲ್ಲ. ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿ (BLO) ಅವರನ್ನು ಸಂಪರ್ಕಿಸಿ ಗಣತಿ ನಮೂನೆಯನ್ನು ಪಡೆದು, ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 8ರೊಳಗೆ ಸಲ್ಲಿಸಬೇಕು ಎಂದು ಆಯೋಗ ತಿಳಿಸಿದೆ.
ನಿಮ್ಮ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟರೆ ಏನು ಮಾಡಬೇಕು?
2002ರ ಮತದಾರರ ಪಟ್ಟಿಯಲ್ಲಿ ನಿಮ್ಮ ಅಥವಾ ನಿಮ್ಮ ಪೋಷಕರ ಹೆಸರು ಇಲ್ಲದಿದ್ದರೂ ಸಹ ಅರ್ಜಿ ಭರ್ತಿ ಮಾಡಿ ಸಹಿಯೊಂದಿಗೆ ಬಿಎಲ್‌ಒಗೆ ಸಲ್ಲಿಸಬಹುದು. ನಂತರ ಅಧಿಕಾರಿಗಳು ಆ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲಿದ್ದಾರೆ. ಆಗಸ್ಟ್ 17ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಅದರ ಬಳಿಕ ಚುನಾವಣಾ ಆಯೋಗದಿಂದ ನೋಟಿಸ್ ಬಂದರೆ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಅಂತಿಮ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಉಳಿಸಿಕೊಳ್ಳಬಹುದು.
ಯಾವುದೇ ನಾಗರಿಕರ ಹೆಸರನ್ನು ಪಟ್ಟಿಯಿಂದ ಕೈಬಿಡುವ ಮೊದಲು ಬಿಎಲ್‌ಒಗಳು ಕಡ್ಡಾಯವಾಗಿ ಸ್ಥಳ ಪರಿಶೀಲನೆ ನಡೆಸಬೇಕು. ಜೀವಂತ ವ್ಯಕ್ತಿಯನ್ನು ತಪ್ಪಾಗಿ ಮೃತಪಟ್ಟಿದ್ದಾರೆ ಎಂದು ಗುರುತಿಸಿದ್ದರೆ, ತಕ್ಷಣ ಬಿಎಲ್‌ಒ ಸಂಪರ್ಕಿಸಿ ದಾಖಲೆಗಳೊಂದಿಗೆ ತಿದ್ದುಪಡಿ ಮಾಡಿಸಿಕೊಳ್ಳುವ ಅವಕಾಶವಿದೆ.
ಒಂದು ವೇಳೆ ಆಗಸ್ಟ್ 8ರೊಳಗೆ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಕರಡು ಪಟ್ಟಿ ಪ್ರಕಟವಾದ ಬಳಿಕ ಫಾರ್ಮ್-6 ಸಲ್ಲಿಸಿ ಹೊಸದಾಗಿ ಮತದಾರರಾಗಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಪ್ರಸ್ತುತ ರಾಜ್ಯದ ಒಟ್ಟು 5.54 ಕೋಟಿ ಮತದಾರರಲ್ಲಿ 43.24 ಲಕ್ಷ ಮತದಾರರ ಮಾಹಿತಿಯ ಡಿಜಿಟಲೀಕರಣ ಕಾರ್ಯ ಇನ್ನೂ ಬಾಕಿಯಿದ್ದು, ಪರಿಷ್ಕರಣೆ ಪ್ರಕ್ರಿಯೆ ಮುಂದುವರಿದಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!