🏆 IPL 2026: ವೈಭವ್, ಜುರೆಲ್ ಬ್ಯಾಟಿಂಗ್ ಆರ್ಭಟಕ್ಕೆ ತತ್ತರಿಸಿದ ಆರ್ಸಿಬಿ ಬೌಲರ್ಸ್.! ಸೋಲಿಗೆ ಶರಣಾದ ಆರ್ಸಿಬಿ.!
ಐಪಿಎಲ್ 2026ರಲ್ಲಿ (IPL 2026) ರಾಜಸ್ಥಾನ್ ರಾಯಲ್ಸ್ (RR) ತಂಡದ ವೈಭವ್ ಸೂರ್ಯವಂಶಿ ಮತ್ತು ಧ್ರುವ್ ಜುರುಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ರಾಜಸ್ಥಾನ್ ರಾಯಲ್ಸ್ 6 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. 202 ರನ್ಗಳ ಬೃಹತ್ ಗುರಿಯನ್ನು ರಾಜಸ್ಥಾನ್ ತಂಡ ಕೇವಲ 18 ಓವರ್ಗಳಲ್ಲಿ ತಲುಪುವ ಮೂಲಕ ಸತತ ನಾಲ್ಕನೇ ಜಯ ಸಾಧಿಸಿತು….

Highlights : ಯುವ ಆಟಗಾರ ವೈಭವ್ ಸೂರ್ಯವಂಶಿ ಕೇವಲ 26 ಎಸೆತಗಳಲ್ಲಿ 78 ರನ್ (15 ಎಸೆತಗಳಲ್ಲಿ ಅರ್ಧಶತಕ) ಸಿಡಿಸಿ ಆರ್ಸಿಬಿ ಬೌಲರ್ಗಳನ್ನು ತತ್ತರಿಸುವಂತೆ ಮಾಡಿದರು. ವೈಭವ್ಗೆ ಸಾಥ್ ನೀಡಿದ ಧ್ರುವ್ ಜುರೆಲ್ 43 ಎಸೆತಗಳಲ್ಲಿ ಅಜೇಯ 81 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
news.ashwasurya.in
ಅಶ್ವಸೂರ್ಯ/ಗುವಾಹಟಿ : ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಪಂದ್ಯಾವಳಿಯಲ್ಲಿ ಸತತ ನಾಲ್ಕನೇ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಆಘಾತ ಅನುಭವಿಸಿ ನಾಯಕ ರಜತ್ ಪಟಿದಾರ್ ಅರ್ಧಶತಕ, ಶೆಫರ್ಡ್ ಹಾಗೂ ವೆಂಕಟೇಶ್ ಐಯ್ಯರ್ ಉತ್ತಮ ಆಟದ ನೆರವಿನಿಂದ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 202 ರನ್ಗಳ ಉತ್ತಮ ಮೊತ್ತದ ಸವಾಲಿನ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ಹಾಗೂ ಧ್ರುವ್ ಜುರೆಲ್ ಸಿಡಿಲಬ್ಬರದ ಬ್ಯಾಟಿಂಗ್ ನಿಂದ ಇನ್ನೂ ಎರಡು ಓವರ್ ಬಾಕಿ ಇರುವಂತೆಯೆ 4 ವಿಕೆಟ್ ನಷ್ಟಕ್ಕೆ 202 ರನ್ ಕಲೆಹಾಕಿ ವಿಜಯ ಸಾಧಿಸಿತು.

