ತಮಿಳುನಾಡು : ಲಂಡನ್ ವರ ಅಸಲಿಗೆ ಚಿಕನ್ ಸ್ಟಾಲ್ನಲ್ಲಿ ಕೆಲಸ.! ಸತ್ಯ ತಿಳಿದು ಮದುವೆ ಕ್ಯಾನ್ಸಲ್ ಮಾಡಿದ ಪೋಷಕರು, ಆತ್ಮಹತ್ಯೆಗೆ ಶರಣಾದ ಯುವತಿ.!
news.ashwasurya.in
ಅಶ್ವಸೂರ್ಯ/ತಿರುವಾರೂರು: ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಒಂದು ಸುಂದರ ಘಟ್ಟ. ತಮ್ಮ ಮಗಳಿಗೆ ಒಬ್ಬ ಒಳ್ಳೆಯ, ಸುಶಿಕ್ಷಿತ ಹಾಗೂ ಕೈತುಂಬಾ ಸಂಪಾದಿಸುವ ವರನನ್ನ ತಂದುಕೊಡಬೇಕು ಎಂಬುದು ಎಲ್ಲಾ ಪೋಷಕರ ಕನಸಾಗಿರುತ್ತದೆ. ತಮಿಳುನಾಡಿನ ತಿರುವಾರೂರಿನಲ್ಲೂ ಒಂದು ಕುಟುಂಬ ತಮ್ಮ ಮಗಳಿಗೆ ಲಂಡನ್ ಹುಡುಗ ಸಿಕ್ಕಿದ್ದಾನೆ ಎಂದು ಅತೀವ ಸಂತಸದಲ್ಲಿದ್ದರು, ಆದರೆ ಆ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ.
ಹೌದು, ಲಂಡನ್ ಹುಡುಗ ಅಸಲಿಯತ್ತು ಬದಲಾದಾಗ ಇಡೀ ಕುಟುಂಬವೇ ಬೆಚ್ಚಿಬಿದ್ದಿದೆ. ಈ ಘಟನೆ ಕೊನೆಗೆ ಯುವತಿಯ ದುರಂತ ಅಂತ್ಯದಲ್ಲಿ ಕೊನೆಯಾಗಿದ್ದು, ಇಡೀ ಊರನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.
ತಿರುವಾರೂರು ನಗರದ ಉತ್ತರ ಬೀದಿಯ ನಿವಾಸಿ ಕುಮಾರ್ (60) ಹಾಗೂ ಮೀರಾ (55) ದಂಪತಿಯ ಪುತ್ರಿ ಶ್ರೀಲೇಖಾ (24). ಕುಮಾರ್ ಅವರು ತಮ್ಮ ಮನೆಯ ಕೆಳಮಹಡಿಯಲ್ಲಿಯೇ ಸೈಕಲ್ ರಿಪೇರಿ ಅಂಗಡಿಯನ್ನ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಮಗಳು ಶ್ರೀಲೇಖಾ ಬಿ.ಎಸ್.ಸಿ. ಪದವೀಧರೆಯಾಗಿದ್ದಳು.
ಲಂಡನ್ ವರನ ಅಸಲಿಯತ್ತು ಬಯಲು! :
ಶ್ರೀಲೇಖಾಳಿಗೆ ಮದುವೆ ಮಾಡಲು ಪೋಷಕರು ವರನನ್ನು ಹುಡುಕುತ್ತಿದ್ದರು. ಈ ವೇಳೆ ಮೈಲಾಡುತುರೈ ಮೂಲದ ಯುವಕನೊಬ್ಬನ ಪರಿಚಯವಾಗಿದೆ. ಆತ ಲಂಡನ್ನಲ್ಲಿ ಕೈತುಂಬಾ ಸಂಬಳ ಇರುವ ಕೆಲಸದಲ್ಲಿದ್ದಾನೆ ಎಂದು ಹುಡುಗನ ಕಡೆಯವರು ನಂಬಿಸಿದ್ದಾರೆ. ಇದನ್ನು ನಿಜವೆಂದು ನಂಬಿದ ಕುಮಾರ್ ಕುಟುಂಬ, ತಮ್ಮ ಮಗಳಿಗೆ ವಿದೇಶದಲ್ಲಿರುವ ವರ ಸಿಕ್ಕಿದ್ದಾನೆ ಎಂದು ಖುಷಿಯಿಂದ ಮದುವೆ ನಿಶ್ಚಯ ಮಾಡಿದ್ದರು.
