ಜಿಂಬಾಬ್ವೆ : ವೈಭವ್ ಆರ್ಭಟ ಜಿಂಬಾಬ್ವೆ ದೂಳಿಪಟ.! ದಾಖಲೆ ನಿರ್ಮಿಸಿದ ಸೂರ್ಯವಂಶಿ.
news.ashwasurya.in
ಅಶ್ವಸೂರ್ಯ/ಜಿಂಬಾಬ್ವೆ : ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯನ್ನು ಭಾರತ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. 15 ವರ್ಷದ ವೈಭವ್ ಸೂರ್ಯವಂಶಿ ಎರಡು ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದು, ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು. ತಮ್ಮ ಯಶಸ್ಸಿನ ಶ್ರೇಯವನ್ನು ಕೋಚ್ ವಿವಿಎಸ್ ಲಕ್ಷ್ಮಣ್ ಮತ್ತು ಹೃಷಿಕೇಶ್ ಕನೇಟ್ಕರ್ ಅವರಿಗೆ ನೀಡಿದ್ದಾರೆ.
ಜಿಂಬಾಬ್ವೆ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ 35 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿ ಇತಿಹಾಸ ಬರೆದಿದೆ. ಮೊದಲು ಬ್ಯಾಟಿಂಗ್ ನಡೆಸಿ ಭಾರತ ನೀಡಿದ್ದ 193 ರನ್‌ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆ ಪಡೆ ನಿಗದಿತ 20 ಓವರ್‌ಗಳಲ್ಲಿ 157/7 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಮಾಯಾಂಕ್ ಯಾದವ್ 3 ವಿಕೆಟ್ ಕಬಳಿಸಿದರೆ, ಯಶ್ ಠಾಕೂರ್ 2, ಅಶೋಕ್ ಶರ್ಮಾ ಮತ್ತು ರವಿ ಬಿಷ್ಣೋಯ್ ತಲಾ 1 ವಿಕೆಟ್ ಪಡೆದು ಮಿಂಚಿದರು. ಆದರೆ, ಇಡೀ ಪಂದ್ಯ ಹಾಗೂ ಸರಣಿಯ ನಿಜವಾದ ಶಕ್ತಿ ಎನಿಸಿದ್ದು 15 ವರ್ಷದ ‘ವಂಡರ್ ಕಿಡ್’ ವೈಭವ್ ಸೂರ್ಯವಂಶಿ.

149 ವರ್ಷಗಳ ಇತಿಹಾಸ ತಿರುಚಿ ಬರೆದ ಸೂರ್ಯವಂಶಿ:
ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡಿದ ವೈಭವ್ ಸೂರ್ಯವಂಶಿ ಕೇವಲ 49 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 81 ರನ್ ಬಾರಿಸಿ ಪಂದ್ಯದ ಗೆಲುವಿನ ರೂವಾರಿಯಾದರು. ಇಶಾನ್ ಕಿಶನ್ (29), ಶ್ರೇಯಸ್ ಅಯ್ಯರ್ (27) ಮತ್ತು ರಿಂಕು ಸಿಂಗ್ (25) ಸಾಥ್ ನೀಡಿದರು. ಮೊದಲ ಟಿ20 ಪಂದ್ಯದಲ್ಲಿಯೂ ಕೇವಲ 19 ಎಸೆತಗಳಲ್ಲಿ ಫಿಫ್ಟಿ ಸಿಡಿಸಿದ್ದ ವೈಭವ್, ಈ ಪಂದ್ಯದಲ್ಲೂ ಅರ್ಧಶತಕ ಬಾರಿಸುವ ಮೂಲಕ ‘ಪಂದ್ಯಶ್ರೇಷ್ಠ ಹಾಗೂ’ಸರಣಿಶ್ರೇಷ್ಠ’ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ಇದರೊಂದಿಗೆ, ಅಂತರರಾಷ್ಟ್ರೀಯ ಕ್ರಿಕೆಟ್‌ನ 149 ವರ್ಷಗಳ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ (15ನೇ ವಯಸ್ಸಿನಲ್ಲಿ) 2 ಅರ್ಧಶತಕಗಳನ್ನು ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಐತಿಹಾಸಿಕ ದಾಖಲೆಯನ್ನು ವೈಭವ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಯಾರ ಹೆಸರು ಹೇಳಿದ್ದು ವೈಭವ್!

