‘ರಿಪ್ಪರ್ ಚಂದ್ರನ್’ : ಮಲೆನಾಡಿನಿಂದ ಕರಾವಳಿವರೆಗೆ ನಡುಗಿಸಿದ್ದ ಸರಣಿ ಹಂತಕನ ಕ್ರೈಮ್ ಇತಿಹಾಸ.!?
news.ashwasurya.in
ಅಶ್ವಸೂರ್ಯ/ ಮಲೆನಾಡು – ದಕ್ಷಿಣಕನ್ನಡ : ಕೊಟ್ಟಿಗೆಹಾರ ಸೇರಿದಂತೆ ಕರ್ನಾಟಕದ ಕರಾವಳಿ ಹಾಗೂ ಕೇರಳದ ಗಡಿ ಭಾಗಗಳಲ್ಲಿ ಒಂದು ಕಾಲದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ್ದ ಸರಣಿ ಹಂತಕ ರಿಪ್ಪರ್ ಚಂದ್ರನ್ ಅಲಿಯಾಸ್ ರಮೇಶ್ ಅಲಿಯಾಸ್ ಸುರೇಂದ್ರನ್ನ ಅಪರಾಧ ಇತಿಹಾಸ ಇಂದಿಗೂ ಭಯಾನಕ ಅಧ್ಯಾಯವಾಗಿ ಉಳಿದಿದೆ.
ಎಂಭತ್ತರ ದಶಕದಲ್ಲಿ ನಡೆದ ಸರಣಿ ಕೊಲೆಗಳು ಹಾಗೂ ದರೋಡೆ ಪ್ರಕರಣಗಳಿಂದಾಗಿ ಕಾಸರಗೋಡು, ಕಣ್ಣೂರು, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಭಾಗಗಳಲ್ಲಿ ಜನರು ಆತಂಕಕ್ಕೆ ಒಳಗಾಗಿದ್ದರು. ರಾತ್ರಿ ವೇಳೆ ಅಪರಿಚಿತ ವ್ಯಕ್ತಿಗಳ ಸಂಚಾರ ಕಂಡುಬಂದರೂ ಜನರು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬಾಲ್ಯದಲ್ಲೇ ಊರು ಬಿಟ್ಟಿದ್ದ ಚಂದ್ರನ್ :
1950ರಲ್ಲಿ ಕಾಸರಗೋಡು ಜಿಲ್ಲೆಯ ಗ್ರಾಮವೊಂದರಲ್ಲಿ ಜನಿಸಿದ್ದ ಚಂದ್ರನ್, ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ. ಸುಮಾರು 14ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹಲವು ಊರುಗಳಲ್ಲಿ ಅಲೆದಾಡುತ್ತಿದ್ದ. 1977ರಲ್ಲಿ ಕಳ್ಳತನ ಪ್ರಕರಣವೊಂದರಲ್ಲಿ ಕಾಸರಗೋಡಿನಲ್ಲಿ ಪೊಲೀಸರ ಕೈಗೆ ಸಿಕ್ಕಿದ್ದ.
ಜೈಲಿನಿಂದ ಬಿಡುಗಡೆಯಾದ ಬಳಿಕ ಆತನ ಅಪರಾಧ ಚಟುವಟಿಕೆಗಳು ಮತ್ತಷ್ಟು ವಿಸ್ತರಿಸಿದವು. ಕೇರಳದ ವಿವಿಧ ಭಾಗಗಳ ಜೊತೆಗೆ ಕರ್ನಾಟಕದ ಗಡಿ ಪ್ರದೇಶಗಳಲ್ಲಿಯೂ ಕೊಲೆ ಹಾಗೂ ದರೋಡೆ ಪ್ರಕರಣಗಳು ನಡೆದವು.

ರಾತ್ರಿ ವೇಳೆ ಮನೆಗಳೇ ಗುರಿ :
ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳ ಬದಿಯಲ್ಲಿದ್ದ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಮನೆಯವರು ನಿದ್ರಿಸುತ್ತಿರುವ ವೇಳೆ ದಾಳಿ ನಡೆಸಿ, ಅಮಾಯಕರ ಮೇಲೆ ಹಲ್ಲೆ ಮಾಡಿ ಕೊಲೆಗೈದು ನಂತರ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ.
ಮಂಜೇಶ್ವರದಲ್ಲಿ ಒಂದೇ ಕುಟುಂಬದ ಮೂವರನ್ನು ಹತ್ಯೆ ಮಾಡಿ ದರೋಡೆ ನಡೆಸಿದ ಪ್ರಕರಣವೂ ಆತನ ವಿರುದ್ಧದ ಪ್ರಮುಖ ಪ್ರಕರಣಗಳಲ್ಲಿ ಒಂದಾಗಿತ್ತು. ಬಳಿಕ ಕೇರಳ ಮತ್ತು ಕರ್ನಾಟಕದ ಹಲವು ಪ್ರದೇಶಗಳಲ್ಲಿ ನಡೆದ ಅಪರಾಧ ಪ್ರಕರಣಗಳ ತನಿಖೆಯಲ್ಲಿ ಚಂದ್ರನ್ನ ಹೆಸರು ಮುನ್ನೆಲೆಗೆ ಬಂದಿತ್ತು.
ಬೆರಳಚ್ಚು ಕೊಟ್ಟ ಮಹತ್ವದ ಸುಳಿವು
ಸರಣಿ ಕೊಲೆಗಳು ನಡೆದರೂ ಆರಂಭಿಕ ಹಂತದಲ್ಲಿ ಪೊಲೀಸರಿಗೆ ಆರೋಪಿಯ ಬಗ್ಗೆ ಸ್ಪಷ್ಟ ಸುಳಿವು ದೊರೆಯಲಿಲ್ಲ. ಕಾಸರಗೋಡಿನ ಪೊಲೀಸ್ ಅಧಿಕಾರಿಗಳು ಹಲವು ಪ್ರಕರಣಗಳನ್ನು ಒಟ್ಟುಗೂಡಿಸಿ ತನಿಖೆ ನಡೆಸುತ್ತಿದ್ದರು.
