BREAKING NEWS: ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್.! ವಸತಿಗೃಹದಲ್ಲಿ ಪ್ರಿಯತಮೆಯನ್ನು ಬರ್ಬರವಾಗಿ ಹತ್ಯೆಗೈದ ಪ್ರಿಯಕರ.!
news.ashwasurya.in
ಅಶ್ವಸೂರ್ಯ | ಬೆಂಗಳೂರು: ಬೆಂಗಳೂರುನಲ್ಲಿ ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ವಸತಿಗೃಹದಿಂದ ಹೊರಕ್ಕೆ ತಳ್ಳಿ ಕೊಲೆ ಮಾಡಿದ ಪ್ರಕರಣದ ಬೆನ್ನಲ್ಲೇ ಮತ್ತೊಂದು ಕೊಲೆ ನಡೆದಿದೆ. ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ವಸತಿಗೃಹದ ರೂಂ ನಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ನಾಲ್ಕು ವರ್ಷಗಳ ಪ್ರೇಮಕಥೆ ದುರಂತ ಅಂತ್ಯಕಂಡಿದೆ. ಅನೈತಿಕ ಸಂಬಂಧದ ಅನುಮಾನದಿಂದ ಪ್ರಿಯಕರ ತನ್ನ ಪ್ರಿಯತಮೆಯನ್ನು ಲಾಡ್ಜ್ ರೂಮಿನೊಳಗೆ ಬರ್ಬರವಾಗಿ ಕೊಲೆಗೈದಿದ್ದಾನೆ ಎಂದು ವರದಿಯಾಗಿದೆ. ಬೆಂಗಳೂರಿನ ಕಾಟನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕೇರಳ ಮೂಲದ ಗಂಗಾ ಕೊಲೆಯಾದ ದುರ್ದೈವಿ. ಕೃತ್ಯ ಎಸಗಿದ ಪ್ರಿಯಕರ ಗೋಕುಲ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೇರಳ ಮೂಲದವರಾದ ಗಂಗಾ ಮತ್ತು ಗೋಕುಲ್ ಇಬ್ಬರೂ ನರ್ಸಿಂಗ್ ಕೋರ್ಸ್ ವ್ಯಾಸಂಗ ಪೂರ್ಣಗೊಳಿಸಿದ್ದರು. ಕಳೆದ 4 ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಹುಡುಕುವ ಸಲುವಾಗಿ ನಗರಕ್ಕೆ ಬಂದಿದ್ದ ಈ ಜೋಡಿ, ಗುರುವಾರ (ನಿನ್ನೆ) ಕಾಟನ್ಪೇಟೆಯ ಮಸ್ತಾನ್ ದರ್ಗಾ ಬಳಿಯಿರುವ ‘ರೆಜೆನ್ಸಿ ಲಾಡ್ಜ್’ ನಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದು ಉಳಿದುಕೊಂಡಿದ್ದರು.
ಲಾಡ್ಜ್ಗೆ ಬಂದಿದ್ದ ಇಬ್ಬರ ನಡುವೆ ಗಲಾಟೆಯಾಗಿತ್ತು. ಗಂಗಾಳಿಗೆ ಬೇರೊಬ್ಬ ಯುವಕನ ಜೊತೆಗೆ ಸಂಬಂಧವಿದೆ ಎಂಬ ಅನುಮಾನಹೊಂದಿದ್ದ ಗೋಕುಲ್ ಇದೇ ವಿಚಾರವನ್ನು ಪ್ರಸ್ತಾಪಿಸಿ ಜಗಳ ಶುರುಮಾಡಿದ್ದ. ಈ ಜಗಳ ವಿಕೋಪಕ್ಕೆ ಹೋಗಿ ಗೋಕುಲ್, ಲಾಡ್ಜ್ನ ರೂಮಿನೊಳಗೆ ಗಂಗಾಳನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ ಎಂದು ಶಂಕಿಸಲಾಗಿದೆ.
ಕೊಲೆ ನಡೆದ ರೆಜೆನ್ಸಿ ಲಾಡ್ಜ್ನ ಕೊಠಡಿಯ ಹಾಸಿಗೆಯ ಮೇಲೆ ಹಾಗೂ ಹೊರಗಿನ ಮೆಟ್ಟಿಲುಗಳ ತುಂಬೆಲ್ಲಾ ರಕ್ತ ಬಿದ್ದಿರುವುದು ಕಂಡುಬಂದಿದ್ದು, ಕೃತ್ಯದ ಭೀಕರತೆಗೆ ಸಾಕ್ಷಿಯಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕಾಟನ್ಪೇಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಈ ಕೊಲೆ ಪೂರ್ವ ನಿಯೋಜಿತ ಕೃತ್ಯವೇ? ಎಂಬ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