ಮದುವೆ ನಿಶ್ಚಯವಾದ ಬಳಿಕ, ಶ್ರೀಲೇಖಾ ಹಾಗೂ ಆ ಯುವಕನ ನಡುವೆ ಮೊಬೈಲ್ ಫೋನ್ ಮೂಲಕ ನಿರಂತರವಾಗಿ ಮಾತುಕತೆ ಶುರುವಾಗಿತ್ತು. ದಿನಕಳೆದಂತೆ ಇಬ್ಬರ ನಡುವಿನ ಆಪ್ತತೆ ಕೂಡ ಹೆಚ್ಚಾಗಿತ್ತು. ಒಂದು ಕಡೆ ಮದುವೆಗೆ ಭರದ ಸಿದ್ಧತೆಗಳು ನಡೆಯುತ್ತಿದ್ದರೆ, ಇನ್ನೊಂದು ಕಡೆ ಯುವಕನ ಅಸಲಿ ಬಣ್ಣ ಬಯಲಾಗಿದೆ.
ಲಂಡನ್ನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಲಾಗಿದ್ದ ಆತ, ವಾಸ್ತವದಲ್ಲಿ ಎಲ್ಲೂ ಹೋಗಿರಲಿಲ್ಲ. ಬದಲಾಗಿ ಮೈಲಾಡುತುರೈನಲ್ಲಿಯೇ ಇರುವ ಒಂದು ಚಿಕನ್ ಸ್ಟಾಲ್ ನಲ್ಲಿ ಕೆಲಸ ಮಾಡುತ್ತಿದ್ದ ಎಂಬ ಸತ್ಯ ಶ್ರೀಲೇಖಾ ಪೋಷಕರಿಗೆ ತಿಳಿದುಬಂದಿದೆ.
ಸುಳ್ಳು ಹೇಳಿ ವಂಚಿಸಿದ ವರನ ಕಡೆಯವರು! ನಿಶ್ಚಯ ಕ್ಯಾನ್ಸಲ್ ಮಾಡಿದ ಪೋಷಕರು :
ಮಗಳು ಶ್ರೀಲೇಖಾಳ ಭವಿಷ್ಯದ ದೃಷ್ಟಿಯಿಂದ ಆತಂಕಗೊಂಡ ಪೋಷಕರು, ತಕ್ಷಣವೇ ಎಚ್ಚೆತ್ತುಕೊಂಡು ಈ ಮದುವೆಯನ್ನ ರದ್ದುಗೊಳಿಸಲು ನಿರ್ಧರಿಸಿದರು. ಸುಳ್ಳು ಹೇಳಿ ವಂಚಿಸಿದ ಯುವಕನಿಗೆ ತಮ್ಮ ಮಗಳನ್ನ ಕೊಡಬಾರದೆಂದು ತೀರ್ಮಾನಿಸಿ, ಬೇರೆ ವರನನ್ನ ಹುಡುಕಲು ಮುಂದಾಗಿದ್ದರು. ಆದರೆ, ಈ ನಿರ್ಧಾರಕ್ಕೆ ಶ್ರೀಲೇಖಾ ತೀವ್ರ ವಿರೋಧ ವ್ಯಕ್ತಪಡಿಸಿದ್ದಾಳೆ.
