ಮರಳು ದಂಧೆ ಕೋರರ ಹೆಡೆಮುರಿ ಕಟ್ಟಲು ಸರ್ಕಾರದ ಖಡಕ್ ನಿರ್ಧಾರ.! ಗೂಂಡಾ ಕಾಯ್ದೆ ಅಸ್ತ್ರ ಪ್ರಯೋಗಕ್ಕೆ ಮುಂದು, ಕಣ್ಮುಚ್ಚಿ ಕೂರುವ ಪೊಲೀಸರಿಗೂ ಬಿಸಿ ತಟ್ಟಲಿದೆ.!
news.ashwasurya.in
ಅಶ್ವಸೂರ್ಯ/ಬೆಂಗಳೂರು : ರಾಜ್ಯಾಂತರ ಗಡಿಗಳು ಹಾಗೂ ಗಡಿ ಭಾಗಗಳಲ್ಲಿ ನಡೆಯುವ ಅಕ್ರಮ ಮರಳು ಸಾಗಣೆಯನ್ನು ತಡೆಯಲು ಗಣಿ ಮತ್ತು ಭೂವಿಜ್ಞಾನ, ಕಂದಾಯ ಹಾಗೂ ಅರಣ್ಯ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ, ಸಂಗ್ರಹಣೆ ಮತ್ತು ಸಾಗಣೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರ್ದೇಶನದ ಮೇರೆಗೆ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾ ಪರಿಶೀಲಕ (ಡಿಜಿ & ಐಜಿಪಿ) ಎಂ.ಎ. ಸಲೀಂ ಅವರು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ.
ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಣೆ ಕೇವಲ ರಾಜ್ಯದ ನೈಸರ್ಗಿಕ ಸಂಪತ್ತಿನ ಲೂಟಿಯಷ್ಟೇ ಅಲ್ಲ, ಅದು ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಗಂಭೀರ ಸವಾಲು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುತ್ತೋಲೆಯ ಪ್ರಕಾರ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಕಾರ್ಯಪಡೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಅಕ್ರಮ ಮರಳು ಗಣಿಗಾರಿಕೆ ನಡೆಯುವ ಪ್ರದೇಶಗಳನ್ನು ಗುರುತಿಸುವುದು, ನಿರಂತರ ನಿಗಾ ವಹಿಸುವುದು, ಅಕ್ರಮ ಸಾಗಣೆ ಹಾಗೂ ಸಂಗ್ರಹಣೆ ತಡೆಯುವುದು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವ ಜವಾಬ್ದಾರಿ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳದ್ದೇ ಆಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ರಾಜ್ಯಾಂತರ ಗಡಿಗಳು ಹಾಗೂ ಗಡಿ ಭಾಗಗಳಲ್ಲಿ ನಡೆಯುವ ಅಕ್ರಮ ಮರಳು ಸಾಗಣೆಯನ್ನು ತಡೆಯಲು ಗಣಿ ಮತ್ತು ಭೂವಿಜ್ಞಾನ, ಕಂದಾಯ ಹಾಗೂ ಅರಣ್ಯ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.

