
ಧಾರವಾಡ : ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಬರ್ಬರ ಹತ್ಯೆ.! ಧಾರವಾಡದ ಹೊರವಲಯದಲ್ಲಿ ಶವ ಪತ್ತೆ.!

news.ashwasurya.in
ಅಶ್ವಸೂರ್ಯ/ಧಾರವಾಡ : ಧಾರವಾಡದಲ್ಲಿ 19 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಝಕಿಯಾ ಮುಲ್ಲಾ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಲ್ಯಾಬ್ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಆಕೆಯ ಶವ ನಗರದ ಹೊರವಲಯದಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿದ್ಯಾಕಾಶಿಯ ನೆಲದಲ್ಲಿ ಮತ್ತೊಂದು ಭೀಕರ ಹತ್ಯೆಯಾಗಿದೆ.19 ವರ್ಷದ ಪ್ಯಾರಾಮೆಡಿಕಲ್ ಓದುತ್ತಿದ್ದ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳು ಮನಬಂದಂತೆ ಕೊಚ್ಚಿ ಹತ್ಯೆ ಮಾಡಿ ನಗರದ ಹೊರವಲಯದಲ್ಲಿ ಎಸೆದು ಹೋಗಿದ್ದಾರೆ.!ಈ ಘಟನೆಯಿಂದ ಧಾರವಾಡ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ.

ಎನಿದು ಘಟನೆ :
ವಿದ್ಯಾಕಾಶಿ ಧಾರವಾಡದ ಗಾಂಧಿ ಚೌಕ್ ನಿವಾಸಿಯಾಗಿದ್ದ ಝಕಿಯಾ ಮುಲ್ಲಾ (19) ಕೊಲೆಯಾದ ದುರ್ದೈವಿ. ಪ್ಯಾರಾಮೆಡಿಕಲ್ ಶಿಕ್ಷಣ ಮುಗಿಸಿದ್ದ ಝಕಿಯಾ, ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಮಂಗಳವಾರ ಸಂಜೆ ಮನೆಯಿಂದ ಲ್ಯಾಬ್ಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ಯುವತಿ, ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಆತಂಕಗೊಂಡ ಮನೆಯವರು ಮತ್ತು ಆತ್ಮೀಯರು ಹುಡುಕಾಟ ನಡೆಸುತ್ತಿದ್ದಾರೆ ಅದರೂ ಯುವತಿಯ ಸುಳಿವು ಸಿಕ್ಕಿರಲಿಲ್ಲ.!

ಹತ್ಯೆ ಮಾಡಿ ಶವ ಎಸೆದು ಪರಾರಿ.! :
ಇಂದು (ಜ,22) ಮುಂಜಾನೆ ಮನಸೂರು ರಸ್ತೆಯ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸೇರಿದ ವಿನಯ್ ಡೈರಿ ಸಮೀಪ ಯುವತಿಯ ಶವ ಪತ್ತೆಯಾಗಿದೆ. ಬೇರೆ ಯಾವುದೋ ಸ್ಥಳದಲ್ಲಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ, ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಇಲ್ಲಿಗೆ ತಂದು ಶವವನ್ನು ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಹಾಗೂ ವಿದ್ಯಾಗಿರಿ ಠಾಣೆಯ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.ಹತ್ಯೆಗೆ ಸಂಭಂದಿಸಿದ ಯಾವುದಾದರೂ ಕುರುಹು ಸಿಗಬಹುದಾ ಎನ್ನುವ ನಿಟ್ಟಿನಲ್ಲಿ ಪೊಲೀಸರು ಸೂಕ್ಷ್ಮವಾಗಿ ಸ್ಥಳ ಪರಿಶೀಲಿಸಿದ್ದಾರೆ.

ಹೆತ್ತವರ ಆಕ್ರಂದನ:
ತಮ್ಮ ಮಗಳು ಕೊಲೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.ಬದುಕು ಕಟ್ಟಿಕೊಳ್ಳಬೇಕು ಮನೆಯವರಿಗೆ ಆಸರೆಯಾಗಬೇಕು ಎಂದು ಕನಸು ಹೊತ್ತು ಕೆಲಸ ಹುಡುಕುತ್ತಿದ್ದ ಮಗಳಿಗೆ ಇಂತಹ ಸ್ಥಿತಿ ಬರಬಾರದಿತ್ತು’ ಎಂದು ಕಣ್ಣೀರಿಟ್ಟಿದ್ದಾರೆ ಕುಟುಂಬಸ್ಥರು, ಹಂತಕರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು,

ಯುವತಿಯ ಮೊಬೈಲ್ ಕರೆಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ. ಹತ್ಯೆಗೆ ಪ್ರೇಮ ಪ್ರಕರಣ ಕಾರಣವೇ ಅಥವಾ ಬೇರೆ ಯಾವುದಾದರೂ ದ್ವೇಷವಿದೆಯೇ ಎಂಬುದು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ….


