
ಪಂಜಾಬಿ ಪ್ರಸಿದ್ಧ ಗಾಯಕಿಯ ಭೀಕರ ಹತ್ಯೆ.! ಕಾಲುವೆಯಲ್ಲಿ ಶವ ಪತ್ತೆ.? ಕೆನಡಾದಿಂದ ಬಂದು ಕೊಲೆ ಮಾಡಿದ ಪ್ರೇಮಿ.!
ಹೌದು, ಇತ್ತೀಚೆಗೆ ಪಂಜಾಬ್ನ ಲುಧಿಯಾನದಲ್ಲಿ ನಡೆದ ಈ ಭೀಕರ ಘಟನೆ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ. ವಿವಾಹಕ್ಕೆ ನಿರಾಕರಿಸಿದ ಕಾರಣಕ್ಕೆ ಖ್ಯಾತ ಪಂಜಾಬಿ ಗಾಯಕಿ ಹಾಗೂ ಮೇಕ್ಅಪ್ ಕಲಾವಿದೆ ಇಂದರ್ ಕೌರ್ (ಅಲಿಯಾಸ್ ಯಶಿಂದರ್ ಕೌರ್) ಅವರನ್ನು ಕೆನಡಾದಿಂದ ಬಂದ ಆಕೆಯ ಪ್ರೇಮಿ ಬರ್ಬರವಾಗಿ ಕೊಲೆ ಮಾಡಿದ್ದಾನೆ…

news.ashwasurya.in
ಅಶ್ವಸೂರ್ಯ/ ಲುಧಿಯಾನ : ಪಂಜಾಬಿ ಸಂಗೀತ ಲೋಕದ ಉದಯೋನ್ಮುಖ ಹೆಸರಾಂತ ಗಾಯಕಿ ಇಂದರ್ ಕೌರ್ ಉರ್ಫ್ ಯಶಿಂದರ್ ಕೌರ್ ಅವರನ್ನು ಬಂದೂಕು ತೋರಿಸಿ ಅಪಹರಿಸಿ, ಭೀಕರವಾಗಿ ಕೊಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅಪಹರಣಕ್ಕೊಳಗಾದ ಆರು ದಿನಗಳ ಬಳಿಕ ಲುಧಿಯಾನದ ನೀಲನ್ (ನೀಲೋ) ಕಾಲುವೆಯಲ್ಲಿ ಗಾಯಕಿಯ ಶವ ಪತ್ತೆಯಾಗಿದೆ. ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಕೆನಡಾದಿಂದ ಬಂದಿದ್ದ ಅನಿವಾಸಿ ಭಾರತೀಯನೊಬ್ಬ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಮೃತರ ಸಹೋದರ ಜೋತಿಂದರ್ ಸಿಂಗ್ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಮೇ 13 ರ ಸಂಜೆ ಸುಮಾರು 8:30 ರ ವೇಳೆಗೆ ಇಂದರ್ ಕೌರ್ ಅವರು ದಿನಸಿ ಸಾಮಗ್ರಿಗಳನ್ನು ಖರೀದಿಸಲು ತಮ್ಮ ಫೋರ್ಡ್ ಫಿಗೊ ಕಾರಿನಲ್ಲಿ ಮನೆಯಿಂದ ಹೊರಟಿದ್ದರು. ಆದರೆ ತಡ ರಾತ್ರಿಯಾದರೂ ಅವರು ಮನೆಗೆ ಮರಳಿ ಬಂದಿರಲಿಲ್ಲ. ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ಆರಂಭಿಸಿದಾಗ ಅಪಹರಣದ ಶಂಕೆ ವ್ಯಕ್ತವಾಗಿದೆ.

ಇಂದರ್ ಕೌರ್ ಅವರನ್ನು ಬಲವಂತವಾಗಿ ಮದುವೆಯಾಗಲು ಬಯಸಿದ್ದ ಭಾಲೂರ್ ನಿವಾಸಿ ಸುಖ್ವಿಂದರ್ ಸಿಂಗ್ ಎಂಬಾತನ ಮೇಲೆ ಕುಟುಂಬಸ್ಥರು ನೇರ ಅನುಮಾನ ವ್ಯಕ್ತಪಡಿಸಿದ್ದಾರೆ. ಇಂದರ್ ಆತನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಳು. ಇದೇ ದ್ವೇಷದಿಂದಾಗಿ ಕೆನಡಾದಲ್ಲಿದ್ದ ಸುಖ್ವಿಂದರ್ ಸಿಂಗ್, ಕೇವಲ ಇಂದರ್ ಕೌರ್ ತನಗೆ ದಕ್ಕಬೇಕೆಂಬ ಏಕೈಕ ಉದ್ದೇಶದಿಂದ ಪಂಜಾಬ್ಗೆ ಬಂದಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೇ 13 ರಂದು ತನ್ನ ಸಹಚರರೊಂದಿಗೆ ಸೇರಿ ಇಂದರ್ ಕಾರನ್ನು ತಡೆದ ಸುಖ್ವಿಂದರ್, ಬಂದೂಕು ತೋರಿಸಿ ಆಕೆಯನ್ನು ಅಪಹರಿಸಿದ್ದಾನೆ. ಬಳಿಕ ಆಕೆಯನ್ನು ಕೊಲೆ ಮಾಡಿ, ದೇಹವನ್ನು ನೀಲೋ ಕಾಲುವೆಗೆ ಎಸೆದು ತಕ್ಷಣವೇ ಕೆನಡಾಕ್ಕೆ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸದ್ಯ ಕಾಲುವೆಯಿಂದ ಹೊರತೆಗೆಯಲಾದ ಶವವನ್ನು ಕುಟುಂಬಸ್ಥರು ಗುರುತಿಸಿದ್ದು, ಸಮ್ರಾಲಾ ಸಿವಿಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಮೇ 15 ರಂದೇ ಮುಖ್ಯ ಆರೋಪಿ ಸುಖ್ವಿಂದರ್ ಸಿಂಗ್ ಮತ್ತು ಆತನ ಸಹಚರ ಕರಮ್ಜಿತ್ ಸಿಂಗ್ ವಿರುದ್ಧ ಎಫ್ಐಆರ್ (FIR) ದಾಖಲಾಗಿದ್ದರೂ, ಪೊಲೀಸರು ತಕ್ಷಣ ಕ್ರಮ ಕೈಗೊಳ್ಳದ ಕಾರಣ ಆರೋಪಿ ದೇಶ ಬಿಟ್ಟು ಓಡಿಹೋಗಲು ಸಾಧ್ಯವಾಯಿತು ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಜಮಾಲ್ಪುರ ಪೊಲೀಸ್ ಠಾಣೆಯ ಎಸ್ಎಚ್ಒ (SHO) ಬಲ್ಬೀರ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ತೀವ್ರ ಶೋಧ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ. ಇಂದರ್ ಕೌರ್ ಪಂಜಾಬಿ ಪ್ರಾದೇಶಿಕ ಸಂಗೀತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಂತ ವೇಗವಾಗಿ ಜನಪ್ರಿಯತೆ ಗಳಿಸುತ್ತಿದ್ದ ಗಾಯಕಿಯಾಗಿದ್ದರು. ಅವರ ‘ಸೋನೆ ದಿ ಚಿರ್ಹಿ’, ‘ಜಿಜಾ’, ‘ಸೋಹ್ನಾ ಲಗ್ಡಾ’ ಮತ್ತು ‘ದೇಸಿ ಸಿರ್ರೆ ದಾ ಮುಂತಾದ’ ಹಾಡುಗಳು ಹಿಟ್ ಆಗಿದ್ದವು.


