ಭದ್ರಾವತಿ : ವಿಧವೆ ಮಹಿಳೆಗೆ ಪೊಲೀಸಪ್ಪನ ಟಾರ್ಚರ್ ಪ್ರಕರಣ : ಪೇದೆ ವಿರುದ್ಧ FIR ದಾಖಲು.

news.ashwasurya.in
ಅಶ್ವಸೂರ್ಯ/ಶಿವಮೊಗ್ಗ: ಪೊಲೀಸ್ ಪೇದೆಯೊಬ್ಬನ ಕಾಟಕ್ಕೆ, ಅಪಪ್ರಚಾರಕ್ಕೆ ಮನನೊಂದು ವಿಧವೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪೇದೆ ಮೋಹನನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಪೊಲೀಸ್ ಪೇದೆ ಮೋಹನನ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಆಕೆಗೆ ನಿರಂತರ ತೊಂದರೆ ನೀಡಿದ್ದ ಮೋಹನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಮಹಿಳೆಯ ಪತಿ ಕೂಡ ವಿಧವೆ ಮಹಿಳೆ ಆತ್ಮಹತ್ಯೆಗೆ ಶರಣಾಗುವ ಒಂದುವಾರದ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವಿಗೆ ಶರಣಾಗಿದ್ದರು.! ಈಗ ಆತನ ಪತ್ನಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದು ಈ ದಂಪತಿಗಳ ಇಬ್ಬರು ಪುಟ್ಟ ಹೆಣ್ಣು ಮಕ್ಕಳು ಅನಾಥರಾಗಿದ್ದಾರೆ.
ಮೃತ ಮಹಿಳೆಯ ತಾಯಿ ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪೋಲಿಸ್ ಪೇದೆ ಮೋಹನನ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಮೋಹನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಫೇಸ್ಬುಕ್ ಹಾಗೂ ಮೆಸೇಂಜರ್ ಮೂಲಕ ತನ್ನ ಮಗಳಿಗೆ ನಿರಂತರವಾಗಿ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ. ಬ್ಲಾಕ್ ಮಾಡಿದರೂ ಬೇರೆ ಖಾತೆಗಳಿಂದ ಸಂಪರ್ಕಿಸುತ್ತಿದ್ದ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದ. ಒಂದು ಜವಬ್ದಾರಿಯುತ ಹುದ್ದೆಯಲ್ಲಿದ್ದರು ನೀಚತನಕ್ಕೆ ಇಳಿದು ನನ್ನ ಮಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ತೊಂದರೆ ಕೊಟ್ಟಿದ್ದಾನೆ ಈತನ ಅಪಪ್ರಚಾರ, ಕಿರುಕುಳಕ್ಕೆ ನೊಂದು ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ತಾಯಿ ಉಲ್ಲೇಖಿಸಿದ್ದಾರೆ. ಅಲ್ಲದೇ ಮಗಳಿಗೆ ಬೆದರಿಕೆಯನ್ನೂ ಹಾಕಿದ್ದ ಎಂದು ಆರೋಪಿಸಿದ್ದಾರೆ.

ಇನ್ನೂ ಆರೋಪಿ ಪೇದೆ ಮೋಹನ್ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದ್ದು ಹಾಗೂ ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿ ಮೋಹನ್ ವಿರುದ್ಧ ಹಲವು ಆರೋಪಗಳಿವೆ. ಮೋಹನ್ ಈ ಹಿಂದೆ ಭದ್ರಾವತಿ ನ್ಯೂಟೌನ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಲ್ಲಿ ಅಶಿಸ್ತು ತೋರಿದ ಹಿನ್ನೆಲೆಯಲ್ಲಿ ಆತನನ್ನು ತೀರ್ಥಹಳ್ಳಿ ತಾಲೂಕಿನ ಮಾಳೂರು ಠಾಣೆಗೆ ವರ್ಗಾವಣೆ ಮಾಡಿದ್ದರಂತೆ.? ಸಾಮಾಜಿಕ ಜಾಲತಾಣಗಳ ಮೂಲಕ ಇನ್ನೂ ಹಲವು ಮಹಿಳೆಯರಿಗೆ ಕಿರುಕುಳ ನೀಡಿದ್ದಾನೆ ಎಂಬ ಆರೋಪಗಳೂ ಕೇಳಿ ಬಂದಿವೆ. ಅಲ್ಲದೇ ನಗರದಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದನೆಂಬ ದೂರುಗಳೂ ಕೂಡ ಈತನ ವಿರುದ್ಧ ದಾಖಲಾಗಿವೆ.
ಒಟ್ಟಿನಲ್ಲಿ ಒಂದು ಜವಬ್ದಾರಿಯುತ ಕರ್ತವ್ಯದಲ್ಲಿದ್ದು ತನ್ನ ಜವಾಬ್ದಾರಿಯನ್ನು ಮರೆತು ಹೆಣ್ಣುಮಕ್ಕಳಿಗೆ ತೊಂದರೆ ಕೊಡುವ ಇಂತವರಿಗೆ ಸರಿಯಾದ ಶಿಕ್ಷೆಯಾಗಬೇಕಿದೆ ಎಂದು ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಕೂಗು ಕೇಳಿಬರುತ್ತಿದೆ..


