ಧಾರವಾಡ : ಕಾರಿನಲ್ಲಿ ಸುಟ್ಟು ಕರಕಲಾದ ಶಾಸಕರ ಮಗನ ಶವ ಪತ್ತೆ.! ಕೊಲೆ ಶಂಕೆ.?
news.ashwasuryain
ಅಶ್ವಸೂರ್ಯ/ಧಾರವಾಡ :ಧಾರವಾಡದ ರಾಮಾಪುರ ಗ್ರಾಮದ ರೈಲ್ವೆ ಹಳಿಯ ಬಳಿಯಲ್ಲಿ ಪತ್ತೆಯಾದ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು ಇದು ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ ಅವರ ಮೃತದೇಹ ಎಂದು ಗುರುತಿಸಿದ್ದು (Raju Bolashetty) ಅವರನ್ನು ಕೊಲೆ ಮಾಡಿ ಮೃತದೇಹವನ್ನು ಕಾರಿನೊಳಗೆ ಹಾಕಿ ಸಟ್ಟುಹಾಕಿರುವ ಶಂಕೆ ವ್ಯಕ್ತವಾಗಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ (Baburao Bolashetty) ಅವರ ಪುತ್ರ ರಾಜು ಬೋಳಶೆಟ್ಟಿ ಅವರ ಕಾರು ರಾಮಾಪುರದ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಪತ್ತೆಯಾಗಿದೆ. ಕಾರಿನಲ್ಲಿದ್ದ ಮೃತದೇಹ ಪತ್ತೆಯಾಗಿದ್ದು, ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಮಧ್ಯೆ ನಿನ್ನೆಯಿಂದ ರಾಜು ಬೋಳಶೆಟ್ಟಿ ಅವರು ನಾಪತ್ತೆಯಾಗಿರುವುದರಿಂದ ಕಿಡಿಗೇಡಿಗಳು ರಾಜು ಬೋಳಶೆಟ್ಟಿ ಅವರನ್ನು ಕೊಲೆಗೈದು, ಕಾರಿನಲ್ಲಿ ಹಾಕಿ ಸುಟ್ಟುಹಾಕಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಬೇರೆಡೆ ಕೊಲೆ ಮಾಡಿ, ರೈಲ್ವೆ ಹಳಿ ಬಳಿ ತಂದು ಅವರದೆ ಕಾರಿನಲ್ಲಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಶವ ಸುಟ್ಟಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಎಸ್ಪಿ ಗುಂಜನ್ ಆರ್ಯ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮಾಜಿ ಶಾಸಕರ ಪುತ್ರನ ಕೊಲೆ ಶಂಕೆ.?
ಕಾರಿನಲ್ಲಿರುವ ಶವ ಸಂಪೂರ್ಣ ಸುಟ್ಟು ಬೂದಿ ಆಗಿರುವುದರಿಂದ ಮೃತದೇಹ ಯಾರದ್ದು ಅನ್ನೋ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ಬೆರಳಚ್ಚು ತಂತ್ರಜ್ಞರ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದು ಪೊಲೀಸರು ಇಂಚಿಂಚೂ ಮಾಹಿತಿ ಕಲೆಹಾಕುತ್ತಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ಸಂಪೂರ್ಣ ವರದಿ ಬಳಿಕವೇ ಪೊಲೀಸರು ಖಚಿತ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

ರೈತನಾಗಿದ್ದ ರಾಜು.
ಸದ್ಯ ಕೊಲೆಯಾಗಿದ್ದಾರೆ ಎನ್ನಲಾಗುತ್ತಿರುವ ರಾಜು ಬೋಳಶೆಟ್ಟಿ ಅವರು ರಾಜಕೀಯದಲ್ಲಿ ಇರದೇ ಪ್ರಗತಿಪರ ರೈತನಾಗಿ ಗುರುತಿಸಿಕೊಂಡಿದ್ದರು. ಗ್ರಾಮದಲ್ಲಿ ಯಾರೊಂದಿಗೂ ವೈಷ್ಯಮವಿರಲಿಲ್ಲ. ಎಲ್ಲರೊಂದಿಗೆ ಆತ್ಮಿಯವಾಗಿದ್ದರು, ಗ್ರಾಮದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದರು. ಈ ಶವ ಅವರದ್ದಾ ಅಥವಾ ಬೇರೆಯವರದ್ದಾ ಎನ್ನುವುದು ನಿಗೂಢವಾಗಿದ್ದು ತನಿಖೆಯಿಂದ ತಿಳಿಯಬೇಕಿದೆ. ಆದರೆ ಕಾರು ಮಾತ್ರ ರಾಜು ಅವರದ್ದೇ ಎಂದು ರಾಜು ಸ್ನೇಹಿತ ಶ್ರೀಧರ್ ಹೇಳಿಕೆ ನೀಡಿದ್ದು ತನಿಖೆ ಚುರುಕು ಗೊಂಡಿದೆ.


