
ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್, ತಲೆ ಬಾಗಿದ ಕ್ರಿಕೆಟ್ ದೇವರು ಸಚಿನ್.!
news.ashwasurya.in
ಅಶ್ವಸೂರ್ಯ/ನವದೆಹಲಿ : ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ಗೆ ಸಚಿನ್ ತೆಂಡೂಲ್ಕರ್ ಫಿದಾ ಆಗಿದ್ದಾರೆ! ಎಸ್ಆರ್ಎಚ್ ವಿರುದ್ಧದ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಮತ್ತೊಮ್ಮೆ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಕೇವಲ 29 ಎಸೆತಗಳಲ್ಲಿ 12 ಸಿಕ್ಸರ್ ಹಾಗೂ ಐದು ಬೌಂಡರಿಗಳ ನೆರವಿನಿಂದ 97 ರನ್ ಸಿಡಿಸಿದ ಅವರು, ಮೊದಲ ಎಂಟು ಓವರ್ಗಳಲ್ಲೇ ಪಂದ್ಯವನ್ನು ರೋಚಕಗೊಳಿಸಿದರು.
15 ವರ್ಷದ ಈ ಯುವ ಪ್ರತಿಭೆಯ ಅಬ್ಬರದ ಆಟಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಕಾಲಿನ ಭಾಗವನ್ನು ಗುರಿಯಾಗಿಸಿಕೊಂಡು ಬರುವ ಎಸೆತಗಳನ್ನು ಎದುರಿಸುವ ವೇಳೆ ಸೂರ್ಯವಂಶಿ ತಮ್ಮ ಮುಂದಿನ ಪಾದವನ್ನು ಅತ್ಯಂತ ಚತುರವಾಗಿ ಬಳಸಿಕೊಳ್ಳುತ್ತಿರುವ ಶೈಲಿಯನ್ನು ಸಚಿನ್ ಶ್ಲಾಘಿಸಿದ್ದಾರೆ.

“ವೈಭವ್ ಸೂರ್ಯವಂಶಿಯವರ ಬ್ಯಾಟ್ ಬೀಸುವ ಶೈಲಿ ಅದ್ಭುತ. ಅದಕ್ಕಿಂತಲೂ ಅವರು ಮುಂದಿನ ಪಾದವನ್ನು ಸುಂದರವಾಗಿ ಕ್ಲಿಯರ್ ಮಾಡಿಕೊಂಡು ತಮ್ಮದೇ ರೀತಿಯಲ್ಲಿ ಮುಕ್ತವಾಗಿ ಬ್ಯಾಟಿಂಗ್ ಮಾಡುವುದೇ ಹೆಚ್ಚು ಗಮನ ಸೆಳೆಯುತ್ತದೆ. ಈ ಇನಿಂಗ್ಸ್ ಅದ್ಭುತಕ್ಕಿಂತ ಕಡಿಮೆಯೇನೂ ಅಲ್ಲ” ಎಂದು ಸಚಿನ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಇದೇ ವೇಳೆ, ಒಂದೇ ಐಪಿಎಲ್ ಆವೃತ್ತಿಯಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ್ದ ಕ್ರಿಸ್ ಗೇಲ್ ಅವರ 59 ಸಿಕ್ಸರ್ಗಳ ದಾಖಲೆಯನ್ನೂ ಸೂರ್ಯವಂಶಿ ಮುರಿದಿದ್ದಾರೆ. ಪ್ರಸಕ್ತ ಸೀಸನ್ನಲ್ಲಿ ಅವರು ಈಗಾಗಲೇ 65 ಸಿಕ್ಸರ್ ಸಿಡಿಸಿದ್ದಾರೆ.
ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕೂಡ ಸೂರ್ಯವಂಶಿಯವರ ಆಟವನ್ನು ಕೊಂಡಾಡಿದ್ದು, “ಇದು ಪವಾಡವೆ ಹೌದು.! ಭವಿಷ್ಯದ ಸೂಪರ್ಸ್ಟಾರ್” ಎಂದು ಅಭಿಪ್ರಾಯಪಟ್ಟಿದ್ದಾರೆ.


