ಕೊಡಗಿನಲ್ಲಿ ಕಾಡಾನೆ ದಾಳಿಗೆ ಐಜಿಪಿ ಸುನೀಲ್ ಅಚ್ಚಯ್ಯ ಪತ್ನಿ ಸಂಧ್ಯಾ ಬಲಿ.!!

ಅಶ್ವಸೂರ್ಯ/ಕೊಡಗು : ಕೊಡಗು ಜಿಲ್ಲೆಯ ಪೊನ್ನಂಪೇಟೆ ಬಳಿಯ ತೋಟವೊಂದರಲ್ಲಿ ನಡೆದ ಕಾಡಾನೆ ದಾಳಿಯಲ್ಲಿ ಕೇಂದ್ರ ಸರ್ಕಾರದ RAW ಐಜಿ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ ಅಚ್ಚಯ್ಯ ಮೃತಪಟ್ಟಿದ್ದಾರೆ. ಸಂಬಂಧಿಕರ ಮನೆಯ ಕಾರ್ಯಕ್ರಮ ಮುಗಿಸಿ ತೋಟಕ್ಕೆ ಭೇಟಿ ನೀಡಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಿತಿಮತಿ ಸಮೀಪದ ಕೊಣನಕಟ್ಟೆ ಗ್ರಾಮದ ತೋಟವೊಂದರಲ್ಲಿ ಶುಕ್ರವಾರ ನಡೆದ ಭೀಕರ ಆನೆ ದಾಳಿಗೆ ಹಿರಿಯ ಐಪಿಎಸ್ (IPS) ಅಧಿಕಾರಿ ಹಾಗೂ ಕೇಂದ್ರ ಸರ್ಕಾರ RAW ಐಜಿ ಆಗಿರುವ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ ಅಚ್ಚಯ್ಯ (51) ಅವರು ಬಲಿಯಾಗಿದ್ದಾರೆ.
ಪೊಲೀಸ್ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಸಂಧ್ಯಾ ಅಚ್ಚಯ್ಯ ಅವರು ಸಂಬಂಧಿಕರ ಮನೆಯಲ್ಲಿ ನಡೆದಿದ್ದ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಅವರು ಇತರ ನಾಲ್ವರೊಂದಿಗೆ ಸೇರಿ ಒಟ್ಟು ಐದು ಜನರ ಗುಂಪಿನಲ್ಲಿ ಸ್ಥಳೀಯ ತೋಟವೊಂದಕ್ಕೆ ಭೇಟಿ ನೀಡಿದ್ದರು. ಈ ವೇಳೆ ತೋಟದಲ್ಲಿದ್ದ ಒಂಟಿ ಆನೆಯೊಂದು ಏಕಾಏಕಿ ಇವರ ಗುಂಪಿನತ್ತ ನುಗ್ಗಿ ಭೀಕರವಾಗಿ ದಾಳಿ ನಡೆಸಿದೆ.

ಆನೆ ತಾವಿದ್ದ ಜಾಗಕ್ಕೆ ನುಗ್ಗುತ್ತಿದ್ದಂತೆ ಆತಂಕಗೊಂಡ ಉಳಿದ ನಾಲ್ವರು ನಿವಾಸಿಗಳು ಅಲ್ಲಿಂದ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ದುರದೃಷ್ಟವಶಾತ್ ಸಂಧ್ಯಾ ಅಚ್ಚಯ್ಯ ಅವರು ಆನೆಗೆ ಸಿಲುಕಿಕೊಂಡಿದ್ದಾರೆ. ಆನೆಯ ಭೀಕರ ದಾಳಿಯಿಂದಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ದಾಳಿಯ ಬೆನ್ನಲ್ಲೇ ತೀವ್ರವಾಗಿ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಯಿತಾದರೂ, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಡಾನೆಗಳ ಹಾವಳಿಗೆ ಹಿರಿಯ ಅಧಿಕಾರಿಯ ಪತ್ನಿಯೇ ಬಲಿಯಾಗಿರುವುದು ಸ್ಥಳೀಯವಾಗಿ ಭಾರಿ ಆತಂಕ ಮೂಡಿಸಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಪೊನ್ನಣ್ಣ
ಕೊಡಗಿನಲ್ಲಿ ಕಾಡಾನೆ ದಾಳಿಗೆ ಹಿರಿಯ ಐಪಿಎಸ್ ಅಧಿಕಾರಿ ಪತ್ನಿ ಸಾವು ಕಂಡ ಬೆನ್ನಲ್ಲಿಯೇ, ಗೋಣಿಕೊಪ್ಪದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ವಿರಾಜಪೇಟೆ ಶಾಸಕ ಪೊನ್ನಣ್ಣ ಮೃತ ಸಂಧ್ಯಾ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.ಈ ವೇಳೆ ಕಾಡಾನೆ ದಾಳಿಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ್ದಾರೆ.
ಕೊಡಗು ಮೂಲದ ಎಎಸ್‌ ಅಚ್ಚಯ್ಯ
ದಕ್ಷಿಣ ಕೊಡಗಿನ ಪರಕಟಕೇರಿ ಗ್ರಾಮದವರಾದ ಸುನಿಲ್ ಅಚ್ಚಯ್ಯ ಅವರು ದೆಹಲಿಯಲ್ಲಿ ಕೇಂದ್ರ ಸರಕಾರದ RAW ಐಜಿಯಾಗಿ ಕೆಲಸ ಮಾಡುತ್ತಿದ್ದಾರೆ. ಸುನಿಲ್ ಅವರು ಅಚ್ಚಯ್ಯ ಅವರ ಪುತ್ರರಾಗಿದ್ದು ತಾಯಿ ಬೆಲ್ಲ(ತಾಮನೆ ಅಮ್ಮಣಕುಟ್ಟಂಡ),ಪತ್ನಿ ಸಂಧ್ಯಾ(ತಾಮನೆ ಮಂಡೇಪಂಡ),ಇಬ್ಬರು ಮಕ್ಕಳೊಂದಿಗೆ ದೆಹಲಿಯಲ್ಲಿ ನೆಲೆಸಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!