ಕರ್ನಾಟಕ ಸರ್ಕಾರವು ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಳೆ ಪಿಂಚಣಿ ಯೋಜನೆ (OPS) ಅಳವಡಿಸುವ ಕುರಿತು ಮಹತ್ವದ ಆದೇಶ ಹೊರಡಿಸಿದೆ. 2006ರ ಏಪ್ರಿಲ್ 1 ಕ್ಕಿಂತ ಮುಂಚಿತವಾಗಿ ನೇಮಕಾತಿ ಅಧಿಸೂಚನೆ ಹೊರಬಿದ್ದು, ಆ ಬಳಿಕ ಸೇವೆಗೆ ಸೇರಿದ ಸುಮಾರು 3,773 ಪ್ರಾಥಮಿಕ ಶಾಲಾ ಶಿಕ್ಷಕರನ್ನು ಹಳೆ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಸೇರಿಸಲಾಗಿದೆ.ರಾಷ್ಟ್ರೀಯ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ (OPS) ಮರುಜಾರಿಗೊಳಿಸಬೇಕೆಂಬ ಶಿಕ್ಷಕರ ದಶಕಗಳ ಹೋರಾಟಕ್ಕೆ ಕೊನೆಗೂ ದೊಡ್ಡ ಯಶಸ್ಸು ಸಿಕ್ಕಂತಾಗಿದೆ…
ಕರ್ನಾಟಕ ಸರ್ಕಾರವು ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಳೆ ಪಿಂಚಣಿ ಯೋಜನೆ (OPS) ಅಳವಡಿಸುವ ಕುರಿತು ಮಹತ್ವದ ಆದೇಶ.
news.ashwasurya.in
ಅಶ್ವಸೂರ್ಯ/ ಬೆಂಗಳೂರು : ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಳೆ ಪಿಂಚಣಿ ಕುರಿತಂತೆ ಶಿಕ್ಷಣ ಇಲಾಖೆಯು ಭರ್ಜರಿ ಶುಭಸುದ್ದಿ ನೀಡಿದೆ. ಹಾಗಾದ್ರೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸುದೀರ್ಘ ದಿನಗಳ ಬೇಡಿಕೆಗೆ ಕೊನೆಗೂ ಸ್ಪಂದಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು, ಅರ್ಹ ಶಿಕ್ಷಕರನ್ನು ಹಳೆಯ ಡಿಫೈನ್ಡ್ ಪಿಂಚಣಿ ಯೋಜನೆ (OPS) ವ್ಯಾಪ್ತಿಗೆ ತಂದು ಅಧಿಕೃತ ಜ್ಞಾಪನಾ ಪತ್ರ ಹೊರಡಿಸಿದೆ.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್
2005-06 ಹಾಗೂ 2006-07ನೇ ಸಾಲಿನಲ್ಲಿ ಅಂದರೆ ಏಪ್ರಿಲ್ 01, 2006ಕ್ಕಿಂತ ಮುಂಚಿತವಾಗಿ ಹೊರಡಿಸಲಾದ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆಯಾಗಿ, ಆ ದಿನಾಂಕದಂದು ಅಥವಾ ನಂತರದಲ್ಲಿ ಸೇವೆಗೆ ಸೇರಿದ ಪ್ರಾಥಮಿಕ ಶಾಲಾ ಸಹ ಶಿಕ್ಷಕರನ್ನು ಹಳೆಯ ಡಿಫೈನ್ಡ್ ಪಿಂಚಣಿ (OPS) ವ್ಯಾಪ್ತಿಗೆ ತಂದು ಇಲಾಖೆಯ ಆಯುಕ್ತರ ಕಚೇರಿ ಅಧಿಕೃತ ಜ್ಞಾಪನಾ ಪತ್ರ ಹೊರಡಿಸಿದೆ.

ಎಲ್ಲಾ ಜಿಲ್ಲೆಗಳ ಶಿಕ್ಷಕರಿಗೆ ಹಳ ಪಿಂಚಣಿ
ಬೆಂಗಳೂರು, ಮೈಸೂರು, ಧಾರವಾಡ ಮತ್ತು ಕಲಬುರಗಿ ವಿಭಾಗಗಳ ವ್ಯಾಪ್ತಿಯಿಂದ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗಳಿಗೆ ಆರ್ಥಿಕ ಇಲಾಖೆಯು ಸಹಮತಿ ನೀಡಿದೆ. ಇದರ ಅನ್ವಯ 2006ರ ಏಪ್ರಿಲ್ 1ಕ್ಕೂ ಮುನ್ನ ಅಧಿಸೂಚನೆ ಹೊರಬಿದ್ದು, ನಂತರ ಕರ್ತವ್ಯಕ್ಕೆ ಹಾಜರಾದ ರಾಜ್ಯದ ಎಲ್ಲಾ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಹಳೆಯ ಡಿಫೈನ್ಡ್ ಪಿಂಚಣಿ ಸೌಲಭ್ಯ ಅನ್ವಯವಾಗಲಿದೆ.
ಎನ್ಪಿಎಸ್ ಪಿಂಚಣಿ ಸ್ಥಗಿತಗೊಳಿಸಲು ಆದೇಶ
ಇವರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 2-C ಅನ್ವಯ ಆಗುವುದಿಲ್ಲ. ಬದಲಿಗೆ ಸಾಮಾನ್ಯ ಪಿಂಚಣಿಯ ಭಾಗ-IV ಅನ್ವಯವಾಗಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಆದೇಶದ ಹಿನ್ನೆಲೆಯಲ್ಲಿ ಅರ್ಹ ಶಿಕ್ಷಕರಿಗೆ ಎಚ್ಆರ್ಎಂಎಸ್-2.0 ತಂತ್ರಾಂಶದಲ್ಲಿ ಪ್ರತಿ ತಿಂಗಳು ಕಡಿತವಾಗುತ್ತಿದ್ದ ಎನ್ಪಿಎಸ್ ಪಿಂಚಣಿಯನ್ನು ತಕ್ಷಣವೇ ಸ್ಥಗಿತಗೊಳಿಸಲು ಆದೇಶಿಲಾಗಿದೆ.
ಅಷ್ಟೇ ಅಲ್ಲದೆ, ಅವರಿಗೆ ನೂತನ ಜಿಪಿಎಫ್ ಖಾತೆಗಳನ್ನು ಸೃಜಿಸಲು ಹಾಗೂ ಈವರೆಗೆ ಅವರ ಪ್ರಾನ್ ಖಾತೆಯಲ್ಲಿ ಜಮೆಯಾಗಿರುವ ನೌಕರ ಮತ್ತು ಸರ್ಕಾರದ ವಂತಿಕೆಯ ಹಣವನ್ನು ನಿಯಮಾನುಸಾರ ಹಿಂಪಡೆದು ಇತ್ಯರ್ಥಪಡಿಸುವ ಪ್ರಕ್ರಿಯೆಯನ್ನು ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಡಿಡಿಪಿಐ ಹಾಗೂ ಬಿಇಒಗಳಿಗೆ ಶಿಕ್ಷಣ ಇಲಾಖೆಯ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.