“ನಾನು ಈಗಾಗಲೇ ಆತನನ್ನ ನನ್ನ ಗಂಡನೆಂದು ಮನಸ್ಸಿನಲ್ಲಿ ಒಪ್ಪಿಕೊಂಡಿದ್ದೇನೆ. ಫೋನ್ನಲ್ಲಿ ದಿನಗಟ್ಟಲೆ ಮಾತನಾಡಿ ಆತನಿಗೆ ಮನಸ್ಸು ಕೊಟ್ಟಿದ್ದೇನೆ. ಆತ ಏನು ಕೆಲಸ ಮಾಡುತ್ತಿದ್ದರೂ ಸರಿಯೇ, ನಾನು ಆತನನ್ನೇ ಮದುವೆಯಾಗುತ್ತೇನೆ” ಎಂದು ಪೋಷಕರ ಬಳಿ ಪಟ್ಟು ಹಿಡಿದಿದ್ದಾಳೆ.
ಈ ವಿಚಾರವಾಗಿ ಶ್ರೀಲೇಖಾ ಮತ್ತು ಅವಳ ಪೋಷಕರ ನಡುವೆ ಪ್ರತಿನಿತ್ಯ ಜಗಳ, ವಾಗ್ವಾದಗಳು ನಡೆಯಲು ಶುರುವಾಗಿದ್ದವು.

ಆತ್ಮಹತ್ಯೆ ಶರಣಾದ ಯುವತಿ :
ನಿನ್ನೆ ಬೆಳಿಗ್ಗೆಯೂ ಇದೇ ವಿಚಾರವಾಗಿ ಮನೆಯಲ್ಲಿ ತೀವ್ರ ವಾಗ್ವಾದ ನಡೆದಿದೆ ಎನ್ನಲಾಗಿದೆ. ಇದರಿಂದ ತೀವ್ರ ಮನನೊಂದ ಶ್ರೀಲೇಖಾ, ಅಪ್ಪ ಕುಮಾರ್ ನಡೆಸುತ್ತಿದ್ದ ಕೆಳಮಹಡಿಯ ಸೈಕಲ್ ರಿಪೇರಿ ಅಂಗಡಿಗೆ ತೆರಳಿದ್ದಾಳೆ. ಅಲ್ಲಿಟ್ಟಿದ್ದ ಸೀಮೆಎಣ್ಣೆಯನ್ನ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.
ಬೆಂಕಿಯ ಜ್ವಾಲೆಗೆ ಸಿಲುಕಿ ಶ್ರೀಲೇಖಾ ಕಿರುಚಿಕೊಂಡಿದ್ದಾಳೆ. ಆಕೆಯ ಚೀರಾಟ ಕೇಳಿ ಬೆಚ್ಚಿಬಿದ್ದ ತಂದೆ ಕುಮಾರ್, ತಕ್ಷಣವೇ ಮಗಳನ್ನು ರಕ್ಷಿಸಲು ಓಡಿಬಂದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಬೆಂಕಿ ಇಡೀ ದೇಹವನ್ನು ಆವರಿಸಿತ್ತು. ಮಗಳನ್ನು ರಕ್ಷಿಸುವ ಪ್ರಯತ್ನದಲ್ಲಿ ಕುಮಾರ್ ಅವರಿಗೂ ಸುಟ್ಟಗಾಯಗಳಾಗಿವೆ.
ಆದರೆ, ತೀವ್ರವಾಗಿ ಬೆಂದು ಹೋಗಿದ್ದ ಶ್ರೀಲೇಖಾ ಸ್ಥಳದಲ್ಲಿಯೇ ಶವವಾಗಿ ಬಿದ್ದಿದ್ದಳು. ಗಾಯಗೊಂಡ ಕುಮಾರ್ ಅವರನ್ನ ತಿರುವಾರೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ತಿರುವಾರೂರು ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಲಂಡನ್ ವರ ಎಂದು ಸುಳ್ಳು ಹೇಳಿದರೂ, ಆತನನ್ನೇ ಮದುವೆಯಾಗುವ ಕಠಿಣ ನಿರ್ಧಾರಕ್ಕೆ ಬಂದು ಯುವತಿ ತನ್ನ ಪ್ರಾಣವನ್ನೇ ಕಳೆದುಕೊಂಡಿರುವುದು ಮಾತ್ರ ದುರಂತವೆ ಹೌದು.


