ದಾವಣಗೆರೆ ಉಪಚುನಾವಣೆ : ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿ, ಎಸ್ಟಿ ಸಮುದಾಯದ ಶ್ರೀನಿವಾಸಗೆ ಟಿಕೆಟ್.!
news.ashwasurya.in

ರಾಜ್ಯದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ನಿರೀಕ್ಷೆಯಂತೆ ಬಾಗಲಕೋಟೆಗೆ ವೀರಣ್ಣ ಚರಂತಿಮಠಗೆ ಟಿಕೆಟ್ ನೀಡಲಾಗಿದ್ದು, ದಾವಣಗೆರೆ ದಕ್ಷಿಣಕ್ಕೆ ಶ್ರೀನಿವಾಸ ದಾಸಕರಿಯಪ್ಪ ಅವರನ್ನ ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ....
ಅಶ್ವಸೂರ್ಯ/ಬೆಂಗಳೂರು : ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಘೋಷಣೆ ಮಾಡಿರುವ ಬಿಜೆಪಿ ಹೈ ಕಮಾಂಡ್ ಬಾಗಲಕೋಟೆ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರನ್ನು ಕಣಕ್ಕೆ ಇಳಿಸಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಶ್ರೀನಿವಾಸ ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡುವ ಮೂಲಕ ಅಚ್ಚರಿ ಮೂಡಿಸಿದೆ ಮತ್ತು ಈ ಕ್ಷೇತ್ರದಲ್ಲಿ ದೊಡ್ಡ ಚರ್ಚೆಯೆ ಶುರುವಾಗಿದೆ.

ಕಳೆದ ವಾರ ನಡೆದ ಬಿಜೆಪಿಯ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಬಾಗಲಕೋಟೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಚ್ಚು ಚರ್ಚೆ ನಡೆದಿರಲಿಲ್ಲ. ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ್ ಅವರ ಹೆಸರು ಪ್ರಸ್ತಾಪವಾಗಿದ್ದರೂ ಅಂತಿಮವಾಗಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಮಣೆ ಹಾಕಲಾಯಿತು. ಆದರೆ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೋರ್ ಕಮಿಟಿ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬಣಗಳ ನಡುವೆ ಪೈಪೋಟಿ ಆರಂಭವಾಗಿತ್ತು. ಕಳೆದ ಬಾರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲುಂಡಿದ್ದ ಬಿ.ಜಿ.ಅಜಯ್ ಕುಮಾರ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ರೇಣುಕಾಚಾರ್ಯ ಸೇರಿದಂತೆ ಅವರ ಬಣದ ಮುಖಂಡರು ದೆಹಲಿಗೆ ತೆರಳಿ ಲಾಬಿ ನಡೆಸಿದ್ದರೂ ಪ್ರಯೋಜನ ಆಗಲಿಲ್ಲ. ಅಂತಿಮವಾಗಿ ಸಿದ್ದೇಶ್ವರ ಬೆಂಬಲಿಗರೂ ಆಗಿರುವ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಿದೆ.
ಮಾಹಿತಿ ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್ ಪದವೀಧರ ಆಗಿರುವ ಶ್ರೀನಿವಾಸ್ ಅವರು ರಾಜಕೀಯ ಹಿನ್ನೆಲೆಯ ಕುಟುಂಬಕ್ಕೆ ಸೇರಿದವರು. ಅವರ ತಂದೆ ದಾಸಕರಿಯಪ್ಪ ಅವರು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಉಭಯ ಬಣಗಳ ನಡುವೆ ಭಿನ್ನಾಭಿಪ್ರಾಯವೂ ಬಹಿರಂಗವಾಗಿ ನಿವಾರಣೆ ಆದಂತಾಗಿದ್ದು, ಶ್ರೀನಿವಾಸ್ ಅವರ ಆಯ್ಕೆಯನ್ನು ಸ್ವಾಗತಿಸಿದ್ದಾರೆ.ಒಟ್ಟಾರೆ ಈ ಬಾರಿಯ ಉಪಚುನಾವಣೆ ಜಿದ್ದಾಜಿದ್ದಿನ ಚುನಾವಣೆಯಾಗಲಿದೆ.

ಪ್ರಮುಖ ಅಂಶಗಳು :
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಶ್ರೀನಿವಾಸ್ ದಾಸಕರಿಯಪ್ಪ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.
ಪ್ರಮುಖ ವಿವರಗಳು:
ಅಭ್ಯರ್ಥಿಯ ಹಿನ್ನೆಲೆ: ಶ್ರೀನಿವಾಸ್ ದಾಸಕರಿಯಪ್ಪ ಅವರು ಬಿಜೆಪಿ ರಾಜ್ಯ ಎಸ್.ಟಿ ಮೋರ್ಚಾದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾನ್ಯ ಕ್ಷೇತ್ರವಾದ ದಾವಣಗೆರೆ ದಕ್ಷಿಣದಲ್ಲಿ ಪರಿಶಿಷ್ಟ ಪಂಗಡದ (ST) ಸಮುದಾಯದ ಯುವ ನಾಯಕನಿಗೆ ಬಿಜೆಪಿ ಮಣೆ ಹಾಕಿದೆ.
ನಾಮಪತ್ರ ಸಲ್ಲಿಕೆ:
ಶ್ರೀನಿವಾಸ್ ಅವರು ಮಾರ್ಚ್ 20, 2026 ರಂದು ಸಾಂಕೇತಿಕವಾಗಿ ತಮ್ಮ ಮೊದಲ ಸೆಟ್ ನಾಮಪತ್ರವನ್ನು ಸಲ್ಲಿಸಿದರು. ಮಾರ್ಚ್ 23 ರಂದು ಬೃಹತ್ ಮೆರವಣಿಗೆಯ ಮೂಲಕ ಮತ್ತೊಮ್ಮೆ ನಾಮಪತ್ರ ಸಲ್ಲಿಸಲು ಉದ್ದೇಶಿಸಿದ್ದಾರೆ.
ರಾಜಕೀಯ ಸನ್ನಿವೇಶ:
ಪಕ್ಷದಲ್ಲಿನ ಬಣ ರಾಜಕಾರಣಕ್ಕೆ ಬ್ರೇಕ್ ಹಾಕಿ, ಹೊಸ ಸಾಮಾಜಿಕ ಸಮೀಕರಣದ ಮೂಲಕ ಗೆಲುವು ಸಾಧಿಸಲು ಬಿಜೆಪಿ ಈ ತಂತ್ರ ರೂಪಿಸಿದೆ. ಕಾಂಗ್ರೆಸ್ನಿಂದ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ ಶಾಮನೂರು ಅವರು ಕಣಕ್ಕಿಳಿದಿದ್ದು, ಇಬ್ಬರ ನಡುವೆ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.
ಅಭ್ಯರ್ಥಿಯ ಪ್ರತಿಕ್ರಿಯೆ:
ಟಿಕೆಟ್ ಘೋಷಣೆಯಾದಾಗ ಮಾರುಕಟ್ಟೆಯಲ್ಲಿದ್ದ ಶ್ರೀನಿವಾಸ್ ಅವರು, ಪಕ್ಷವು ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಅವಕಾಶ ನೀಡಿದ್ದಕ್ಕಾಗಿ ಹಿರಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.