ಆರ್ಸಿಬಿ ತಂಡದ ಪರ ಆರಂಭಿಕ ಆಟಗಾರರಾಗಿ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಕಣಕ್ಕಿಳಿದರು. ಜೋಫ್ರಾ ಆರ್ಚರ್ ಎಸೆದ ಇನ್ನಿಂಗ್ಸ್ನ ಮೊದಲ ಎಸೆತದಲ್ಲೇ ಫಿಲ್ ಸಾಲ್ಟ್ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ನೆಡೆದರು. ಹೀಗೆ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ ಆರ್ಸಿಬಿ ಪರ ಎರಡನೇ ವಿಕೆಟ್ಗೆ ಜತೆಯಾದ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ 45 ರನ್ಗಳ ಜತೆಯಾಟವನ್ನಾಡಿದರು. ಪಡಿಕ್ಕಲ್ 7 ಎಸೆತಗಳಲ್ಲಿ 14 ರನ್ ಗಳಿಸಿದರು. ಬೆನ್ನಲ್ಲೇ ಕೊಹ್ಲಿ 16 ಎಸೆತಗಳಲ್ಲಿ 32 ರನ್ ಗಳಿಸಿ ರವಿ ಬಿಷ್ಣೋಯಿಗೆ ಕ್ಲೀನ್ ಬೌಲ್ಡ್ ಆದರು. ನಂತರ ಕೃನಾಲ್ ಪಾಂಡ್ಯ ಕೇವಲ 1 ರನ್ಗೆ ವಿಕೆಟ್ ಒಪ್ಪಿಸಿ ಮರಳಿದರು. ಬಳಿಕ ಜಿತೇಶ್ ಶರ್ಮಾ 5 ಹಾಗೂ ಟಿಮ್ ಡೇವಿಡ್ 13 ರನ್ಗೆ ಔಟ್ ಆದರು. ನಂತರ ಕಣಕ್ಕಿಳಿದ ರೊಮಾರಿಯೊ ಶೆಫರ್ಡ್ 11 ಎಸೆತಗಳಲ್ಲಿ 22 ರನ್ ಗಳಿಸಿದರಾದರೂ ಹೆಚ್ಚುಕಾಲ ಕಣದಲ್ಲಿ ಉಳಿಯಲಿಲ್ಲ. ಹೀಗೆ 127 ರನ್ಗೆ 7 ವಿಕೆಟ್ ಕಳೆದುಕೊಂಡಿತು. ಹೀಗೆ ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದೆಡೆ ನಾಯಕ ರಜತ್ ಪಟಿದಾರ್ ಏಕಾಂಗಿ ಹೋರಾಟ ನಡೆಸಿದರು. ಈ ಸಮಯದಲ್ಲಿ ಪಟಿದಾರ್ ಜತೆ ಮತ್ತೊಬ್ಬ ಬ್ಯಾಟಿಂಗ್ ಸಾಮರ್ಥ್ಯವಿರುವ ಆಟಗಾರ ಬೇಕೆಂದು ವೆಂಕಟೇಶ್ ಐಯ್ಯರ್ರನ್ನು ಕರೆತರಲಾಯಿತು. ಕೆಲ ಸಮಯದಲ್ಲೇ ರಜತ್ ಪಟಿದಾರ್ 40 ಎಸೆತಗಳಲ್ಲಿ 63 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಕೊನೆಯ ಹಂತದಲ್ಲಿ ಜವಾಬ್ದಾರಿಯುತ ಆಟವಾಡಿದ ವೆಂಕಟೇಶ್ ಐಯ್ಯರ್ 15 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 29 ರನ್ ಹಾಗೂ ಭುವನೇಶ್ವರ್ ಕುಮಾರ್ ಅಜೇಯ 9 ರನ್ ಕಲೆಹಾಕಿ ತಂಡ 200 ರನ್ಗಳ ಗಡಿದಾಟಿಸುವಲ್ಲಿ ಯಶಸ್ವಿಯಾದರು.

ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್, ರವಿ ಬಿಷ್ಣೋಯಿ ಹಾಗೂ ಬ್ರಿಜೇಶ್ ಶರ್ಮಾ ತಲಾ ಎರಡು ವಿಕೆಟ್ ಪಡೆದರೆ, ಸಂದೀಪ್ ಶರ್ಮಾ ಹಾಗೂ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.
ರಾಜಸ್ಥಾನ್ ರಾಯಲ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಭರವಸೆಯ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಕೇವಲ 13 ರನ್ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಕೇವಲ 21 ರನ್ಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ ತಂಡಕ್ಕೆ ಮತ್ತೋರ್ವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಹಾಗೂ ಧ್ರುವ್ ಜುರೆಲ್ 108 ರನ್ಗಳ ಜತೆಯಾಟವಾಡಿದರು. ವೈಭವ್ ಸೂರ್ಯವಂಶಿ ಮತ್ತೊಮ್ಮೆ ಅಬ್ಬರಿಸಿ 26 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 78 ರನ್ ಹೊಡೆದು ಆರ್ಸಿಬಿ ಬೌಲರ್ಗಳನ್ನು ಚಚ್ಚಿ ಹಾಕಿದರು. ವೈಭವ್ ವಿಕೆಟ್ ಬಿದ್ದ ಬೆನ್ನಲ್ಲೇ ಕಣಕ್ಕಿಳಿದ ಶಿಮ್ರಾನ್ ಹೆಟ್ಮಾಯೆರ್ ಡಕ್ಔಟ್ ಆದರೆ ನಾಯಕ ರಿಯಾನ್ ಪರಾಗ್ ಕೇವಲ 3 ರನ್ಗೆ ಪೆವಿಲಿಯನ್ ಕಡೆ ಹೆಜ್ಜೆಹಾಕಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದೆಡೆ ನೆಲಕಚ್ಚಿ ನಿಂತ ಧ್ರುವ್ ಜುರೆಲ್ ಜಡೇಜಾ ಜತೆ ಸೇರಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಜಡೇಜಾ ಅಜೇಯ 24 ರನ್ ಗಳಿಸಿದರೆ, ಧ್ರುವ್ ಜುರೆಲ್ 43 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 81 ರನ್ ಕಲೆಹಾಕಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಜೋಶ್ ಹೇಜಲ್ವುಡ್ ಹಾಗೂ ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರು.
ರಾಜಸ್ಥಾನ್ ರಾಯಲ್ಸ್ ತಂಡ ಅಂಕದ ಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡರೆ ರಾಜಸ್ಥಾನ್ ರಾಯಲ್ಸ್ ಮೂರು ಪಂದ್ಯ ಗೆದ್ದು ನಾಲ್ಕನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಎದುರು ಸೋತು ಅಂಕದ ಪಟ್ಟಿಯಲ್ಲಿ ಕೆಳಕ್ಕೆ ಇಳಿಯಿತು…

