ಬೆಂಗಳೂರು : ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ದಾಖಲಾದ ಎಫ್ಐಆರ್ ರದ್ದು ಪಡಿಸಲು ಹೈಕೋರ್ಟ್ ನಿರಾಕರಣೆ. ಬಿಗಿ ಆಯ್ತಾ ಕಾನೂನಿನ ಕುಣಿಕೆ.!

ಮೂಡಬಿದ್ರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರು ಮಹಿಳೆಯರಿಗೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರವೆಸಗಿದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಮಾರ್ಚ್ 2026 ರಲ್ಲಿ ಅಮಾನತುಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮಹಿಳೆಯರು ನೀಡಿದ ದೂರುಗಳ ಆಧಾರದ ಮೇಲೆ ಕೇಸ್ ದಾಖಲಾಗಿದ್ದು, ಅತ್ಯಾಚಾರ ಆರೋಪದ ಎಫ್ಐಆರ್ (FIR) ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ…
ಅಶ್ವಸೂರ್ಯ/ಬೆಂಗಳೂರು : ಶಾಲೆಯೊಂದರ ಮುಖ್ಯ ಶಿಕ್ಷಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಅಮಾನತುಗೊಂಡ ಮೂಡುಬಿದಿರೆಯ ಇನ್ಸ್ಪೆಕ್ಟರ್ ಪಿ.ಜಿ. ಸಂದೇಶ್ ಮತ್ತು ಇತರ ಇಬ್ಬರ ವಿರುದ್ಧದ ಎಫ್ಐಆರ್ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ವಿಚಾರಣೆ ವೇಳೆ ನ್ಯಾಯಾಲಯವು, “ಪೊಲೀಸ್ ಅಧಿಕಾರಿಯಾಗಿ ನೀವು ಹೀಗೆಲ್ಲಾ ಮಾಡುವಂತಿಲ್ಲ” ಎಂದು ಮೌಖಿಕವಾಗಿ ತರಾಟೆಗೆ ತೆಗೆದುಕೊಂಡಿದೆ.
ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಂದೇಶ್, ಉಡುಪಿಯ ಸ್ಮಿತಾ ಪೂರ್ಣಿಮಾ ಆರ್. ಮಲ್ಯ ಮತ್ತು ಮಂಗಳೂರಿನ ಸುನೀತಾ ಲೋಬೊ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ನಡೆಸಿತು. ಪ್ರಕರಣ ರದ್ದತಿಗೆ ನ್ಯಾಯಾಲಯ ಸ್ಪಷ್ಟವಾಗಿ ನಿರಾಕರಿಸಿದ ಹಿನ್ನೆಲೆಯಲ್ಲಿ, ಅರ್ಜಿದಾರರ ಪರ ವಕೀಲರು ಅರ್ಜಿಯನ್ನು ಹಿಂಪಡೆದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು ಕೃತ್ಯ ನಡೆದ ಮೂರು ವರ್ಷಗಳ ನಂತರ ದೂರು ನೀಡಲಾಗಿದೆ. ಇದು ಇನ್ಸ್ಪೆಕ್ಟರ್ ಸಂದೇಶ್ ಅವರನ್ನು ಸಿಲುಕಿಸಲು ಮಾಡಿರುವ ಪಿತೂರಿ ಎಂದರು.
ಅಲ್ಲದೆ, ಅರ್ಜಿದಾರರು ಪೊಲೀಸ್ ಅಧಿಕಾರಿಯಾಗಿದ್ದಾರೆ. ದೂರುದಾರೆಯು ಖಾಸಗಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದಾರೆ. ದೂರುದಾರೆ ಮಾಡಿರುವ ಆರೋಪಗಳ ಮಾದರಿಯನ್ನು ಜನಸಾಮಾನ್ಯರು ನಂಬುವಂತಿಲ್ಲ ಎಂದರು.
ಇದಕ್ಕೆ ಪೀಠ, ಜನಸಾಮಾನ್ಯರು ನಂಬುವುದಿಲ್ಲ. ಅಸಮಾನ್ಯರು ನಂಬುತ್ತಾರೆ ಬಿಡಿ. ಅರ್ಜಿದಾರರ ವಿರುದ್ಧ ಪದೇ ಪದೇ ಅತ್ಯಾಚಾರ ಮಾಡಿರುವ ಆರೋಪವಿದೆ. ಇನ್ಸ್ಪೆಕ್ಟರ್ ಸಂದೇಶ್ ಬಿಟ್ಟು, ಉಳಿದ ಇಬ್ಬರು ಮಹಿಳಾ ಅರ್ಜಿದಾರರ ಮೇಲೆ ಏನು ಆರೋಪವಿದೆ? ಎಂದು ಕೇಳಿತು.
ಸಂತ್ರಸ್ತೆಯ ಹೇಳಿಕೆಯೇ ಪ್ರಕರಣದ ಗಂಭೀರತೆಗೆ ಸಾಕ್ಷಿ. ಮೊದಲ ಅರ್ಜಿದಾರರು ಪೊಲೀಸ್ ಅಧಿಕಾರಿಯಾಗಿದ್ದು, ತನಿಖೆ ನಡೆಯಲೇಬೇಕು ಎಂದು ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಪ್ರತಿಪಾದಿಸಿದರು.
ಸಂತ್ರಸ್ತೆ ಪರ ವಕೀಲರ ವಾದ: ಆರೋಪಿಗಳು ಸಂತ್ರಸ್ತೆಗೆ ಜೀವ ಬೆದರಿಕೆ ಹಾಕಿದ್ದಾರೆ. ಇಬ್ಬರು ಮಹಿಳೆಯರು ದೂರು ಹಿಂಪಡೆಯುವಂತೆ ಹೆದರಿಸಿದ್ದಾರೆ. ಈಗಾಗಲೇ 800ಕ್ಕೂ ಹೆಚ್ಚು ಆಡಿಯೋ ರೆಕಾರ್ಡಿಂಗ್ಗಳು ಮತ್ತು ₹13 ಲಕ್ಷ ಹಣ ವರ್ಗಾವಣೆಯ ದಾಖಲೆಗಳು ಲಭ್ಯವಿವೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

2018 ರಿಂದ 2023ರ ವರೆಗೆ ವಿವಿಧ ಪ್ರಕರಣಗಳ ಭಯ ಹುಟ್ಟಿಸಿ, ಕುಟುಂಬದವರಿಗೆ ತೊಂದರೆ ನೀಡುವುದಾಗಿ ಬೆದರಿಸಿ ಇನ್ಸ್ಪೆಕ್ಟರ್ ಸಂದೇಶ್ ಸತತವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಮುಖ್ಯ ಶಿಕ್ಷಕಿ ದೂರು ನೀಡಿದ್ದರು. ಜೀವ ಭಯದಿಂದ ಇಷ್ಟು ದಿನ ಮೌನವಾಗಿದ್ದೆ ಎಂದು ಅವರು ಹೇಳಿದ್ದಾರೆ. ವೇಣೂರು ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 376(2)(ಎ)(1), 384 ಮತ್ತು 506 ರಡಿ ಪ್ರಕರಣ ದಾಖಲಾಗಿದೆ.
ಸದ್ಯ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದ್ದು, ಸಂದೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. “ತನಿಖೆಯ ನೆಪದಲ್ಲಿ ಕಿರುಕುಳ ನೀಡದಂತೆ ಆದೇಶಿಸಬೇಕು” ಎಂಬ ಅರ್ಜಿದಾರರ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.


