Ind vs Pak; ಮಗನ ಬ್ಯಾಟಿಂಗ್ ನೋಡಿ ಹೆತ್ತ ಕರಳು ಭಾವುಕ..! ಮನೆಯಲ್ಲೇ ಟಿವಿ ನೋಡುತ್ತಾ ಕಣ್ಣೀರು ಹಾಕಿದ ಕಿಶನ್ ತಾಯಿ.!
news.ashwasurya.in
ಅಶ್ವಸೂರ್ಯ/ಪಾಟ್ನಾ : ಇಶಾನ್ ಕಿಶನ್ ಸತತ ಎರಡು ವರ್ಷಗಳಿಂದ ಹೊರಗುಳಿದ ಬಳಿಕ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು ಮಾತ್ರ ಅದೃಷ್ಟವೇ ಸರಿ. ಬಿಗ್ ಕಮ್ಬ್ಯಾಕ್ ಮಾಡಿರುವ ಯುವ ವಿಕೆಟ್ ಕೀಪರ್ ಪಾಕಿಸ್ತಾನ ವಿರುದ್ಧ ಸಿಡಿದು ನಿಂತು ಅರ್ಧಶತಕ ಬಾರಿಸಿ ಗೆಲುವಿಗೆ ಕಾರಣರಾಗಿದ್ದಾರೆ. ಮಗ ಬ್ಯಾಟಿಂಗ್ ಮಾಡುವಾಗ ತಾಯಿ ಸುಚಿತ್ರಾ ಸಿಂಗ್ ಮನೆಯಲ್ಲಿ ಟಿವಿ ನೋಡುತ್ತಾ ಅವರು ಕಣ್ಣೀರು ಹಾಕಿದ್ದಾರೆ.
ಇಶಾನ್ ಕಿಶನ್ ವೈಯಕ್ತಿಕ ಕಾರಣದಿಂದ ಭಾರತ ತಂಡದಿಂದ ಹೊರಗುಳಿದಿದ್ದರು. ಬಳಿಕ ತಂಡವನ್ನು ಸೇರಿಕೊಳ್ಳಲು ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಏಕೆಂದರೆ ಟೀಮ್ ಇಂಡಿಯಾದಿಂದ ಹೊರಗಿದ್ದ ಇಶಾನ್ ಕಿಶನ್ ಕುಗ್ಗಿ ಹೋಗಿದ್ದರು. ಇದರಿಂದ ಮನನೊಂದಿದ್ದ ಅವರ ತಾಯಿ ನಿತ್ಯ ಕಣ್ಣೀರು ಹಾಕಿದ್ದು ಇದೆ.

ಟೀಮ್ ಇಂಡಿಯಾದ ಯಂಗ್ ವಿಕೆಟ್ ಕೀಪರ್ ಇಶಾನ್ ಕಿಶನ್ 2024ರ ಆರಂಭದಿಂದ ಡಿಸೆಂಬರ್ 2025 ರವರೆಗೆ ಭಾರತ ತಂಡದಿಂದ ಹೊರಗಿದ್ದರು. ಅಲ್ಲದೇ ಬಿಸಿಸಿಐನ ಕಾಂಟ್ರಾಕ್ಟ್ ಪಟ್ಟಿಯಿಂದ ತೆಗೆದು ಹಾಕಲಾಗಿತ್ತು. ಇದರಿಂದ ಇಶಾನ್ ಕುಟುಂಬ ಆರ್ಥಿಕ ಸಂಕಷ್ಟದಿಂದ ಬಳಲಿತ್ತು ಎಂದು ಹೇಳಬಹುದು.
2025ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿನ ಅತ್ಯುತ್ತಮ ಪ್ರದರ್ಶನದ ನಂತರ ಇಶಾನ್ ಕಿಶನ್ 2026ರ T20 ವಿಶ್ವಕಪ್ ತಂಡಕ್ಕೆ ಮರಳಿದಾಗ ಇಶಾನ್ ಕಿಶನ್ ತಾಯಿ ಕಣ್ಣೀರು ಹಾಕುತ್ತಾ, ದೇವರು ನಮಗೆ ಆಶೀರ್ವಾದ ಮಾಡಿದ್ದಾನೆ ಎಂದು ಭಾವುಕರಾಗಿ ನುಡಿದಿದ್ದರು.
ತಾಯಿ ಆಸೆ ಕೊನೆಗೆ ಫಲಿಸಿದೇ ಎನ್ನಬಹುದು. ಏಕೆಂದರೆ ಭಾರತ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿದಾಗ ಹೊಡಿಬಡಿ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್ ಪಾಕಿಸ್ತಾನದ ಬೌಲರ್ಗಳನ್ನು ಧೂಳೀಪಟ ಮಾಡಿದರು.ಕ್ರೀಡಾಂಗಣದ ಮೂಲೆ ಮೂಲೆಗೆ ಸಿಕ್ಸರ್, ಬೌಂಡರಿ ಸಿಡಿಸಿ ತಂಡಕ್ಕೆ ದೊಡ್ಡ ಕೊಡುಗೆ ನೀಡಿದರು.

ಶ್ರೀಲಂಕಾದ ಆರ್ ಪ್ರೇಮದಾಸ ಕ್ರೀಡಾಂಗಾಣದಲ್ಲಿ ನೆಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್, ಕೇವಲ 40 ಬಾಲ್ಗಳಲ್ಲಿ 10 ಬೌಂಡರಿ ಹಾಗೂ 3 ಅಮೋಘವಾದ ಸಿಕ್ಸರ್ಗಳಿಂದ 77 ರನ್ ಬಾರಿಸಿದರು. ತಂಡದಲ್ಲಿ ಅರ್ಧದಷ್ಟು ರನ್ ಇಶಾನ್ ಕಿಶನ್ ಗಳಿಸಿರುವುದು ವಿಜಯಕ್ಕೆ ಸುಲಭವಾಯಿತು.

ಪಂದ್ಯದಲ್ಲಿ ಅತ್ಯುತ್ತಮ ಪರ್ಫಾಮೆನ್ಸ್ ನೀಡಿ, ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್ ಪ್ಲೇಯರ್ ಆಫ್ ದೀ ಮ್ಯಾಚ್ ಪ್ರಶಸ್ತಿಯನ್ನು ಪಡೆದುಕೊಂಡರು. ಬಳಿಕ ಮಾತನಾಡಿ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಬ್ಯಾಟಿಂಗ್ ಮಾಡಿದೆ ಎಂದು ಹೇಳಿದ್ದಾರೆ.

ಮಗನ ಬ್ಯಾಟಿಂಗ್ ಅನ್ನು ಮನೆಯಲ್ಲಿಯೇ ಕುಳಿತು ನೋಡಿದ ತಾಯಿ ಸುಚಿತ್ರಾ ಸಿಂಗ್ ಅವರು ಕಣ್ಣೀರು ಹಾಕಿದ್ದಾರೆ. ಮಹಾಶಿವರಾತ್ರಿಯ ದಿನ ನನ್ನ ಮಗ ಚೆನ್ನಾಗಿ ಆಡಲಿ ಎಂದು ಶಿವರಾತ್ರಿಯ ದಿನ ಶಿವನ ಮೊರೆ ಹೋಗಿದ್ದ ತಾಯಿ ಪ್ರಾರ್ಥನೆ ದೇವರಿಗೆ ಮುಟ್ಟಿದೆ. ಸದ್ಯ ಸುಚಿತ್ರಾ ಸಿಂಗ್ ಅವರು ಭಾವುಕರಾಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.


