ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ನೇಮಕ: ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರು!
news.ashwasurya.in
ಅಶ್ವಸೂರ್ಯ/ನವದೆಹಲಿ : ಕರ್ನಾಟಕಕ್ಕೆ ನೂತನ ರಾಜ್ಯಪಾಲರನ್ನು ನೇಮಿಸಲಾಗಿದೆ. ಕರ್ನಾಟಕವೂ ಸೇರಿದಂತೆ ಆರು ರಾಜ್ಯಗಳಲ್ಲಿ ಹೊಸ ರಾಜ್ಯಪಾಲರ ನೇಮಕ ಮಾಡಲಾಗಿದೆ. ಬಿಜೆಪಿಯ ಮಾಜಿ ಸಂಸದೆ ಸುಧಾ ಯಾದವ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ನಾಟಕದ ಹೊಸ ರಾಜ್ಯಪಾಲರನ್ನಾಗಿ ನೇಮಿಸಿದ್ದಾರೆ. ಕರ್ನಾಟಕ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಥಾವರ್ಚಂದ್ ಗೆಹ್ಲೋಟ್ ಅವರ ಸ್ಥಾನವನ್ನು ಸುಧಾ ಯಾದವ್ ಅವರು ನಿರ್ವಹಿಸಲಿದ್ದಾರೆ.
ಸುಧಾ ಯಾದವ್ ಅವರು1999 ರಿಂದ 2004 ರವರೆಗೆ 13 ನೇ ಲೋಕಸಭೆಯಲ್ಲಿ ಹರಿಯಾಣದ ಮಹೇಂದ್ರಗಢ ಕ್ಷೇತ್ರವನ್ನು ಪ್ರತಿನಿಧಿಸಿರುವ ಬಿಜೆಪಿಯಿಂದ ಪ್ರತಿನಿಧಿಸಿದ್ದಾರೆ. ಸುಧಾ ಅವರನ್ನು 2022 ರಲ್ಲಿ ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಬಿಜೆಪಿಯ ಸಂಸದೀಯ ಮಂಡಳಿಗೆ ನೇಮಿಸಲಾಗಿತ್ತು. ಅಲ್ಲದೆ ಅವರು, 2019 ರಿಂದ 2022 ರವರೆಗೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು.
ಇನ್ನು ಸುಧಾ ಯಾದವ್ ಅವರು, ಭಾರತೀಯ ತಂತ್ರಜ್ಞಾನ ಸಂಸ್ಥೆ ರೂರ್ಕಿ ಎಂದು ಕರೆಯಲ್ಪಡುವ ರೂರ್ಕಿ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್ಡಿ ಪದವಿ ಪಡೆದಿದ್ದಾರೆ. 1999 ರಲ್ಲಿ ಅವರು ಮಹೇಂದ್ರಗಢದಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಿ ರಾವ್ ಇಂದ್ರಜಿತ್ ಸಿಂಗ್ ಅವರನ್ನು ಸೋಲಿಸುವ ಮೂಲಕ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದರು.
ಯಾದವ್ ಅವರ ಪತಿ ಸುಖ್ಬೀರ್ ಸಿಂಗ್ ಯಾದವ್ ಅವರು ಗಡಿ ಭದ್ರತಾ ಪಡೆಯಲ್ಲಿ ಉಪ ಕಮಾಂಡೆಂಟ್ ಆಗಿದ್ದರು ಮತ್ತು ಕಾರ್ಗಿಲ್ ಯುದ್ಧದ ಸಮಯದಲ್ಲಿ ಹುತಾತ್ಮರಾಗಿದ್ದರು. ಸುಧಾ ಅವರು ರಾಜಕೀಯಕ್ಕೆ ಪ್ರವೇಶಿಸಿದ ನಂತರ ಬಿಜೆಪಿಯಲ್ಲಿ ಸಾಂಸ್ಥಿಕ ಜವಾಬ್ದಾರಿಗಳನ್ನು ನಿರ್ವಹಿಸಿದರು ಮತ್ತು ಸಂಸದರಾಗಿದ್ದ ಅವಧಿಯಲ್ಲಿ ಸಂಸದೀಯ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಆರು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಕ
ಕರ್ನಾಟಕವೂ ಸೇರಿದಂತೆ ಒಟ್ಟು 6 ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ : ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧ ಯಾದವ್ ಸೇರಿದಂತೆ ಒಟ್ಟು ಆರು ರಾಜ್ಯಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ರಾಜ್ಯಪಾಲರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.

ಕೇರಳಂ: ಸಿಕ್ಕಿಂನ ನಿರ್ಗಮಿತ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

ತಮಿಳುನಾಡು: ಕೇರಳದ ರಾಜ್ಯಪಾಲರಾಗಿದ್ದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ತಮಿಳುನಾಡಿನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

ಒಡಿಶಾ: ಬ್ರಜ್ ಮೋಹನ್ ರಾಮ್ ಅವರನ್ನು ಒಡಿಶಾದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

ಉತ್ತರಾಖಂಡ: ಧಲ್ಸಿಂಗ್ ಬಿಸೆನ್ ಅವರನ್ನು ಉತ್ತರಾಖಂಡದ ಹೊಸ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

ಸಿಕ್ಕಿಂ: ದುಷ್ಯಂತ್ ಗೌತಮ್ ಅವರನ್ನು ಹೊಸ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

ಗಣ್ಯರಿಂದ ಅಭಿನಂದನೆ :
ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ಸುಧಾ ಯಾದವ್ ಅವರಿಗೆ ಕರ್ನಾಟಕದ ರಾಜಕಾರಣಿಗಳು ಹಾಗೂ ಗಣ್ಯರು ಅಭಿನಂದಿಸಿದ್ದಾರೆ. ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ಸುಧಾ ಯಾದವ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಕರ್ನಾಟಕಕ್ಕೆ ಆತ್ಮೀಯ ಸ್ವಾಗತ. ತಮ್ಮ ಅಪಾರ ರಾಜಕೀಯ ಅನುಭವ ಮತ್ತು ಶೈಕ್ಷಣಿಕ ಅರ್ಹತೆಯ ಮೂಲಕ ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿ. ತಮ್ಮ ಮಾರ್ಗದರ್ಶನದಲ್ಲಿ ಕರ್ನಾಟಕದ ಸಾಂವಿಧಾನಿಕ ಮೌಲ್ಯಗಳು ಮತ್ತಷ್ಟು ಬಲಗೊಳ್ಳಲಿ ಹಾಗೂ ರಾಜ್ಯವು ಪ್ರಗತಿಯ ಹೊಸ ಎತ್ತರಗಳನ್ನು ತಲುಪಲಿ ಎಂದು ಹಾರೈಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ.
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು, ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡಿರುವ ಡಾ. ಸುಧಾ ಯಾದವ್ ಅವರು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರನ್ನು ಕರ್ನಾಟಕಕ್ಕೆ ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಅವರ ರಾಜಕೀಯ ಅನುಭವ ಮತ್ತು ಬಲವಾದ ಶೈಕ್ಷಣಿಕ ಹಿನ್ನೆಲೆಯೊಂದಿಗೆ, ಅವರ ಅಧಿಕಾರಾವಧಿಯು ರಾಜ್ಯದ ಸಾಂವಿಧಾನಿಕ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಅವರ ಅಧಿಕಾರಾವಧಿಯು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಮತ್ತು ಕರ್ನಾಟಕದ ಜನರ ಸೇವೆಯಲ್ಲಿ ಅವರ ಮಾರ್ಗದರ್ಶನವನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.