ವಿಶ್ವ ದಾಖಲೆ ಸೃಷ್ಟಿಸಿದ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವೈಭವ್ ಸೂರ್ಯವಂಶಿ ಆಡಿದ ಮಾತುಗಳು ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಭಾರತೀಯ ಕ್ರಿಕೆಟ್‌ನಲ್ಲಿ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಪ್ರಭಾವ ಮತ್ತು ಶಿಸ್ತು ಎಷ್ಟಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಈ ಐತಿಹಾಸಿಕ ಯಶಸ್ಸಿನ ಸೀಕ್ರೆಟ್ ಕ್ರೆಡಿಟ್ ನೀಡುವಾಗ ವೈಭವ್ ಪರ್ಸನ್ಸ್’ ಹೆಸರನ್ನು ಬಹಿರಂಗಪಡಿಸಿದ್ದಾರೆ!
ಸೂರ್ಯವಂಶಿ ಹೇಳಿದ್ದೇನು?
ಪಂದ್ಯದ ನಂತರ ಮಾತನಾಡಿದ ವೈಭವ್, ನನಗೆ ತುಂಬಾ ಸಂತೋಷವಾಗುತ್ತಿದೆ. ನಾವು ಸರಣಿಗೂ ಮುನ್ನವೇ ಉತ್ತಮ ತರಬೇತಿ ನಡೆಸಿದ್ದೆವು. ಹಿಂದೆ ಇಲ್ಲಿ ಅಂಡರ್-19 ವಿಶ್ವಕಪ್ ಆಡಿದ ಅನುಭವ ನನಗಿತ್ತು. ನನ್ನ ಈ ಯಶಸ್ಸಿಗೆ ಹಾಗೂ ಬ್ಯಾಟಿಂಗ್ ಫಾರ್ಮ್‌ಗೆ ಮುಖ್ಯ ಕಾರಣ ಮುಖ್ಯ ಕೋಚ್ ವಿವಿಎಸ್ ಲಕ್ಷ್ಮಣ್ಹಾಗೂ ಬ್ಯಾಟಿಂಗ್ ಕೋಚ್ ಹೃಷಿಕೇಶ್ ಕನೇಟ್ಕರ್ ಅವರು ನೀಡಿದ ಬೆಂಬಲ! ಮೈದಾನದಲ್ಲಿ ಮತ್ತು ನೆಟ್ಸ್ ಅಭ್ಯಾಸದಲ್ಲಿ ಅವರು ನನ್ನಲ್ಲಿದ್ದ ಸಾಮರ್ಥ್ಯವನ್ನು ಹೊರತಂದರು. ನನ್ನ ಮೊದಲ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿ ಲಭಿಸಿರುವುದು ಕನಸು ನನಸಾದಂತೆ ಭಾಸವಾಗುತ್ತಿದೆ” ಎಂದು ವಿವಿಎಸ್ ಲಕ್ಷ್ಮಣ್ ಮತ್ತು ಕನೇಟ್ಕರ್ ಅವರನ್ನು ಮುಕ್ತಕಂಠದಿಂದ ಹೊಗಳಿದರು.

ಗೌತಿ ಗೈರುಹಾಜರಿ ಮತ್ತು ಲಕ್ಷ್ಮಣ್ ಗೈಡೆನ್ಸ್!
ವಾಸ್ತವವಾಗಿ ಈ ಜಿಂಬಾಬ್ವೆ ಪ್ರವಾಸದ ಸಮಯದಲ್ಲಿ ಗೌತಮ್ ಗಂಭೀರ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ವಿವಿಎಸ್ ಲಕ್ಷ್ಮಣ್ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ, ಹೃಷಿಕೇಶ್ ಕನೇಟ್ಕರ್ ಬ್ಯಾಟಿಂಗ್ ಕೋಚ್ ಹಾಗೂ ಸುನಿಲ್ ಜೋಶಿ ಬೌಲಿಂಗ್ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಗಂಭೀರ್ ಕೋಚಿಂಗ್ ಸ್ಟಾಫ್ ಹೊರತಾಗಿಯೂ, ಲಕ್ಷ್ಮಣ್ ಗೈಡೆನ್ಸ್‌ನಲ್ಲಿ ವೈಭವ್ ತೋರಿದ ಈ ಧಮಾಕಾ ಪ್ರದರ್ಶನವನ್ನು ಕಂಡು ಸ್ವತಃ ಗೌತಿ ಕೂಡ ಆಶ್ಚರ್ಯಚಕಿತರಾಗಿದ್ದಾರೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟೀಮ್ ಇಂಡಿಯಾಗೆ ಲಭಿಸಿದ ಮೊದಲ ಸರಣಿ ಗೆಲುವು ಇದಾಗಿದೆ. ಇದಕ್ಕೂ ಮುನ್ನ ಭಾರತ ತಂಡವು ಐರ್ಲೆಂಡ್‌ನಲ್ಲಿ 2-0 ಮತ್ತು ಇಂಗ್ಲೆಂಡ್‌ನಲ್ಲಿ 4-0 ಅಂತರದಲ್ಲಿ ಮುಖಭಂಗ ಅನುಭವಿಸಿತ್ತು. ಆದರೆ ವೈಭವ್ ಸೂರ್ಯವಂಶಿ ಎಂಬ ಕಿರಿಯ ವಂಡರ್ ಕಿಡ್‌ನ ವಿಧ್ವಂಸಕ ಆಟ ಭಾರತೀಯ ಕ್ರಿಕೆಟ್‌ಗೆ ಹೊಸ ಆಶಾದಾಯಕ ದಾರಿಯನ್ನು ತೋರಿಸಿದೆ.