ಉಪ್ಪಳದ ಕೊಲೆ ಪ್ರಕರಣವೊಂದರಲ್ಲಿ ಸ್ಥಳದಲ್ಲಿ ದೊರೆತ ಬೆರಳಚ್ಚು ತನಿಖೆಗೆ ಮಹತ್ವದ ತಿರುವು ನೀಡಿತು. ಆ ಬೆರಳಚ್ಚನ್ನು ಹಿಂದಿನ ಕಳ್ಳತನ ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಸುರೇಂದ್ರನ್ ಎಂಬಾತನ ಬೆರಳಚ್ಚಿನೊಂದಿಗೆ ಹೋಲಿಸಿದಾಗ ಸಾಮ್ಯತೆ ಕಂಡುಬಂದಿತು. ಇದರಿಂದ ತನಿಖೆ ಮತ್ತಷ್ಟು ವೇಗ ಪಡೆದುಕೊಂಡಿತು.

ಕೊಟ್ಟಿಗೆಹಾರದಲ್ಲಿ ಬಂಧನ :
ತನಿಖೆ ಮುಂದುವರಿದಂತೆ ಪೊಲೀಸರು ಚಂದ್ರನ್ನ ಚಲನವಲನದ ಬಗ್ಗೆ ಮಾಹಿತಿ ಕಲೆಹಾಕಿದರು. ಅಂತಿಮವಾಗಿ ಮುಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಆತ ಪೊಲೀಸರ ಬಲೆಗೆ ಬಿದ್ದ.
ಕೊಟ್ಟಿಗೆಹಾರದಲ್ಲಿ ‘ರಮೇಶ್’ ಎಂಬ ಹೆಸರಿನಲ್ಲಿ ಧಾರ್ಮಿಕ ವ್ಯಕ್ತಿಯಂತೆ ವೇಷ ಧರಿಸಿ ವಾಸಿಸುತ್ತಿದ್ದ ಎನ್ನಲಾಗಿತ್ತು. ಸ್ಥಳೀಯರಿಗೆ ಅನುಮಾನ ಬಾರದಂತೆ ಜೀವನ ನಡೆಸುತ್ತಿದ್ದ ಆತನ ನಿಜವಾದ ಗುರುತು ಪೊಲೀಸರ ತನಿಖೆಯಿಂದ ಬಹಿರಂಗವಾಯಿತು.
ಚಂದ್ರನ್ನ ಬಂಧನದ ಸುದ್ದಿ ಹೊರಬಿದ್ದ ಬಳಿಕ ಹಲವು ವರ್ಷಗಳಿಂದ ಭೀತಿಯಲ್ಲಿ ಬದುಕುತ್ತಿದ್ದ ಕರಾವಳಿ ಭಾಗದ ಜನರಲ್ಲಿ ನೆಮ್ಮದಿ ಮೂಡಿತ್ತು. ಅಂದಿನ ಗೃಹ ಸಚಿವರಾಗಿದ್ದ ರಾಚಯ್ಯ ಅವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರಿಗೆ ₹1 ಲಕ್ಷ ಬಹುಮಾನ ಘೋಷಿಸಿದ್ದರು ಎನ್ನಲಾಗಿದೆ.
ಸಕರಣಗಳಲ್ಲಿ ನ್ಯಾಯಾಲಯದ ವಿಚಾರಣೆ ನಡೆದ ಬಳಿಕ ಚಂದ್ರನ್ಗೆ ಮರಣದಂಡನೆ ವಿಧಿಸಲಾಯಿತು. ಹಲವು ವರ್ಷಗಳ ಕಾಲ ಕೇರಳ ಮತ್ತು ಕರ್ನಾಟಕದ ವಿವಿಧ ಭಾಗಗಳಲ್ಲಿ ಜನರನ್ನು ಬೆಚ್ಚಿಬೀಳಿಸಿದ್ದ ಈ ಸರಣಿ ಹಂತಕನ ಅಪರಾಧ ಅಧ್ಯಾಯಕ್ಕೆ ಅಂತಿಮವಾಗಿ ತೆರೆ ಬಿದ್ದಿತು.
1991ರ ಜುಲೈ 6ರಂದು ರಿಪ್ಪರ್ ಚಂದ್ರನ್ ಅಲಿಯಾಸ್ ರಮೇಶ್ ಅಲಿಯಾಸ್ ಸುರೇಂದ್ರನ್ನನ್ನು ಗಲ್ಲಿಗೇರಿಸಲಾಯಿತು.
ಒಂದು ಕಾಲದಲ್ಲಿ ಸಂಜೆಯಾಗುತ್ತಿದ್ದಂತೆ ಬಾಗಿಲು ಹಾಕಿಕೊಂಡು ಮನೆಯಿಂದ ಹೊರಬರಲು ಜನರು ಹೆದರುವಂತೆ ಮಾಡಿದ್ದ ರಿಪ್ಪರ್ ಚಂದ್ರನ್ನ ಕಥೆ, ಕೊಟ್ಟಿಗೆಹಾರ ಮತ್ತು ಕರಾವಳಿ ಭಾಗದ ಅಪರಾಧ ಇತಿಹಾಸದಲ್ಲಿ ಇಂದಿಗೂ ಮರೆಯಲಾಗದ ಕರಾಳ ಅಧ್ಯಾಯವಾಗಿದೆ.

