BIG NEWS : ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ಏಪ್ರಿಲ್ 24 ಅಥವಾ 25ಕ್ಕೆ ಪ್ರಕಟ ಸಾಧ್ಯತೆ.

ಕರ್ನಾಟಕದ 2026ರ ಎಸ್ಎಸ್ಎಲ್ಸಿ (SSLC) ಪರೀಕ್ಷೆಗಳ ಫಲಿತಾಂಶವು ಏಪ್ರಿಲ್ 24 ಅಥವಾ 25 ರಂದು ಪ್ರಕಟವಾಗುವ ನಿರೀಕ್ಷೆಯಿದೆ. ಅಧಿಕೃತ ಫಲಿತಾಂಶಗಳನ್ನು karresults.nic.in ಮತ್ತು sslc.karnataka.gov.in ನಲ್ಲಿ ವೀಕ್ಷಿಸಬಹುದು. ಈ ವರ್ಷ ಸುಮಾರು 9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ…
news.ashwasurya.in
ಅಶ್ವಸೂರ್ಯ/ಬೆಂಗಳೂರು : ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿರುವ ಲಕ್ಷಾಂತರ ವಿದ್ಯಾರ್ಥಿಗಳ ಕಾಯುವಿಕೆ ಸದ್ಯದಲ್ಲೇ ಕೊನೆಗೊಳ್ಳಲಿದೆ. ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶವು ಏಪ್ರಿಲ್ 24 ಅಥವಾ 25ರಂದು ಬಿಡುಗಡೆಯಾಗುವ ಸಾಧ್ಯತೆಯಿದ್ದು, ಶಿಕ್ಷಣ ಇಲಾಖೆಯು ಅಂತಿಮ ಸಿದ್ಧತೆ ನಡೆಸುತ್ತಿದೆ. ಮೌಲ್ಯಮಾಪನ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ಅಧಿಕೃತ ವೆಬ್ಸೈಟ್ಗಳಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ರಾಜ್ಯಾದ್ಯಂತ ಸುಮಾರು 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿರುವ 2026ನೇ ಸಾಲಿನ ಎಸ್ಎಸ್ಎಲ್ಸಿ (SSLC) ಪರೀಕ್ಷೆ-1ರ ಫಲಿತಾಂಶವು ಏಪ್ರಿಲ್ ಕೊನೆಯ ವಾರದಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, ಏಪ್ರಿಲ್ 24 ಅಥವಾ 25ರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಅಧಿಕೃತವಾಗಿ ಫಲಿತಾಂಶವನ್ನು ಪ್ರಕಟಿಸುವ ಸಾಧ್ಯತೆಯಿದೆ. ಈಗಾಗಲೇ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮಂಡಳಿಯು ಅಂತಿಮ ಹಂತದ ತಾಂತ್ರಿಕ ಸಿದ್ಧತೆಗಳಲ್ಲಿ ತೊಡಗಿದೆ.
ತೃತೀಯ ಭಾಷೆಗಳಿಗೆ ಸಂಬಂಧಿಸಿದಂತೆ ಅಂಕ ಅಥವಾ ಗ್ರೇಡ್ ನೀಡುವ ವಿಚಾರದಲ್ಲಿ ಉಂಟಾಗಿದ್ದ ಕಾನೂನು ಗೊಂದಲವು ಫಲಿತಾಂಶದ ಮೇಲೆ ಸಣ್ಣ ಮಟ್ಟಿನ ಪ್ರಭಾವ ಬೀರಿದೆ. ಈ ಬಾರಿ ತೃತೀಯ ಭಾಷೆಗಳಿಗೆ ಗ್ರೇಡ್ ನೀಡಲು ಸರ್ಕಾರ ನಿರ್ಧರಿಸಿತ್ತು, ಆದರೆ ಹೈಕೋರ್ಟ್ ಅಂಕಗಳನ್ನೇ ನೀಡುವಂತೆ ಆದೇಶಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, “ನ್ಯಾಯಾಲಯದ ಆದೇಶವನ್ನು ಗೌರವಿಸಿ ಅಂಕಗಳನ್ನೇ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಈ ತಾಂತ್ರಿಕ ಬದಲಾವಣೆಯಿಂದಾಗಿ ಫಲಿತಾಂಶ ಪ್ರಕಟಣೆಯಲ್ಲಿ ಒಂದು ಅಥವಾ ಎರಡು ದಿನಗಳಷ್ಟು ಅಲ್ಪ ವಿಳಂಬವಾಗಬಹುದು,” ಎಂದು ಸ್ಪಷ್ಟಪಡಿಸಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಮಂಡಳಿಯ ಅಧಿಕೃತ ವೆಬ್ಸೈಟ್ಗಳಾದ karresults.nic.in ಅಥವಾ kseeb.karnataka.gov.in ಮೂಲಕ ವೀಕ್ಷಿಸಬಹುದಾಗಿದೆ. ಫಲಿತಾಂಶ ಪ್ರಕಟವಾದ ತಕ್ಷಣ ಈ ಲಿಂಕ್ಗಳು ಸಕ್ರಿಯಗೊಳ್ಳಲಿವೆ.
ಪರೀಕ್ಷೆ-1ರಲ್ಲಿ ಉತ್ತೀರ್ಣರಾಗದ ಅಥವಾ ಅಂಕಗಳನ್ನು ಸುಧಾರಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗಾಗಿ ಮಂಡಳಿಯು ಈಗಾಗಲೇ ಪರೀಕ್ಷೆ-2ರ (Exam-2) ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪರೀಕ್ಷೆಗಳು ಮೇ 18 ರಿಂದ ಮೇ 23 ರವರೆಗೆ ನಡೆಯಲಿದ್ದು, ಇದರ ಫಲಿತಾಂಶವು ಜೂನ್ 1, 2026 ರಂದು ಹೊರಬೀಳುವ ನಿರೀಕ್ಷೆಯಿದೆ. ಇದು ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ವರ್ಷವನ್ನು ಉಳಿಸಿಕೊಳ್ಳಲು ಉತ್ತಮ ಅವಕಾಶವಾಗಲಿದೆ.


