SHIVAMOGGA : ನಟೋರಿಯಸ್ ರೌಡಿಶೀಟರ್ ಡಿಚ್ಚಿ ಮುಬಾರಕ್ ಮೇಲೆ ಫೈರಿಂಗ್.!
news.ashwasurya.in
ಅಶ್ವಸೂರ್ಯ/ ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಪೊಲೀಸರ ರಿವಲ್ವಾರ್ ಸದ್ದುಮಾಡಿದೆ.! ದರೋಡೆಗೆ ಹೊಂಚು ಹಾಕಿದ್ದ ರೌಡಿಶೀಟರ್ ಡಿಚ್ಚಿ ಮುಬಾರಕ್ ಕಾಲಿಗೆ ಪೊಲೀಸರು ಗುಂಡು ತೂರಿಸಿದ್ದಾರೆ.
ಶಿವನಿ ಕ್ರಾಸ್ ಬಳಿ ದರೋಡೆಗೆ ಹೊಂಚು ಹಾಕಿದ ವೇಳೆ ಪೊಲೀಸರು ದಾಳಿ ಮಾಡಿದ್ದು, ಬಂಧಿಸಲು ಮುಂದಾದಾಗ ಪೊಲೀಸರ ಮೇಲೆಯೇ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಡಿಚ್ಚಿ ಮುಬಾರಕ್ ಮತ್ತು ಆತನ ಏಳೆಂಟು ಮಂದಿ ಸಹಚರರು ದರೋಡೆಗೆ ಹೊಂಚು ಹಾಕಿ ರಸ್ತೆಯಲ್ಲಿ ಕಾಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ.
ಭದ್ರಾವತಿಯ ಹೊಸಮನೆ ಮತ್ತು ನ್ಯೂಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಮುಬಾರಕ್ ಮತ್ತು ಸಹಚರರು ಪಿಎಸ್ಐ ಸೇರಿದಂತೆ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದು, ಸ್ವಯಂ ರಕ್ಷಣೆಗಾಗಿ ಫೈರಿಂಗ್ ಮಾಡಲಾಗಿದೆ.
ಶರಣಾಗುವಂತೆ ಪೊಲೀಸರು ಎಷ್ಟೇ ಹೇಳಿದರೂ ಆರೋಪಿಗಳು ದಾಳಿ ಮಾಡಿ ಹಲ್ಲೆ ನಡೆಸಿದಾಗ ಪಿಎಸ್ಐ ಕೃಷ್ಣಕುಮಾರ್ ಬಿ. ಮಾನೆ ಸರ್ವಿಸ್ ಪಿಸ್ತೂಲ್ ನಿಂದ ಕಾಲಿಗೆ ಗುಂಡು ಹಾರಿಸಿದ್ದಾರೆ. ಡಿಚ್ಚಿ ಮುಬಾರಕ್ ಸಹಚರರಾದ ಜಹೀರ್, ರೆಹಮತ್ ಪಾಷಾ, ಜುನೈದ್, ಮನು ಸಿಂಗ್ ಅವರನ್ನು ವಶಕ್ಕೆ ಪಡೆಯಲಾಗಿದೆ.

ಪಿಎಸ್ಐಗಳಾದ ಎಂ.ಪಿ. ಸಿದ್ದಪ್ಪ ಅವರ ಕಾಲಿನ ಮೂಳೆ ಮುರಿದಿದ್ದು ಚಾಕುವಿನಿಂದ ಕೈಗೆ ತಿವಿದು ಕೊಲೆ ಮಾಡಲು ಯತ್ನಿಸಿದ್ದರಿಂದ ಬಲವಾದ ಗಾಯವಾಗಿದೆ. ಕೃಷ್ಣಕುಮಾರ್ ಮಾನೆ ಅವರ ಕೈ ಬೆರಳು ಮುರಿದಿದೆ. ಸಿಬ್ಬಂದಿ ಆದರ್ಶ ಅವರ ಕಾಲಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



