ಶಿವಮೊಗ್ಗ : ಗಣರಾಜ್ಯೋತ್ಸವ ದಿನಾಚರಣೆ ಅದ್ದೂರಿ ಆಚರಣೆಗೆ ಸಕಲ ಸಿದ್ದತೆ : ಪ್ರಭುಲಿಂಗ ಕವಳಿಕಟ್ಟಿ.

news.ashwasurya.in
ಅಶ್ವಸೂರ್ಯ/ ಶಿವಮೊಗ್ಗ : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಜನವರಿ 26 ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ ಗಣರಾಜ್ಯೋತ್ಸವ ದಿನಾಚರಣೆಗೆ ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಷ್ಟಾಚಾರದಂತೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಹಾಗೂ ಗಣ್ಯರನ್ನು ಆಹ್ವಾನಿಸಲಾಗುವುದು. ಜನವರಿ 26 ರಂದು ಬೆಳಿಗ್ಗೆ 09 ಗಂಟೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಧ್ವಜಾರೋಹಣ ನೆರವೇರಿಸಿ, ಜಿಲ್ಲೆಯ ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡಿ, ಧ್ವಜವಂದನೆ ಸ್ವೀಕರಿಸುವರು. ನಂತರ ಪೊಲೀಸ್, ಹೋಂ ಗಾರ್ಡ್, ಬಾಲಮಂದಿರದ ಮಕ್ಕಳು, ಪಾಲಿಕೆ ಸಿಬ್ಬಂದಿ, ಸ್ಕೌಟ್ಸ್ & ಗೈಡ್ಸ್, ಸೇವಾದಳ, ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಲಿದೆ. ನಂತರ ಶಾಲಾ ಮಕ್ಕಳ ಸಾಮೂಹಿಕ ನೃತ್ಯ ಕಾರ್ಯಕ್ರಮಗಳು ನಡೆಯಲಿದ್ದು, ಅಂದು ಸಂಜೆ 6 ರಿಂದ 9ರವರೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಗಣರಾಜ್ಯೋತ್ಸವದ ಅಂಗವಾಗಿ ನಗರದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ, ನಗರದ ಪ್ರಮುಖ ರಸ್ತೆ, ವರ್ತುಲಗಳಲ್ಲಿ ತಳಿರು-ತೋರಣ ಮತ್ತು ವಿದ್ಯುದ್ದೀಪಗಳಿಂದ ಅಲಂಕರಿಸುವಂತೆ ಆಯಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲು ಹಲವು ಸಮಿತಿಗಳನ್ನು ರಚಿಸಲಾಗಿದ್ದು, ಹಲವು ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಉಸ್ತುವಾರಿಗಾಗಿ ನಿಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ನೋಡಿಕೊಳ್ಳಲು ಕ್ರೀಡಾಂಗಣದ ವೇದಿಕೆ ಆವರಣ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಸೂಕ್ತ ಪೊಲೀಸ್ ಭದ್ರತೆ ಮತ್ತು ಟ್ರಾಫಿಕ್ ವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದರು.
ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ, ವಿತರಿಸಲು ಕ್ರಮವಹಿಸುವಂತೆ ಅಪರ ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು, ಜಿ.ಪಂ ಉಪಕಾರ್ಯದರ್ಶಿಗಳು ಹಾಗೂ ತಹಶೀಲ್ದಾರರಿಗೆ ತಿಳಿಸಿದರು. ಪೆರೇಡ್ ಹಾಗೂ ಸುತ್ತಮುತ್ತಲಿನ ಜಾಗವನ್ನು ಮುಂಚಿತವಾಗಿ ಸ್ವಚ್ಚಗೊಳಿಸಿ ಸಿದ್ದಗೊಳಿಸುವುದು, ನೀರಿನ ವ್ಯವಸ್ಥೆ, ಆಸನ ವ್ಯವಸ್ಥೆ, ವೇದಿಕೆ ಸಿದ್ದತೆ, ಸೌಂಡ್ ಸಿಸ್ಟಂ, ವೇದಿಕೆ ಅಲಂಕಾರ ಮಾಡುವಂತೆ ಪಾಲಿಕೆ, ಸಶಸ್ತ್ರ ಮೀಸಲು ಪಡೆ, ಲೋಕೋಪಯೋಗಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಕ್ರೀಡಾ ಯುವಜನ ಸಬಲೀಕರಣ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದರು. ಸರ್ಕಾರದ ಸುತ್ತೋಲೆಯಂತೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮತ್ತು ಕಚೇರಿಗಳಲ್ಲಿ ಪ್ರತಿ ವರ್ಷದಂತೆ ಧ್ವಜಾರೋಹಣಕ್ಕೆ ಸಿದ್ದತೆ ಮಾಡಿಕೊಳ್ಳಬೇಕು ಎಂದರು.

ಸ್ವಾಗತ ಕಮಾನು ಸಿದ್ದತೆ, ಸೂಕ್ತ ಪೊಲೀಸ್ ಭದ್ರತೆ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುದೀಪ ಅಲಂಕಾರ ವ್ಯವಸ್ಥೆ, ಆಂಬುಲೆನ್ಸ್, ಅಗ್ನಿಶಾಮಕ ವಾಹನದ ವ್ಯವಸ್ಥೆ, ಮಕ್ಕಳಿಗೆ ಸಿಹಿ ಹಂಚಿಕೆ ಹಾಗೂ ಆಸ್ಪತ್ರೆ ಮತ್ತು ಇತರೆ ಸಂಸ್ಥೆಗಳಲ್ಲಿ ಹಣ್ಣು, ಸಿಹಿ ಹಂಚಿಕೆ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿದರು. ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾದ ಪೆರೇಡ್ ಪ್ರದರ್ಶನದ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದರು. ಧ್ವಜಾರೋಹಣದ ನಂತರ ವಿದ್ಯಾರ್ಥಿಗಳಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಿ, ನಿಗದಿತ ವೇಳೆಯಲ್ಲಿ ಮುಗಿಯುವಂತೆ ಕ್ರಮ ಕೈಗೊಳ್ಳಲು ಡಿಡಿಪಿಐ ಮತ್ತು ಬಿಇಓ ಅವರಿಗೆ ಸೂಚನೆ ನೀಡಿದರು. ಸಂಭ್ರಮಾಚರಣೆಯ ಅಂಗವಾಗಿ ಪಾಲಿಕೆ ಮತ್ತು ಶಿಮುಲ್ ವತಿಯಿಂದ ಗಣ್ಯರು ಮತ್ತು ಸಾರ್ವಜನಿಕರಿಗೆ ಸಿಹಿ ಹಂಚಿಕೆ, ಶಾಲಾ ಮಕ್ಕಳಿಗೆ ಉಪಹಾರ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಸೂಕ್ತ ಸಿದ್ದತೆಗಳನ್ನು ಮಾಡಿಕೊಂಡು ಆಚರಣೆಯನ್ನು ಯಶಸ್ವಿಗೊಳಿಸಬೇಕು ಹಾಗೂ ಅಂದು ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ತಪ್ಪದೇ ಭಾಗವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ, ಕೆಎಸ್ಆರ್ಪಿ ಕಮಾಂಡೆಂಟ್ ಯುವಕುಮಾರ್, ಎಸಿ ಸತ್ಯನಾರಾಯಣ, ಸೂಡಾ ಆಯುಕ್ತರಾದ ವಿಶ್ವನಾಥ ಮುದಜ್ಜಿ, ತಹಶೀಲ್ದಾರ್ ರಾಜೀವ್, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.


