Headlines

ಇರಾನ್‌ನಲ್ಲಿ ಮರ್ಯಾದಾ ಹತ್ಯೆ; 19 ವರ್ಷದ ಗರ್ಭಿಣಿ ಮಗಳಿಗೆ ಉಸಿರುಗಟ್ಟಿಸಿ ಕೊಂದ ತಂದೆ-ತಾಯಿ.!

ಅಶ್ವಸೂರ್ಯ | ಇರಾನ್ : ತನ್ನ ಬದುಕಿನ ಬಗ್ಗೆ ನೂರಾರು ಕನಸುಗಳನ್ನು ಕಂಡಿದ್ದ ಆಕೆಗೆ ಇನ್ನೂ ಕೇವಲ 19 ವರ್ಷ. ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುವ ಸಮಯ. ಎರಡು ತಿಂಗಳ ಗರ್ಭಿಣಿಯಾಗಿದ್ದ ಆಕೆ ತನ್ನ ಪ್ರೀತಿಯ ವಿಚಾರವನ್ನು ಮನೆಯವರಿಗೆ ತಿಳಿಸಿದ್ದಳು. ಆದರೆ, ಮಗಳ ಸಂತೋಷಕ್ಕೆ ಬೆಂಬಲವಾಗಿ ನಿಲ್ಲಬೇಕಿದ್ದ ತಂದೆ-ತಾಯಿಯೇ ಆಕೆಯ ಪಾಲಿಗೆ ಮೃತ್ಯುವಾದರು. ಇರಾನ್‌ನಲ್ಲಿ ನಡೆದ ಈ ಭೀಕರ ಘಟನೆ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ.
ಹೌದು.ಇರಾನ್‌ನ ಪಶ್ಚಿಮ ಭಾಗದಲ್ಲಿರುವ ಸನಂದಜ್ ನಗರದಲ್ಲಿ 19 ವರ್ಷದ ಹೆಲಿಯಾ ಫತ್ತಾಹಿ ಎಂಬ ಯುವತಿಯನ್ನು ಆಕೆಯ ತಂದೆ-ತಾಯಿಯೇ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರೀತಿಯ ಸಂಬಂಧದಿಂದ ಎರಡು ತಿಂಗಳ ಗರ್ಭಿಣಿಯಾಗಿದ್ದ ವಿಚಾರವನ್ನು ಕುಟುಂಬದವರಿಗೆ ತಿಳಿಸಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

ಮಗಳ ಮೇಲೆ ಪೋಷಕರೇ ನಡೆಸಿದರು ಬರ್ಬರ ಹಲ್ಲೆ! :
ಹೆಲಿಯಾ ತನ್ನ ಗರ್ಭಧಾರಣೆಯ ವಿಚಾರವನ್ನು ಕಳೆದ ವಾರ ಕುಟುಂಬದವರಿಗೆ ತಿಳಿಸಿದ್ದಳು. ಇದರಿಂದ ಆಕ್ರೋಶಗೊಂಡ ತಂದೆ ವೋರಿಯಾ ಫತ್ತಾಹಿ ಮತ್ತು ತಾಯಿ ಲೈಲಾ ವೈಸ್ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ನವೆಂಬರ್ 21ರಂದು ಪೋಷಕರು ಮಗಳ ವಿರುದ್ಧ ದೂರು ದಾಖಲಿಸಲು ನ್ಯಾಯಾಲಯಕ್ಕೆ ತೆರಳಿದ್ದರು. ಅಲ್ಲಿಂದ ಮನೆಗೆ ಮರಳಿದ ಬಳಿಕ ಆಕೆಗೆ ಸುಮಾರು 30 ಆಂಟಿ-ಕನ್ವಲ್ಸೆಂಟ್ ಮಾತ್ರೆಗಳನ್ನು ಬಲವಂತವಾಗಿ ನುಂಗಿಸಿದ್ದಾರೆ ಎನ್ನಲಾಗಿದೆ.

ಆದರೆ, ಮಾತ್ರೆಗಳನ್ನು ಸೇವಿಸಿದರೂ ಆಕೆ ಮೃತಪಟ್ಟಿರಲಿಲ್ಲ. ಬಳಿಕ ಪೋಷಕರು ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ, ದಿಂಬಿನಿಂದ ಮುಖ ಮುಚ್ಚಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ ಎಂದು ಹೆಂಗಾವ್ ಮಾನವ ಹಕ್ಕುಗಳ ಸಂಘಟನೆ ಆರೋಪಿಸಿದೆ.
ವಿಚಾರಣೆ ವೇಳೆ ಹತ್ಯೆ ಒಪ್ಪಿಕೊಂಡ ಪೋಷಕರು!
ಈ ಘಟನೆಗೆ ಸಂಬಂಧಿಸಿದಂತೆ ಯುವತಿಯ ತಂದೆ ವೋರಿಯಾ ಫತ್ತಾಹಿ ಮತ್ತು ತಾಯಿ ಲೈಲಾ ವೈಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಇಬ್ಬರೂ ತಮ್ಮ ಮಗಳ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಇರಾನ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ.

ಹೆಂಗಾವ್ ಮತ್ತು ಹನಾ ಎಂಬ ಮಾನವ ಹಕ್ಕುಗಳ ಸಂಘಟನೆಗಳು ಈ ಘಟನೆಯನ್ನು ಮರ್ಯಾದಾ ಹತ್ಯೆ ಎಂದು ಖಂಡಿಸಿವೆ. ಮಹಿಳೆಯರು ಮತ್ತು ಮಕ್ಕಳನ್ನು ಕೌಟುಂಬಿಕ ಹಿಂಸೆಯಿಂದ ರಕ್ಷಿಸುವಲ್ಲಿ ಇರಾನ್‌ನ ಕಾನೂನು ವ್ಯವಸ್ಥೆಯ ವೈಫಲ್ಯ ಹಾಗೂ ಇಂತಹ ಅಪರಾಧಗಳಿಗೆ ವಿಧಿಸಲಾಗುವ ದುರ್ಬಲ ಶಿಕ್ಷೆಗಳ ಬಗ್ಗೆ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.

Leave a Reply

Your email address will not be published. Required fields are marked *

Optimized by Optimole
error: Content is protected !!